ADVERTISEMENT

ಯಾದಗಿರಿ| ನಮ್ಮ ಜನ ನಮ್ಮ ಧ್ವನಿ: ಔಷಧ, ಆರೋಗ್ಯಾಧಿಕಾರಿ ಲಭ್ಯವಿಲ್ಲ

ಜಿಲ್ಲೆಯಲ್ಲಿವೆ 149 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಸಿಗದ ಸಮರ್ಪಕ ಸೇವೆ

ಬಿ.ಜಿ.ಪ್ರವೀಣಕುಮಾರ
Published 18 ಸೆಪ್ಟೆಂಬರ್ 2022, 19:30 IST
Last Updated 18 ಸೆಪ್ಟೆಂಬರ್ 2022, 19:30 IST
ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಬೀಗ ಹಾಕಿರುವುದು
ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಬೀಗ ಹಾಕಿರುವುದು   

ಯಾದಗಿರಿ: ಜಿಲ್ಲೆಯಲ್ಲಿ 149 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಇವೆ. ಆದರೆ ಸಮರ್ಪಕ ಚಿಕಿತ್ಸೆ, ವೈದ್ಯಕೀಯ ಸೇವೆ ಸಿಗದ ಕಾರಣ ಗ್ರಾಮಸ್ಥರು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಿದೆ.

ಕೇಂದ್ರ ಸರ್ಕಾರ ಪ್ರತಿ ಗ್ರಾಮದಲ್ಲೂ ಸರ್ಕಾರಿ ಆಸ್ಪತ್ರೆಯ ಸೇವೆ ಸಿಗಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾದ ಕೇಂದ್ರಗಳು, ಈಗ ಕೆಲವು ಕಡೆ ಯಾವಾಗಲೂ ಬೀಗ ಹಾಕಿರುವುದು ಕಂಡು ಬಂದಿದೆ.

ಯಾದಗಿರಿ ತಾಲ್ಲೂಕಿನಲ್ಲಿ 52 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು, ಶಹಾಪುರ ತಾಲ್ಲೂಕಿನಲ್ಲಿ 54, ಸುರಪುರ ತಾಲ್ಲೂಕಿನಲ್ಲಿ 43 ಕೇಂದ್ರಗಳಿವೆ. ಇವುಗಳಲ್ಲಿ ಕೆಲವು ತಮ್ಮ ಊರಿನಲ್ಲಿರುವ ಕೇಂದ್ರ ಇರುವ ಬಗ್ಗೆಯೇ ಜನರಿಗೆ ಮಾಹಿತಿ ಇಲ್ಲದಂತೆ ಕಾರ್ಯನಿರ್ವಹಿಸುತ್ತಿವೆ. ಗ್ರಾಮದ ಮೂಲೆಯಲ್ಲಿ ಆರೋಗ್ಯ ಮತ್ತ ಕ್ಷೇಮ ಕೇಂದ್ರಗಳಿದ್ದು, ಅಲ್ಲಿಗೆ ತೆರಳಲು ಸರಿಯಾದ ರಸ್ತೆಯೂ ಇಲ್ಲ.

ADVERTISEMENT

ಬಾಡಿಗೆ ಕಟ್ಟಡದಲ್ಲಿ ಆರೋಗ್ಯ ಕೇಂದ್ರಗಳು: ಸರ್ಕಾರ ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳದಲ್ಲೇ ತುರ್ತು ಚಿಕಿತ್ಸೆ ಸಿಗುವಂತಾಗಬೇಕೆಂಬ ಉದ್ದೇಶದಿಂದ ಆರೋಗ್ಯ ಉಪ ಕೇಂದ್ರಗಳನ್ನು ತೆರೆದಿದೆ. ಪ್ರತಿ ಆರೋಗ್ಯ ಕೇಂದ್ರಕ್ಕೆ ಸಮುದಾಯ ಆರೋಗ್ಯ ಅಧಿಕಾರಿ, ಮಹಿಳೆ ಮತ್ತು ಪುರುಷ ಆರೋಗ್ಯ ಸಹಾಯಕರನ್ನು ನೇಮಿಸಲಾಗಿದೆ.

