ADVERTISEMENT

ಕಾಳಜಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಲು ಆಗ್ರಹ

ವಡಗೇರಾ, ಬೆಂಡೆಬೆಂಬಳಿ ಕಾಳಜಿ ಕೇಂದ್ರಕ್ಕೆ ತುನ್ನೂರು ಭೇಟಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 3:51 IST
Last Updated 18 ಅಕ್ಟೋಬರ್ 2020, 3:51 IST
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಮಾಜಿ ಎಂಎಲ್‌ಸಿ ಚನ್ನಾರೆಡ್ಡಿ ಪಾಟೀಲ ತುನ್ನೂರು ಬ್ರೆಡ್‌, ಬಿಸ್ಕತ್, ಬಾಳೆ ಹಣ್ಣು ವಿತರಿಸಿದರು
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ಮಾಜಿ ಎಂಎಲ್‌ಸಿ ಚನ್ನಾರೆಡ್ಡಿ ಪಾಟೀಲ ತುನ್ನೂರು ಬ್ರೆಡ್‌, ಬಿಸ್ಕತ್, ಬಾಳೆ ಹಣ್ಣು ವಿತರಿಸಿದರು   

ಯಾದಗಿರಿ: ‘ಜಿಲ್ಲಾಡಳಿತ ತೆಗೆದಿರುವ ಕಾಳಜಿ ಕೇಂದ್ರಗಳಲ್ಲಿ ಸ್ವಚ್ಛತೆ ಇಲ್ಲದೆಗಬ್ಬು ನಾರುತ್ತಿದ್ದು, ಸ್ವಚ್ಛತೆ ಕಾಪಾಡಬೇಕು’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತುನ್ನೂರು ಆಗ್ರಹಿಸಿದರು.

‌ಜಿಲ್ಲೆಯ ವಡಗೇರಾ ತಾಲ್ಲೂಕಿನ ವಡಗೇರಾ, ಬೆಂಡೆಬೆಂಬಳಿ ಕಾಳಜಿ ಕೇಂದ್ರಗಳಿಗೆ ಶನಿವಾರ ಭೇಟಿ ನೀಡಿ ಸಂತ್ರಸ್ತರಿಗೆ ಬ್ರೆಡ್‌, ಬಿಸ್ಕತ್, ಬಾಳೆಹಣ್ಣು ವಿತರಿಸಿ ಅವರು ಮಾತನಾಡಿದರು.

‘ಕೋವಿಡ್‌ ಕಾಲದಲ್ಲಿ ಎಲ್ಲೆಡೆ ಸ್ವಚ್ಛತೆ ಕಾಪಾಡುವುದು ಅತಿ ಮುಖ್ಯ. ಆದರೆ, ಇಲ್ಲಿ ಅದು ಮರೀಚಿಕೆಯಾಗಿದೆ. ನೀರು, ಊಟ ಸರಿಯಾಗಿ ವ್ಯವಸ್ಥೆ ಮಾಡಬೇಕು’ ಎಂದರು.

ADVERTISEMENT

‘ನದಿ ಪಾತ್ರದಲ್ಲಿರುವ ವಡಗೇರಾ ತಾಲ್ಲೂಕಿನ ಶಿವನೂರ, ಮಾಚನೂರ, ಬೇನಕನಹಳ್ಳಿ, ಬೂದಿನಾಳ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಸಾವಿರಾರು ಎಕರೆಯ ಬೆಳೆ ನಾಶವಾಗಿದೆ. ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಭತ್ತ, ಹತ್ತಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ತಕ್ಷಣ ಕಂದಾಯ, ಕೃಷಿ ಇಲಾಖೆಯಿಂದ ಜಂಟಿ ಸರ್ವೆ ಮಾಡಿಸಿ ಹೆಚ್ಚಿನ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಪ್ರವಾಹದ ನೀರು ಹೊಕ್ಕ ಮನೆಗಳಿಗೆ ತಕ್ಷಣಕ್ಕೆ ₹10 ಸಾವಿರ ಪರಿಹಾರ ನೀಡಬೇಕು. ಮನೆ ಬಿದ್ದವರಿಗೆ ₹5 ಲಕ್ಷ ಪರಿಹಾರ ಒದಗಿಸಿಕೊಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದರು.

ನಂತರ ಸಂತ್ರಸ್ತರರೊಂದಿಗೆ ಮಾತನಾಡಿ, ‘ಪರಿಹಾರ ಧನ ವಿತರಣೆಗಾಗಿಗ್ರಾಮ ಲೆಕ್ಕಾಧಿಕಾರಿಗಳಿಗೆ ಬೆಳೆ, ಮನೆಗೆ ಹಾನಿಯಾದ ಬಗ್ಗೆ ತಿಳಿಸಿ ಹೆಸರು ನೋಂದಾಯಿಸಿ. ಒಂದು ವೇಳೆ ಪರಿಹಾರ ಸಿಗದಿದ್ದರೆ ನಿಮ್ಮ ಜೊತೆಗೂಡಿ ಪ್ರತಿಭಟನೆ ನಡೆಸುತ್ತೇನೆ‘ ಎಂದರು.

ಈ ವೇಳೆ ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ, ಸದಾಶಿವರೆಡ್ಡಿಗೌಡ ರೋಟ್ನಡಗಿ, ಶೇಖರೆಪ್ಪಗೌಡ ಗೋನಾಲ, ಮರೆಪ್ಪ ಬಿಳ್ಹಾರ್, ಡಾ.ಅಮರಣ್ಣ, ಬಸವರಾಜ ಸೊನ್ನದ, ಮಲ್ಲಪ್ಪಯ್ಯ, ಸಾಬಣ್ಣ ಸಿದ್ದಿ, ಬಾಷುಮಿಯಾ ವಡಗೇರಾ, ನಾಗರಾಜ ಮಡ್ಡಿ, ವೆಂಕಟರೆಡ್ಡಿಗೌಡ, ಶರಣಪ್ಪ ಕೊಯಿಲೂರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.

***

ಕಾಳಜಿ ಕೇಂದ್ರಗಳಲ್ಲಿ ಮಾಸ್ಕ್‌, ಸ್ಯಾನಿಟೈಸರ್‌ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು
ಚನ್ನಾರೆಡ್ಡಿ ಪಾಟೀಲ ತುನ್ನೂರು, ವಿಧಾನ ಪರಿಷತ್‌ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.