ADVERTISEMENT

ಮಿಷನ್ ಇಂದ್ರಧನುಷ್ ಲಸಿಕೆ ಹಾಕಿಸಿ

ಡಿಸೆಂಬರ್ 2 ರಿಂದ ಮಾರ್ಚ್ 10 ರವರೆಗೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 15:56 IST
Last Updated 29 ನವೆಂಬರ್ 2019, 15:56 IST
ಯಾದಗಿರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಿಷನ್ ಇಂದ್ರಧನುಷ್ ಲಸಿಕೆ ಅಭಿಯಾನ ಸಭೆಯಲ್ಲಿ ಸಿಇಒ ಶಿಲ್ಪಾ ಶರ್ಮಾ ಮಾತನಾಡಿದರು
ಯಾದಗಿರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಿಷನ್ ಇಂದ್ರಧನುಷ್ ಲಸಿಕೆ ಅಭಿಯಾನ ಸಭೆಯಲ್ಲಿ ಸಿಇಒ ಶಿಲ್ಪಾ ಶರ್ಮಾ ಮಾತನಾಡಿದರು   

ಯಾದಗಿರಿ: ‘ಜಿಲ್ಲೆಯಾದ್ಯಂತ ಡಿಸೆಂಬರ್ 2 ರಿಂದ 2020ರ ಮಾರ್ಚ್ 10 ರವರೆಗೆ ಮಿಷನ್ ಇಂದ್ರಧನುಷ್ 2.0 ಅಭಿಯಾನ ನಡೆಯಲಿದೆ. ಲಸಿಕೆಯಿಂದ ವಂಚಿತವಾದ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ತಪ್ಪದೇ ಲಸಿಕೆ ಹಾಕಬೇಕು. ಲಸಿಕೆಯಿಂದ ಯಾರೂ ವಂಚಿತರಾಗಬಾರದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತೀವ್ರತರದ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಡಿಪಿಟಿ, ಟಿಡಿ ಶಾಲಾ ಲಸಿಕೆ ಅಭಿಯಾನ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸರ್ವೆ ಮುಖಾಂತರ ಲಸಿಕೆಯಿಂದ ವಂಚಿತ 6,640 ಮಕ್ಕಳು ಹಾಗೂ 393 ಗರ್ಭಿಣಿಯರನ್ನು ಗುರುತಿಸಿದ್ದಾರೆ. ಅಭಿಯಾನದಲ್ಲಿ ಇವರೆಲ್ಲರಿಗೂ ಲಸಿಕೆ ನೀಡಬೇಕು. ಇದರ ಯಶಸ್ವಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ಅಗತ್ಯ ಸಹಕಾರ ನೀಡಬೇಕು’ ಎಂದು ಸೂಚಿಸಿದರು.

ADVERTISEMENT

‘ಅಭಿಯಾನದ ಕುರಿತಂತೆ ಜಿಲ್ಲೆಯ ಪ್ರತಿ ಶಾಲೆಯಿಂದ ಮಕ್ಕಳ ಮೂಲಕ ಜಾಗೃತಿ ಜಾಥಾ ನಡೆಸಬೇಕು. ಶಾಲೆಗಳ ವಿಜ್ಞಾನ ಶಿಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಬೇಕು. ವಿಜ್ಞಾನ ಶಿಕ್ಷಕರು ಇಲ್ಲವಾದಲ್ಲಿ ಕ್ರಿಯಾಶೀಲ ಶಿಕ್ಷಕರನ್ನು ನೇಮಿಸಬೇಕು. ಯಾವುದೇ ಮಗು ಲಸಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಂದ ಸುತ್ತೋಲೆ ಹೊರಡಿಸುವಂತೆ’ ತಿಳಿಸಿದರು.

ಸಮುದಾಯಗಳ ಸಹಭಾಗಿತ್ವ ಇರಲಿ:‘ತೀವ್ರತರದ ಮಿಷನ್ ಇಂದ್ರಧನುಷ್ ನಿರಂತರ ಲಸಿಕಾ ಕಾರ್ಯಕ್ರಮ ಯಶಸ್ವಿಗೆ ಸಮುದಾಯಗಳ ಸಹಭಾಗಿತ್ವ ತುಂಬಾ ಅಗತ್ಯ. ಈ ನಿಟ್ಟಿನಲ್ಲಿ ಮಂದಿರ, ಮಸೀದಿ ಹಾಗೂ ಚರ್ಚ್‍ಗಳಲ್ಲಿ ಸಮುದಾಯದ ಮುಖ್ಯಸ್ಥರು ಅಥವಾ ಮುಖಂಡರು ತಪ್ಪದೇ ಲಸಿಕೆ ಪಡೆಯುವಂತೆ ಸಾರ್ವಜನಿಕರಿಗೆ ಕರೆ ನೀಡಬೇಕು’ ಎಂದು ಸಭೆಯಲ್ಲಿ ಹಾಜರಿದ್ದ ವಿವಿಧ ಸಮುದಾಯಗಳ ಮುಖಂಡರನ್ನು ಸಿಇಒ ಮನವಿ ಮಾಡಿದರು.

ಕಲಬುರ್ಗಿ ವಿಭಾಗಮಟ್ಟದ ವೈದ್ಯಕೀಯ ಸರ್ವೇಕ್ಷಣಾಧಿಕಾರಿ (ವಿಶ್ವ ಆರೋಗ್ಯ ಸಂಸ್ಥೆ) ಡಾ.ಅನಿಲ್‍ಕುಮಾರ್ ಎಸ್.ತಾಳಿಕೋಟಿ ಮಾತನಾಡಿ, ‘ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮ 4 ಸುತ್ತುಗಳಲ್ಲಿ ನಡೆಯಲಿದ್ದು, ಡಿಸೆಂಬರ್ 2 ರಿಂದ 10 ರವರೆಗೆ ಮೊದಲ ಸುತ್ತು ನಡೆಯಲಿದೆ’ ಎಂದರು.

ಜನವರಿ 3 ರಿಂದ 11 ರವರೆಗೆ ಎರಡನೇ ಸುತ್ತು, ಫೆಬ್ರುವರಿ 3 ರಿಂದ 11 ರವರೆಗೆ ಮೂರನೇ ಸುತ್ತು, ಮಾರ್ಚ್ 2 ರಿಂದ 10 ರವರೆಗೆ ನಾಲ್ಕನೇ ಸುತ್ತಿನ ಕಾರ್ಯಕ್ರಮ ನಡೆಯಲಿವೆ’ ಎಂದರು.

ಡಾ.ಲಕ್ಷ್ಮಿಕಾಂತ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ, ಡಾ.ಮಿಸ್ಬಾ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪಿ.ವಿಜಯಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.