ಉಪ ಕೇಂದ್ರದ ಅಧಿಕಾರಿಗಳು ಗರ್ಭಿಣಿಯರ ತಪಾಸಣೆ, ಟಿ.ಬಿ., ಲಸಿಕೆ, ಆರೋಗ್ಯ ತಪಾಸಣೆ, ರಕ್ತ ತಪಾಸಣೆ ಸೇರಿ ಪ್ರತಿ ನಿತ್ಯ ಇಲಾಖೆ ನಿಗದಿಪಡಿಸಿದ 12 ಇಂಡಿಕೇಟರ್‌ಗಳನ್ನು ಭರ್ತಿ ಮಾಡಿ ವರದಿ ಸಲ್ಲಿಸಬೇಕು.ಆದರೆ, ಈ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳಿವೆ. ಕೆಲ ಉಪ ಕೇಂದ್ರಗಳನ್ನು ಅಲ್ಲಿನ ಸಿಬ್ಬಂದಿ ಮನೆಗಳನ್ನಾಗಿಯೂ ಪರಿವರ್ತಿಸಿದ್ದಾರೆ ಎಂಬುದು ಜನರ ಆರೋಪ.

ಸುರಪುರ ಮತ್ತು ಹುಣಸಗಿ ತಾಲ್ಲೂಕು ಸೇರಿ 62 ಆರೋಗ್ಯ ಉಪ ಕೇಂದ್ರಗಳಿವೆ. ಪ್ರಾಥಮಿಕ
ಆರೋಗ್ಯ ಕೇಂದ್ರಗಳು ಇರುವೆಡೆ ಸಮುದಾಯ ಆರೋಗ್ಯ ಅಧಿಕಾರಿಗಳು ಇರುವುದಿಲ್ಲ. ಅಂತಹ ಸ್ಥಳದಲ್ಲಿ ಪ್ರಾಥಮಿಕ ಆರೋಗ್ಯ ಅಧಿಕಾರಿಗಳು (ಎಎನ್‌ಎಂ) ಇರುತ್ತಾರೆ.

ಒಟ್ಟು 42 ಸಮುದಾಯ ಆರೋಗ್ಯ ಅಧಿಕಾರಿಗಳು ಕರ್ತವ್ಯದಲ್ಲಿದ್ದಾರೆ. 22 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಉಳಿದ 40 ಕೇಂದ್ರಗಳು ಬಹುತೇಕ ದುರಸ್ತಿಗೆ ಬಂದಿವೆ.

ಔಷಧಿಗಳ ಪೂರೈಕೆ ಸಮಸ್ಯೆ: ಗುರುಮಠಕಲ್‌ ತಾಲ್ಲೂಕಿನಲ್ಲಿರುವ 18 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಅತ್ಯವಶ್ಯಕವಾದ ಔಷಧಗಳ ಸರಬರಾಜು ಸಮಸ್ಯೆಯಿದೆ. ಪ್ಯಾರಾಸಿಟಮಲ್‌ ಮಾತ್ರೆ ಸಿಗುತ್ತಿಲ್ಲ. ಮೇಲಧಿಕಾರಿಗಳಿಗೆ ಹೇಳಿದರೆ ಕಳುಹಿಸುತ್ತೇವೆ ಎನ್ನುತ್ತಾರೆ. ಆದರೆ, ಪೂರೈಕೆ ಮಾತ್ರ ಇಲ್ಲ.

ದೀರ್ಘಕಾಲಿಕ ಕಾಯಿಲೆಗಳಾದ ರಕ್ತದೋತ್ತಡ, ಮಧುಮೇಹ ಸೇರಿದಂತೆ ಚಿಕ್ಕಪುಟ್ಟ ಕಾಯಿಲೆಗಳು, ಗರ್ಭಿಣಿಯರ ನೋಂದಣಿ, ಮಾರ್ಗದರ್ಶನ, ಲಸಿಕಾ ಕಾರ್ಯಕ್ರಮಗಳು ಸೇರಿದಂತೆ 12 ಬಗೆಯ ಜವಾಬ್ದಾರಿಗಳೊಡನೆ ಕಾರ್ಯನಿರ್ವಹಿಸುವ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳೂ ಇಲ್ಲದಿರುವುದು ವಿಪರ್ಯಾಸ.

