ADVERTISEMENT

ಲಾಕ್‌ಡೌನ್‌ ಉಲ್ಲಂಘನೆ: ಕ್ರಿಮಿನಲ್‌ ಕೇಸ್‌, ಬೈಕ್‌ ವಶ

ನಿಯಮ ಪಾಲಿಸದವರಿಗೆ ಲಾಠಿ ರುಚಿ, ಸುಳ್ಳು ಸುದ್ದಿ ಹಂಚಿಕೆ ವಿರುದ್ಧ ಕೇಸ್‌ ದಾಖಲು

ಬಿ.ಜಿ.ಪ್ರವೀಣಕುಮಾರ
Published 31 ಮಾರ್ಚ್ 2020, 19:45 IST
Last Updated 31 ಮಾರ್ಚ್ 2020, 19:45 IST
ಯಾದಗಿರಿಯಲ್ಲಿ ಅನಗತ್ಯವಾಗಿ ಮನೆಯಿಂದ ಹೊರಬಂದ ಬೈಕ್‌ ಸವಾರರಿಗೆ ಲಾಠಿ ಬೀಸಿದ ಪೊಲೀಸರು (ಸಂಗ್ರಹಚಿತ್ರ)
ಯಾದಗಿರಿಯಲ್ಲಿ ಅನಗತ್ಯವಾಗಿ ಮನೆಯಿಂದ ಹೊರಬಂದ ಬೈಕ್‌ ಸವಾರರಿಗೆ ಲಾಠಿ ಬೀಸಿದ ಪೊಲೀಸರು (ಸಂಗ್ರಹಚಿತ್ರ)   

ಯಾದಗಿರಿ: ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಯಾದ ನಂತರ ವಿವಿಧ ಪ್ರಕರಣಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಿಯಮ ಉಲ್ಲಂಘಿಸಿದವರ ಮೇಲೆ 11 ಕ್ರಿಮಿನಲ್‌ ಕೇಸ್‌ ಹಾಕಿದ್ದಾರೆ.

ಮಾರ್ಚ್‌ 24 ರಾತ್ರಿ ಇಡೀ ದೇಶಕ್ಕೆ ಪ್ರಧಾನಿ ಲಾಕ್‌ಡೌನ್‌ ಘೋಷಿಸಿದರು. ಅಂದಿನಿಂದ ನಿಯಮ ಉಲ್ಲಂಘಿಸುವವರ ಮೇಲೆ ಪೊಲೀಸರು ಲಾಠಿ ಬೀಸತೊಡಗಿದರು. ಆದರೂ ಮಾತು ಕೇಳದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ.

ಲಾಕ್‌ಡೌನ್‌ ಜಾರಿ ನಂತರ ಜಿಲ್ಲೆಯಾದ್ಯಂತ ನಿಯಮ ಉಲ್ಲಂಘಿಸಿದ ಆರೋಪದಡಿ 90 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಲಾಕ್‌ಡೌನ್‌ಗೆ ಸಹಕರಿಸುವಂತೆ ಮನವಿ ಮಾಡುತ್ತಿದ್ದಾರೆ.

ADVERTISEMENT

ಲಾಕ್‌ಡೌನ್‌ಗೆ ಸ್ಪಂದಿಸದ ಯುವಕರಿಗೆ ಬಸ್ಕಿ, ಕಸಗೂಡಿಸುವ ಇನ್ನೊಮ್ಮೆ ನಿಯಮ ಉಲ್ಲಂಘಿಸುವುದಿಲ್ಲ ಎಂದುಪ್ರತಿಜ್ಞೆ ಮಾಡಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ನಗರ ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್‌: ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿದ್ದಾರೆ. ವೃತ್ತಗಳಲ್ಲಿ ಪೊಲೀಸರು ಇದ್ದು, ಸಂಚಾರ ಮಾಡದಂತೆ ತಿಳಿ ಹೇಳುತ್ತಿದ್ದಾರೆ. ಹೊಸಳ್ಳಿ ಕ್ರಾಸ್‌ ಬಳಿ ಬ್ಯಾರಿಕೇಡ್‌ ಹಾಕಿ ಇಬ್ಬರು ಪೊಲೀಸರು ಬೀಡುಬಿಟ್ಟಿದ್ದಾರೆ.

