ADVERTISEMENT

ಸೇವೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಪರವಾನಗಿ ರದ್ದು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಂದ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 16:08 IST
Last Updated 5 ಏಪ್ರಿಲ್ 2020, 16:08 IST
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು. ಸಂಸದ ಡಾ.ಉಮೇಶ ಜಾಧವ, ಶಾಸಕ ನಾಗನಗೌಡ ಕಂದಕೂರ ಇದ್ದರು
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು. ಸಂಸದ ಡಾ.ಉಮೇಶ ಜಾಧವ, ಶಾಸಕ ನಾಗನಗೌಡ ಕಂದಕೂರ ಇದ್ದರು   

ಯಾದಗಿರಿ: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕು. ಖಾಸಗಿ ಆಸ್ಪತ್ರೆಗಳು ಸೇವೆ ನೀಡಲು ನಿರಾಕರಿಸಿದರೆ ಅವುಗಳ ಪರವಾನಗಿ ರದ್ದುಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನಾ ಸಭೆ ನಡೆಸಿ, ಅವರು ಮಾತನಾಡಿದರು.

ಶಾಸಕ ರಾಜುಗೌಡ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ತೆರೆಯುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ ಎಂದು ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಗೃಹ ಸಚಿವಾಲಯದ ಆದೇಶದಂತೆ ಖಾಸಗಿ ಆಸ್ಪತ್ರೆಗಳು ತುರ್ತು ಸೇವೆಯಡಿಯಲ್ಲಿ ಬರುತ್ತವೆ. ಖಾಸಗಿ ವೈದ್ಯರು ಸೇವೆ ನೀಡದಿದ್ದರೆ ಸರ್ಕಾರಿ ವೈದ್ಯರ ಮೇಲೆ ಒತ್ತಡ ಹೆಚ್ಚುತ್ತದೆ. ಆದ್ದರಿಂದ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದರು.

ADVERTISEMENT

ಈ ವೇಳೆ ಸಂದರ್ಭದಲ್ಲಿ ಡಾ.ಉಮೇಶ್ ಜಾಧವ ಮಾತನಾಡಿ, ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳ ಪಟ್ಟಿ ಮಾಡಿ ಪ್ರತಿದಿನ ಕಾರ್ಯನಿರ್ವಹಿಸುವಂತೆ ಸೂಚಿಸಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸಿ ಎಂದು ಸಲಹೆ ನೀಡಿದರು.

ವೈಯಕ್ತಿಕ ರಕ್ಷಣಾ ಸಾಧನಾ (ಪಿಪಿಇ), ಮಾಸ್ಕ್ ಸೇರಿದಂತೆ ಜಿಲ್ಲೆಯಲ್ಲಿ ವೈದ್ಯಕೀಯ ಸಾಮಗ್ರಿಗಳ ಕೊರತೆ ಇದೆ. ವೈರಸ್ ಹರಡದಂತೆ ಪರಿಣಾಮಕಾರಿ ತಡೆಗೆ ಇವುಗಳ ಪೂರೈಕೆ ಅತ್ಯಗತ್ಯ ಎಂದು ಶಾಸಕ ರಾಜುಗೌಡ ಅವರು ಮನವಿ ಮಾಡಿ, ಸುರಪುರದ ರಂಗಂಪೇಟೆಯಲ್ಲಿ ದಿನಕ್ಕೆ 20 ಸಾವಿರಕ್ಕಿಂತ ಹೆಚ್ಚು ಮಾಸ್ಕ್ ತಯಾರಿಸುವವರಿದ್ದಾರೆ ಎಂಬುದಾಗಿ ಸಭೆಯ ಗಮನಕ್ಕೆ ತಂದರು. ಸಚಿವರು ಮಾತನಾಡಿ, ಮಾಸ್ಕ್‌ ಪೂರೈಸುವ ಸ್ವಸಹಾಯ ಸಂಘಗಳಿದ್ದರೆ ಅವರಿಗೆ ಮಾಸ್ಕ್ ತಯಾರಿಸಲು ಅನುಮತಿ ಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಚಿಕಿತ್ಸೆಗೆ ಸಹಕಾರ ನೀಡಲು ಮನವಿ: ಬೆಳಗಾವಿ ಮತ್ತು ಬೀದರ್‌ನಲ್ಲಿ ಕ್ವಾರಂಟೈನ್‍ನಲ್ಲಿರುವ ಮತ್ತು ನಿಜಾಮುದ್ದೀನ್ ತಬ್ಲೀಗಿ ಮರ್ಕಜ್ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ವ್ಯಕ್ತಿಗಳು ವೈದ್ಯರು ನೀಡುವ ಚಿಕಿತ್ಸೆಗೆ ಸ್ಪಂದಿಸದೇ ಅಸಭ್ಯವಾಗಿ ವರ್ತಿಸುತ್ತಿರುವುದು ನೋವಿನ ಸಂಗತಿ. ಎಲ್ಲಿಬೇಕಲ್ಲಿ ಉಗುಳುವುದು ಮತ್ತು ಇನ್ನಿಲ್ಲದ ಬೇಡಿಕೆ ಇಡುವುದು ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯರು ತಮ್ಮ ಜೀವವನ್ನು ಮುಡಿಪಿಟ್ಟು ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಕ್ವಾರಂಟೈನ್‍ನಲ್ಲಿರುವ ಎಲ್ಲಾ ವ್ಯಕ್ತಿಗಳು ಚಿಕಿತ್ಸೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರವಾದ ಮಾಹಿತಿ ನೀಡಿದರು.

ಸಭೆಗೂ ಮುನ್ನ ಸಚಿವ ಶ್ರೀರಾಮುಲು ಅವರು ಹೊಸ ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಿರುವ ‘ಕೋವಿಡ್-19 ಆಸ್ಪತ್ರೆ’ಯನ್ನು ಪರಿಶೀಲಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ನಾಗನಗೌಡ ಕಂದಕೂರ, ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲೆಯ ಮೇಲುಸ್ತುವಾರಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ, ಜಿಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.