‘ಹೊರರೋಗಿ ಪರೀಕ್ಷೆ, ವಾರಕ್ಕೊಂದು ಜೀರಿಯಾಟ್ರಿಕ್ (ವಯಸ್ಸಾದವರಿಗಾಗಿ), ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಕಾರ್ಯಗಳು ಸೇರಿ 12 ಬಗೆಯ ಕೆಲಸಗಳು ಮಾಡಬೇಕಾಗಿವೆ. ಆದರೆ, ನಮ್ಮ ಕೇಂದ್ರಕ್ಕೆ ಬರುವವರಿಗೆ ಕುಡಿಯುವ ನೀರನ್ನೂ ವ್ಯವಸ್ಥೆ ಮಾಡಲಾಗಿಲ್ಲ. ಸ್ವಚ್ಛತೆಯಿಂದ ಮೊದಲ್ಗೊಂಡು, ದಿನಕ್ಕೆ 14 ರಿಜಿಸ್ಟ್ರಾರ್ ಸಿದ್ಧಪಡಿಸುವುದು, ಔಷಧಗಳಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಲೆಯುವುದು ಮತ್ತು ಅಲ್ಲಿನ ವೈದ್ಯಾಧಿಕಾರಿಗಳ ಮರ್ಜಿಗೆ ಕಾಯುವುದು ಸೇರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಸೇವೆ ನೀಡುವವರಿಗೆ ಸಮಸ್ಯೆಗಳೇ ತುಂಬಿವೆ’ ಎಂದು ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

ಕೇಂದ್ರಗಳನ್ನು ಆರಂಭಿಸಿದ್ದು, ವೃದ್ಧರಿಗೆ ಮತ್ತು ಅನಾನುಕೂಲವಿರುವ ಗ್ರಾಮೀಣರಿಗೆ ಸಹಕಾರಿಯಾಗಿದೆ. ಅವರ ಮೂಲಕವೇ ನಮ್ಮ ಊರಿನ ಕೆಲ ರೋಗಿಗಳಿಗೆ ಸಮಸ್ಯೆಯನ್ನು ಅರಿತು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಲ್ಲಿ ಸಹಾಯ ಸಿಕ್ಕಿದೆ ಎಂದು ಚಂಡ್ರಿಕಿ, ಚಪೆಟ್ಲಾದ ಹೊರರೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮೀಣ ಜನರ ಸಹಕಾರಕ್ಕಾಗಿ ಕೇಂದ್ರಗಳನ್ನು ಸ್ಥಾಪಿಸಿದ್ದು ಉತ್ತಮ ಕಾರ್ಯ. ಆದರೆ, ಅವಶ್ಯಕ ಮೂಲ ಸೌಕರ್ಯಗಳು ಹಾಗೂ ಔಷಧಗಳನ್ನು ಕಲ್ಪಿಸದಿದ್ದರೆ ಅವರು ಹೇಗೆ ಚಿಕಿತ್ಸೆ ನೀಡಲು ಸಾಧ್ಯ?
ಸಂಬಂಧಿತರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ
ಅವಶ್ಯಕತೆಗಳ ಪೂರೈಕೆಗೆ ಶೀಘ್ರ ವ್ಯವಸ್ಥೆ ಮಾಡಲಿ ಎಂದು ಗ್ರಾಮಸ್ಥರಾದ ಮಹಾದೇವ, ಮಲ್ಲಿಕಾರ್ಜುನ ಆಗ್ರಹಿಸುತ್ತಾರೆ.

