ADVERTISEMENT

ನಾರಾಯಣಪುರ: ಗಮನ ಸೆಳೆದ ಎತ್ತು ಕಲ್ಲು ಜಗ್ಗುವ ಸ್ಪರ್ಧೆ

ಸಂಭ್ರಮದಿಂದ ಜರುಗಿದ ಶಂಕರಲಿಂಗೇಶ್ವರ, ಮಹಿಬೂಬಸುಬಾನಿ ಜಾತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2024, 15:29 IST
Last Updated 16 ಆಗಸ್ಟ್ 2024, 15:29 IST
ನಾರಾಯಣಪುರದಲ್ಲಿ ಶುಕ್ರವಾರ ಶಂಕರಲಿಂಗೇಶ್ವರ ಹಾಗೂ ಮಹಿಬೂಬಸುಬಾನಿ ದರ್ಗಾದ ಜಾತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ಎತ್ತುಗಳ ಭಾರವಾದ ಕಲ್ಲು ಜಗ್ಗುವ ಸ್ಪರ್ಧೆಗೆ ಶ್ರೀಗಳು, ಗಣ್ಯರು ಚಾಲನೆ ನೀಡಿದರು
ನಾರಾಯಣಪುರದಲ್ಲಿ ಶುಕ್ರವಾರ ಶಂಕರಲಿಂಗೇಶ್ವರ ಹಾಗೂ ಮಹಿಬೂಬಸುಬಾನಿ ದರ್ಗಾದ ಜಾತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ಎತ್ತುಗಳ ಭಾರವಾದ ಕಲ್ಲು ಜಗ್ಗುವ ಸ್ಪರ್ಧೆಗೆ ಶ್ರೀಗಳು, ಗಣ್ಯರು ಚಾಲನೆ ನೀಡಿದರು   

ನಾರಾಯಣಪುರ: ಸಮೀಪದ ಬೋರುಕಾ ಜಲವಿದ್ಯುತ್ ಘಟಕದ ರಸ್ತೆಯ ಬಳಿಯ ಶಂಕರಲಿಂಗೇಶ್ವರ ಹಾಗೂ ಸೂಫಿ ಸಂತ ಮಹಿಬೂಬ ಸುಬಾನಿ ದರ್ಗಾದ ಜಾತ್ರೋತ್ಸವವು ಶುಕ್ರವಾರ ಅಪಾರ ಭಕ್ತ ಸಮೂಹದ ಮಧ್ಯೆ ಸಡಗರ ಸಂಭ್ರಮದಿಂದ ಜರುಗಿತು.

ಜಾತ್ರೋತ್ಸವದ ಅಂಗವಾಗಿ ಗುರುವಾರ ರಾತ್ರಿ ಗಂಧದ ಮೆರವಣಿಗೆ ನಡೆಯಿತು.

ಅಂದು ರಾತ್ರಿ ಶ್ರೀಕೃಷ್ಣ ಪಾರಿಜಾತ ಕಲಾತಂಡ ಬ್ಯಾಲ್ಯಾಳ ಅವರಿಂದ ಶ್ರೀಕೃಷ್ಣ ಪಾರಿಜಾತ ಭಕ್ತಿ ಪ್ರಧಾನ ನಾಟಕ ಜರುಗಿತು.
ಬೆಳಿಗ್ಗೆ ಶಂಕರಲಿಂಗೇಶ್ವರರ ಮೂರ್ತಿಗೆ ರುದ್ರಾಭಿಷೇಕ ಬಳಿಕ ಇಲ್ಲಿನ ಅಂಬಾಭವಾನಿ ದೇಗುಲದಿಂದ ಶರಣರು, ಆಸೀನರಾಗಿದ್ದ ಸಾರೋಟು ವಾಹನದಲ್ಲಿ ಜರುಗಿದ ಮೆರವಣಿಗೆಯಲ್ಲಿ ಕುದುರೆ ಕುಣಿತ ಮತ್ತು ವಾದ್ಯ ಮೇಳಗಳೊಟ್ಟಿಗೆ, ಸುಮಂಗಲಿಯರು ಕುಂಬ ಕಳಸ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷ ಗಮನ ಸೆಳೆಯಿತು. ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯು ಮಠಕ್ಕೆ ಆಗಮಿಸಿದ ಬಳಿಕ ಮಠದಲ್ಲಿನ ಈಶ್ವರ ಲಿಂಗಕ್ಕೆ ಪೂಜೆ ನೆರವೇರಿಸಲಾಯಿತು, ನಂತರ ಬಂದಭಕ್ತರು ದೇವರ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು.

ADVERTISEMENT

ಎತ್ತುಗಳು ಭಾರವಾದ ಕಲ್ಲು ಜಗ್ಗುವ ಸ್ಪರ್ಧೆಗೆ ಶಂಕರಲಿಂಗ ಮಹಾರಾಜರು ಚಾಲನೆ ನೀಡಿದರು. ಬಳಿಕ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜೋಡೆತ್ತುಗಳು ಶಕ್ತಿ ಪ್ರದರ್ಶಿಸಿ ನೋಡುಗರ ಗಮನ ಸೆಳೆದವು.

ನಾರಾಯಣಪುರದ ಶಂಕರಲಿಂಗೇಶ್ವರ ಹಾಗೂ ಮಹಿಬೂಬಸುಬಾನಿ ದರ್ಗಾದ ಜಾತ್ರೋತ್ಸವದ ಅಂಗವಾಗಿ ಆಯೋಜಿಸಿದ್ದ ಎತ್ತುಗಳು ಭಾರವಾದ ಕಲ್ಲು ಜಗ್ಗುವ ಸ್ಪರ್ಧೆ ನೋಡುಗರ ಗಮನ ಸೆಳೆಯಿತು

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗದ್ದೆಪ್ಪ ಪೂಜಾರಿ, ಚಿನ್ನಪ್ಪ ಡೊಳ್ಳಿ, ಆಂಜನೇಯ ದೊರೆ, ಆರ್.ಸಿ ಗೌಡರ, ರಮೇಶ ಕೋಳುರ, ಯಂಕಪ್ಪ ರೋಡಲಬಂಡಾ, ಹುಲಗಪ್ಪ ಭಜಂತ್ರಿ, ಮಂಜು ಹಾದಿಮನಿ, ಜೆಟ್ಟೆಪ್ಪ ಗೊಳಸಂಗಿ ಸೇರಿದಂತೆ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತರು ಭಾಗವಹಿಸಿದ್ದರು. ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.

ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.