ಯಾದಗಿರಿ: ಪರಿಶಿಷ್ಟ ಜಾತಿಯ (ಎಸ್‌ಸಿ) ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಂಘಟನೆಗಳ ಒಕ್ಕೂಟದ ಮುಖಂಡರು, ಸಮುದಾಯದವರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ, ರಸ್ತೆ ಸಂಚಾರ ತಡೆ ನಡೆಸಿದರು.
ಇಲ್ಲಿನ ತಹಶೀಲ್ದಾರ್ ಕಚೇರಿ ಮುಂಭಾಗದಿಂದ ಸುಭಾಷ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಮೀಸಲಾತಿ ನಮ್ಮ ಹಕ್ಕು’, ‘ಒಳ ಮೀಸಲಾತಿ ಜಾರಿ ಮಾಡಿ, ಇಲ್ಲವೆ ಕುರ್ಚಿ ಖಾಲಿ ಮಾಡಿ...’ ಎಂಬ ನಾಮಫಲಕ ಹಿಡಿದರು. ಸುಭಾಷ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿದ ಮುಖಂಡರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಎಸ್‌ಸಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಒಂದು ವರ್ಷವಾಗಿದೆ. ಆದರೂ ಕಾಂಗ್ರೆಸ್ ಸರ್ಕಾರವು ಈ ಬಗ್ಗೆ ಕಾಲಹರಣ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಹರಿಯಾಣ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಸರ್ಕಾರಗಳು ಒಳ ಮೀಸಲಾತಿ ಜಾರಿ ಮಾಡಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿವೆ. ಆದರೆ, ಕರ್ನಾಟಕ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ಮಾದಿಗ ಹಾಗೂ 29 ಉಪಜಾತಿಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ ಎಂದರು.
ನ್ಯಾ. ನಾಗಮೋಹನ್ ದಾಸ್ ಆಯೋಗಕ್ಕೆ ಸರ್ಕಾರವು ಸಮರ್ಪಕ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಆಯೋಗ ಕೇಳಿದ ಮಾಹಿತಿಯನ್ನು ಈವರೆಗೂ ಒದಗಿಸಿಲ್ಲ. 6 ತಿಂಗಳಾದರೂ ಆಯೋಗಕ್ಕೆ ಸರಿಯಾದ ಮಾಹಿತಿಯೂ ಲಭ್ಯವಾಗಿಲ್ಲ. ಆಯೋಗ ನಡೆಸಿದ ಸಮೀಕ್ಷೆ, ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆಗಳು ಗೊಂದಲ ಹುಟ್ಟು ಹಾಕಿ ನಗೆಪಾಟಲಿಗೆ ಗುರಿಯಾಗಿವೆ. ಮೂರು ವಾರಗಳಲ್ಲಿ ಸಮೀಕ್ಷೆ ಮುಗಿಸಿ, ವರದಿ ಸಿದ್ಧಪಡಿಸಲಾಗುವುದು ಎಂಬ ಸರ್ಕಾರದ ಹೇಳಿಕೆಯು ಕಿಮ್ಮತ್ತು ಕಳೆದುಕೊಂಡಿದೆ ಎಂದು ಪ್ರತಿಭಟನಾಕಾರರು ಹೇಳಿದರು.
‘ಸಿಎಂ ಸಿದ್ದರಾಮಯ್ಯ ಅವರ ನಿರ್ಲಕ್ಷ್ಯದಿಂದಾಗಿ ಕಾಂತರಾಜ್ ಆಯೋಗದ ವರದಿಯು ಕಸದ ಬುಟ್ಟಿ ಸೇರಿದೆ. ನಾಗಮೋಹನ್ ದಾಸ್ ವರದಿಯ ಕುರಿತು ಸಾಕಷ್ಟು ಗೊಂದಲಗಳಿವೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಈ ಪ್ರತಿಭಟನೆಯ ಮೂಲಕ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿದ್ದೇವೆ’ ಎಂದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ‘ಇದು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ. ಸ್ಥಳೀಯವಾಗಿ ಜಿಲ್ಲಾಡಳಿತವು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಲಿದೆ’ ಎಂದು ಹೇಳಿದರು.
ಸಮುದಾಯದ ಮುಖಂಡರಾದ ಚನ್ನಯ್ಯ ಮಾಳಿಕೇರಿ, ನಿಂಗಪ್ಪ ಪಡ್ನಳ್ಳಿ, ಆಂಜನೇಯ ಬಬಲಾದ, ಬಾಬಣ್ಣ ಕಡೇಚೂರು, ಮುನ್ನೆಪ್ಪ ಕುಂಡಲ್, ಅಂಜಪ್ಪ ಕಡೇಚೂರು, ಭೀಮರಾಯ ಬಂದಳ್ಳಿ, ಮಂಜುನಾಥ ದಾಸನಕೇರಿ, ತಾಯಪ್ಪ ಬದ್ದೆಪಲ್ಲಿ, ಭೀಮಶೆಪ್ಪ ಗುಡಿಸೆ, ಎಚ್.ಕೆ. ವಾಸುದೇವ, ಸಾಬು ಹೋರುಂಚಾ, ತಿಪ್ಪಣ್ಣ ಕಟ್ಟಿಮನಿ, ಶಿವು ಮುದ್ನಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಒಳಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರ ಕಾಲಹರಣ ಮಾದಿಗ ಹಾಗೂ 29 ಉಪಜಾತಿಗಳಲ್ಲಿ ಆಕ್ರೋಶ ನಾಗಮೋಹನ್ ದಾಸ್ ಆಯೋಗಕ್ಕೆ ಸಿಗದ ಸಹಕಾರ
ಕಾಂಗ್ರೆಸ್ ನಾಯಕರು ಚುನಾವಣೆ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಯ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದರೂ ಜಾರಿಗೆ ಹಿಂದೇಟು ಹಾಕುತ್ತಿರುವುದು ಖಂಡನೀಯ
-ಹಣಮಂತ ಇಟಗಿ ಮುಖಂಡ
‘ವಿಳಂಬ ಮಾಡಿದರೆ ಕರ್ನಾಟಕ ಬಂದ್‌ಗೆ ಕರೆ’ ‘ಆಗಸ್ಟ್ 11ರಿಂದ ಆರಂಭವಾಗುವ ಅಧಿವೇಶನದಲ್ಲಿ ಒಳ ಮೀಸಲಾತಿಯನ್ನು ಘೋಷಿಸಿ ಅನುಷ್ಠಾನಕ್ಕೂ ತರಬೇಕು. ಒಂದು ವೇಳೆ ವಿಳಂಬ ಮಾಡಿದರೆ ಕರ್ನಾಟಕ ಬಂದ್‌ಗೆ ಕರೆ ಕೊಡಲಾಗುವುದು’ ಎಂದು ಸಮುದಾಯದ ಮುಖಂಡ ದೇವಿಂದ್ರನಾಥ ನಾದ್ ಹೇಳಿದರು. ‘ಒಳ ಮೀಸಲಾತಿಗಾಗಿ 35 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಹೋರಾಟದಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ವಿಳಂಬ ಮಾಡದೆ ನಮ್ಮ ಬೇಡಿಕೆಯನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.