ಸುಸಜ್ಜಿತ ಸೌಲಭ್ಯವಿಲ್ಲದೆ ಕೊರಗು: ಜನರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮುತುವರ್ಜಿವಹಿಸಿರುವ ಸರ್ಕಾರ ಕಟ್ಟಡಗಳನ್ನು ಒದಗಿಸಿದೆ. ಆದರೆ, ಅಗತ್ಯವಾದ ಸೌಲಭ್ಯ ಹಾಗೂ ಸುಸಜ್ಜಿತ ವ್ಯವಸ್ಥೆ ಇಲ್ಲ. ಕೆಲವು ಕಡೆ ವಾರಕ್ಕೆ ಒಮ್ಮೆ ಭೇಟಿ ನೀಡುವ ಸಿಬ್ಬಂದಿಯು ಇದ್ದಾರೆ ಎಂಬ ಆರೋಪವು ಕೇಳಿ ಬರುತ್ತದೆ.

‌ಶಹಾಪುರ ತಾಲ್ಲೂಕಿನ ದಿಗ್ಗಿ ಉಪ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಒಬ್ಬರೂ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಸಾರ್ವಜನಿಕರ ಜತೆಗೆ ಸೌಜನ್ಯದಿಂದ
ವರ್ತಿಸುತ್ತಿಲ್ಲ. ಮೇಲಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಗ್ರಾಮದ ಕೆಲ ವ್ಯಕ್ತಿಗಳು ತಮ್ಮ ಅಸಮಾಧಾನ ತೊಡಿಕೊಂಡರು.

***

ಹಲವು ಕಡೆ ಕೇಂದ್ರಗಳಿಗೆ ಬೀಗ

ಆರೋಗ್ಯ ಮತ್ತು ಕ್ಷೇಮಗಳ ನಿರ್ವಹಣೆ ಪರಿಶೀಲಿಸಲು ‘ಪ್ರಜಾವಾಣಿ’ ತಂಡ ರಿಯಾಲಿಟ್‌ ಚೆಕ್‌ ಮಾಡಿದಾಗ ಹಲವು ಕಡೆ ಕೇಂದ್ರಗಳಿಗೆ ಬೀಗ ಹಾಕಿರುವುದು ಕಂಡು ಬಂತು.

ಯಾದಗಿರಿ ತಾಲ್ಲೂಕಿನ ಬಂದಳ್ಳಿ, ಯಡ್ಡಳ್ಳಿ, ಶಹಾಪುರ ತಾಲ್ಲೂಕಿನ ದಿಗ್ಗಿ ಸೇರಿದಂತೆ ಇತರೆ ಕಡೆ ಭೇಟಿ ನೀಡಿದಾಗ ಮೂಲಸೌಕರ್ಯಗಳಿಂದ ಕೇಂದ್ರಗಳು ವಂಚಿತವಾಗಿರುವುದು ತಿಳಿದು ಬಂತು.

ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಮಳೆಗಾಲವಾಗಿದ್ದರಿಂದ ರಸ್ತೆ ರಾಡಿಯಿಂದ ಕೂಡಿತ್ತು. ಮಳೆ ನೀರು ನಿಂತು ರಸ್ತೆಯೇ ಇಲ್ಲದಂತಾಗಿದೆ. ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ ಕೇಂದ್ರಕ್ಕೆ ಬೀಗ ಹಾಕಲಾಗಿತ್ತು. ಅಕ್ಕಪಕ್ಕದ ಮನೆಯವರನ್ನು ಕೇಂದ್ರದ ಕುರಿತು ವಿಚಾರಿಸಿದಾಗ ಈಗ ಬಂದಿಲ್ಲ, ಪ್ರತಿದಿನ ಬರುತ್ತಾರೆ ಎನ್ನುವ ಮಾಹಿತಿ ನೀಡಿದರು.