ಲಾಠಿ ಬೀಸಿದ ಪೊಲೀಸರು: ಜಿಲ್ಲೆಯಾದ್ಯಂತ ಲಾಕ್‌ಡೌನ್‌ಗೆ ಸಹಕರಿಸುವಂತೆ ಪೊಲೀಸರು ಬೈಕ್‌ಗಳಲ್ಲಿ ಸಂಚರಿಸುತ್ತಿದ್ದವರ ಮೇಲೆ ಲಾಠಿಬೀಸಿ ಬುದ್ದಿ ಕಲಿಸುತ್ತಿದ್ದಾರೆ. ಕೊರೊನಾ ಸೋಂಕು ಹರಡದಂತೆ ಮನೆಯಲ್ಲಿಯೇ ಇರಲು ಪ್ರಧಾನಿ, ಮುಖ್ಯಮಂತ್ರಿಯಾದಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಆದರೆ, ಜಿಲ್ಲೆಯಲ್ಲಿ ಲಾಕ್‌ಡೌನ್‌ಗೆ ಜನರು ಬಗ್ಗಿಲ್ಲ. ಇದರಿಂದ ಬೈಕ್‌ ವಶಪಡಿಸಿಕೊಂಡಿದ್ದೇವೆ ಎನ್ನುತ್ತಾರೆ ಪೊಲೀಸರು.

‘ಅನಾವಶ್ಯಕವಾಗಿ ತಿರುಗಾಡುವವರಿಗೆ ಮೊದಲಿಗೆ ಬುದ್ದಿ ಹೇಳಿ ತಿರುಗಾಡದಂತೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಮಾತು ಕೇಳದ ಯುವಕರ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ನಿಯಮ ಉಲ್ಲಂಘಿಸುವವರಿಗೆ ಶಿಕ್ಷೆ ತಪ್ಪುವುದಿಲ್ಲ. ಹೀಗಾಗಿ ಸರ್ಕಾರ ಎಚ್ಚರಿಕೆಗಳನ್ನು ಸಾರ್ವಜನಿಕರು ಪಾಲಿಸಬೇಕು’ ಎಂದು ಪೊಲೀಸರು ತಿಳಿಸುತ್ತಾರೆ.

‘ನಮ್ಮ ಜೀವ ಪಣಕ್ಕಿಟ್ಟು ಬೀದಿಯಲ್ಲಿ ನಿಂತು ಜನರು ಹೊರಗಡೆ ಬರದಂತೆ ನಿಯಂತ್ರಣ ಮಾಡುತ್ತಿದ್ದೇವೆ. ಇದನ್ನು ಆರ್ಥ ಮಾಡಿಕೊಳ್ಳದೆ ರಸ್ತೆಗಳಿದರೆ ದಂಡ ಪ್ರಯೋಗ ತಪ್ಪಿದ್ದಲ್ಲ’ ಎನ್ನುತ್ತಾರೆ ಅವರು.

ಸಾರ್ವಜನಿಕರು ಬೀಗಮುದ್ರೆಗೆ ಸ್ವಯಂ ಪ್ರೇರಿತವಾಗಿ ಕಡಿವಾಣ ಹಾಕಿಕೊಂಡು ಮನೆಯಲ್ಲಿ ಇರಬೇಕು. ನಿಯಮ ಉಲ್ಲಂಘಿಸಿದವರಿಗೆ ತಕ್ಕಶಿಕ್ಷೆ ಆಗಲಿದೆ

-ಋಷಿಕೇಶ ಭಗವಾನ್‌ ಸೋನವಣೆ , ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಮನೆಯಲ್ಲಿರುವುದೇ ಕೊರೊನಾ ಸೋಂಕಿಗೆ ಮದ್ದಾಗಿದೆ. ಹೀಗಾಗಿ ಅವಶ್ಯ ವಸ್ತುಗಳಿಗಾಗಿ ಮನೆಯಿಂದ ಒಬ್ಬರೆ ಬಂದು ತೆಗೆದುಕೊಂಡು ಹೋಗಿ. ಗುಂಪುಗೂಡುವುದು ಮಾಡಬೇಡಿ

- ಭೀಮರೆಡ್ಡಿ ಅಲ್ಲಿಪುರ, ನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.