ಯಡ್ಡಳ್ಳಿ ಗ್ರಾಮದ ಕೇಂದ್ರದ ಸ್ಥಿತಿಯೂ ಇದೇ ಆಗಿದೆ. ಪ್ರಾಥಮಿಕ ಶಾಲಾವರಣದಲ್ಲಿ ಕೇಂದ್ರವಿದ್ದು, ಸಮುದಾಯ ಆರೋಗ್ಯ ಅಧಿಕಾರಿ ಹತ್ತಿಕುಣಿಯಲ್ಲಿ ಆರೋಗ್ಯ ಶಿಬಿರಲ್ಲಿರುವ ಮಾಹಿತಿಯನ್ನು ನೀಡಿದರು. ಇನ್ನೂ ಶಹಾಪುರ ತಾಲ್ಲೂಕಿನ ದಿಗ್ಗಿ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಬೀಗ ಜಡಿಯಲಾಗಿತ್ತು. ಜಿಲ್ಲೆಯ ವಿವಿಧ ಗ್ರಾಮಗಳ ಆರೋಗ್ಯ ಮತ್ತು ಕ್ಷೇಮಗಳ ಪರಿಸ್ಥಿತಿ ಭಿನ್ನವಾಗಿ ಇಲ್ಲ. ಹಲವು ಕಡೆ ಸಮುದಾಯ ಆರೋಗ್ಯ ಅಧಿಕಾರಿಗಳು ಪ್ರಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಕೆಲ ಅಧಿಕಾರಿಗಳಿಂದ ಎಲ್ಲರಿಗೂ ಕೆಟ್ಟ ಹೆಸರು ಬರುತ್ತಿದೆ ಎಂದು ಅಧಿಕಾರಿಯೊಬ್ಬರು ಅಳಲು ತೊಡಿಕೊಂಡರು.

***

ಮೂರು ಕಡೆ ಹುದ್ದೆ ಖಾಲಿ

ಜಿಲ್ಲೆಯ 149 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಮೂರು ಕಡೆ ಹಲವು ತಿಂಗಳಿಂದ ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆ ಖಾಲಿಯಾಗಿ ಉಳಿದಿವೆ.

ಯಾದಗಿರಿ ತಾಲ್ಲೂಕಿನ ಅಲ್ಲಿಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಲ್ಲಿಪುರ, ಅಜಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಜೈಗ್ರಾಮ, ಮಲ್ಹಾರ ಆರೋಗ್ಯ ಕೇಂದ್ರದ ಮಲ್ಹಾರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಖಾಲಿ ಹುದ್ದೆಯಿದೆ. ಆದರೆ, ಹಲವು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳೇ ತೆರಳುವುದಿಲ್ಲ ಎಂದು ವೈದ್ಯಾಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 3–4 ಗ್ರಾಮಗಳ ವ್ಯಾಪ್ತಿ ಇರುತ್ತದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರ ಇರುವ ಗ್ರಾಮಕ್ಕೆ ನಾವು ತೆರಳಿದಾಗ ಆ ಕೇಂದ್ರದ ಅಧಿಕಾರಿ ಬೇರೆ ಊರಿನಲ್ಲಿ ಇದ್ದೇನೆ ಎಂದು ಹೇಳುತ್ತಾರೆ. ಇದರಿಂದ ನಾವು ನಂಬಿ ಬರುತ್ತೇವೆ. ಗ್ರಾಮಸ್ಥರು ಈ ಬಗ್ಗೆ ಸಾಕ್ಷಿ ಸಮೇತ ದೂರು ನೀಡಿದರೆ, ಕ್ರಮ ಕೈಗೊಳ್ಳಬಹುದು ಎನ್ನುತ್ತಾರೆ ವೈದ್ಯರೊಬ್ಬರು.

ಕೆಲವು ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಅಧಿಕಾರಿಗಳಿಗೆ 12 ಇಂಡಿಕೇಟರ್‌ ಭರ್ತಿ ಮಾಡಿದ ನಂತರ ಸಹಿ ಮಾಡಲು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಹಲವು ಬಾರಿ ಸಹಿ ಪಡೆಯುವುದೇ ಕೆಲಸವಾಗಿದೆ ಎನ್ನುತ್ತಾರೆ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಯೊಬ್ಬರು.

***

ಶಿಥಿಲಗೊಂಡ ಆರೋಗ್ಯ ಕೇಂದ್ರಗಳ ದುರಸ್ತಿಗೆ ಪ್ರಸ್ತಾವ ಸಲ್ಲಿಸಲಾಗಿದೆ. 4 ರಿಂದ 5 ಗ್ರಾಮಗಳ ಮಧ್ಯೆ ಒಂದು ಉಪ ಕೇಂದ್ರವಿದೆ. ಎಲ್ಲವೂ ಸಮರ್ಪಕವಾಗಿ ನಡೆಯುತ್ತಿವೆ
ಡಾ. ರಾಜಾ ವೆಂಕಪ್ಪನಾಯಕ, ಟಿಎಚ್‌ಒ, ಸುರಪುರ

***

ಸುರಪುರ ತಾಲ್ಲೂಕಿನ ರುಕ್ಮಾಪುರ ಆರೋಗ್ಯ ಉಪ ಕೇಂದ್ರದಲ್ಲಿ ಅಲ್ಲಿನ ಸಿಬ್ಬಂದಿ ವಾಸಿಸುತ್ತಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡದೆ, ಸುರಪುರ ಆಸ್ಪತ್ರೆಗೆ ಕಳಿಸುತ್ತಿದ್ದಾರೆ
ರವಿಚಂದ್ರ ಠಾಣಾಗುಂದಿ, ಮುಖಂಡ

***

ಸಿಬ್ಬಂದಿ ಕೊರತೆ ಹಾಗೂ ಕಟ್ಟಡ ಸಮಸ್ಯೆಯಿಲ್ಲ. ತಾಲ್ಲೂಕಿನಲ್ಲಿ 55 ಉಪ ಆರೋಗ್ಯ ಕೇಂದ್ರಗಳಿವೆ. ಅಗತ್ಯ ಸೇವೆಗಳ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಆಯಾ ಗ್ರಾಮದ ಜನ ಸಿಬ್ಬಂದಿಗೆ ಅಗತ್ಯ ಸಹಕಾರ ನೀಡಬೇಕು
ಡಾ.ರಮೇಶ ಗುತ್ತೆದಾರ, ತಾಲ್ಲೂಕು ವೈದ್ಯಾಧಿಕಾರಿ, ಶಹಾಪುರ

***

ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ನಿಯಮಿತವಾಗಿ ಬರುತ್ತಿದ್ದಾರೆ. ಬಾಡಿಗೆ ಕಟ್ಟಡದಲ್ಲಿ ಕೇಂದ್ರ ನಡೆಯುತ್ತಿದ್ದು, ಸರಿಯಾದ ರಸ್ತೆ ಇಲ್ಲ. ಮತ್ತಷ್ಟು ಸೌಲಭ್ಯ ಕಲ್ಪಿಸಿ ಕೊಡಬೇಕು
ಭೀಮರಾಯ ಉಳಗೋಳ, ಬಂದಳ್ಳಿ ಗ್ರಾಮಸ್ಥ

***

ಪ್ರತಿನಿತ್ಯ 10ರಿಂದ 15 ಜನರ ಒಪಿಡಿ ತಪಾಸಣೆ ಮಾಡಲಾಗುತ್ತಿದೆ. ಮಧುಮೇಹ, ರಕ್ತದೋತ್ತಡ ಸೇರಿದಂತೆ ವಿವಿಧ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುತ್ತದೆ. ವಿವಿಧ ಲಸಿಕಾ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುತ್ತಿದೆ
ಅಮರಗುಂಡೇಶ್ವರಿ, ಯಡ್ಡಳ್ಳಿ ಸಮುದಾಯ ಆರೋಗ್ಯ ಅಧಿಕಾರಿ

***

ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಅಧಿಕಾರಿಗಳು ಸರಿಯಾಗಿ ಹಾಜರಾಗಿರದ ಬಗ್ಗೆ ಸಾರ್ವಜನಿಕರಿಂದ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳು ಪ್ರತಿತಿಂಗಳು ನಾಲ್ಕು ಕಡೆ ಶಿಬಿರ ಮಾಡಬೇಕು
ಡಾ.ಹನುಮಂತರೆಡ್ಡಿ, ಯಾದಗಿರಿ ತಾಲ್ಲೂಕು ಆರೋಗ್ಯ ಅಧಿಕಾರಿ

***

ಪೂರಕ ಮಾಹಿತಿ:ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಎಂ.ಪಿ.ಚಪೆಟ್ಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.