ADVERTISEMENT

ವಾಡಿಕೆಗಿಂತ ಅಧಿಕ ಮಳೆ: ಮುನ್ನಚ್ಚರಿಕೆಗೆ ಮನವಿ

ಜಲಮೂಲ ಬಳಿ ಹೋಗುವುದನ್ನು ತಪ್ಪಿಸಿ: ಜಿಲ್ಲಾಧಿಕಾರಿ ಸುಶೀಲಾ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:32 IST
Last Updated 29 ಮೇ 2025, 14:32 IST
ಡಾ.ಸುಶೀಲಾ
ಡಾ.ಸುಶೀಲಾ   

ಯಾದಗಿರಿ: ಹವಾಮಾನ ಇಲಾಖೆಯ ಪರಿಷ್ಕತ ದೀರ್ಘಾವಧಿ ಮುನ್ಸೂಚನೆಯ ಅನ್ವಯ ಜಿಲ್ಲೆಯಾದ್ಯಂತ ವಾಡಿಕೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ತಿಳಿಸಿದ್ದಾರೆ.

ಮಳೆಯಿಂದ ಹೆಚ್ಚಿನ ಹರಿವು ಉಂಟಾಗಿ ಕೃಷ್ಣಾ ಮತ್ತು ಭೀಮಾ ನದಿಗಳು, ತೊರೆಗಳು ತುಂಬಿ ಹರಿಯುತ್ತವೆ. ಕೆರೆ–ಕಟ್ಟೆ ಸೇರಿದಂತೆ ಇತರ ಜಲ ಮೂಲಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಆಕಸ್ಮಿಕವಾಗಿ ಮತ್ತು ಅಜಾಗರೂಕತೆಗಳಿಂದ ಅಪಾಯ ಹೆಚ್ಚತ್ತವೆ. ಜೀವಹಾನಿಯನ್ನು ತಡೆಗಟ್ಟಲು ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿ ಪಾಲಿಸಬೇಕು ಎಂದು ಮಾಹಿತಿ ನೀಡಿದ್ದಾರೆ.

ಜಲಮೂಲ ಬಳಿ ಹೋಗುವುದನ್ನು ತಪ್ಪಿಸಿ: ನದಿಗಳು, ಕೊಳಗಳು, ಕ್ವಾರಿಗಳು, ಕಾಲುವೆಗಳು, ತುಂಬಿ ಹರಿಯುವ ಚರಂಡಿಗಳು ಮತ್ತು ಪ್ರವಾಹ ಪೀಡಿತ ಪ್ರದೇಶಗಳ ಬಳಿ ಈಜುವುದು, ಆಟವಾಡುವುದು ಮತ್ತು ಓಡಾಡುವುದನ್ನು ತಪ್ಪಿಸಲು ಸಾರ್ವಜನಿಕರಿಗೆ ವಿಶೇಷವಾಗಿ ಮಕ್ಕಳು ಮತ್ತು ಯುವಕರಿಗೆ  ಸೂಚಿಸಿದ್ದಾರೆ.

ADVERTISEMENT

ನೀರಿನ ಬಳಿ ಸೆಲ್ಪಿ ಬೇಡ: ಪ್ರಕ್ಷುಬ್ಧಗೊಂಡ ನದಿಗಳು, ಜಲಪಾತಗಳು ಅಥವಾ ಅಪಾಯ ಮಟ್ಟದಲ್ಲಿ ನೀರು ಹೆಚ್ಚಿರುವ ಸ್ಥಳಗಳ ಬಳಿ ಸೆಲ್ಫಿ ಅಥವಾ ಚಿತ್ರ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ವಿಶೇಷವಾಗಿ ಜಲಮೂಲಗಳು ಮತ್ತು ತಗ್ಗಿನಿಂದ ಕೂಡಿದ ಪ್ರವಾಹ ಪೀಡಿತ ಜನವಸತಿ ಪ್ರದೇಶಗಳಲ್ಲಿ ಪೋಷಕರು ಮಕ್ಕಳ ಮೇಲೆ ವಿಶೇಷ ಕಾಳಜಿ ಮತ್ತು ಮೇಲ್ವಿಚಾರಣೆ ಮಾಡಲು ಕೋರಿದ್ದಾರೆ.

ವಿದ್ಯುತ್ ಸುರಕ್ಷತೆ: ವಿದ್ಯುತ್ ಸಂಪರ್ಕ ಕಲ್ಪಿಸುವ ಸ್ಥಾವರ, ರಚನೆಗಳ ಬಳಿ ನೀರಿನಿಂದ ಆವೃತಗೊಂಡ ಪ್ರದೇಶಗಳು, ಶಿಥಿಲಗೊಂಡ, ಮುರಿದು ಬಿದ್ದ ವಿದ್ಯುತ್ ಕಂಬಗಳು, ಕಡಿತಗೊಂಡ ವಿದ್ಯುತ್ ಸಂಪರ್ಕಗಳನ್ನು ಮುಟ್ಟದಂತೆ ಮತ್ತು ಸನಿಹ ತೆರಳದಂತೆ ಸೂಚಿಸಿದೆ.

ವಾತಾವರಣದಲ್ಲಿನ ಬದಲಾವಣೆಗಳನ್ನು ಗಮನಿಸಿ, ಹತ್ತಿರದ ಪ್ರದೇಶಗಳಲ್ಲಿ ಉಂಟಾಗುವ ಸಿಡಿಲು ಗುಡುಗುಗಳಿಂದ ಸಿಡಿಲು ಸಂಭವನೀಯತೆ ಊಹಿಸಿ, ಸ್ಥಳೀಯ ಮಾಧ್ಯಮಗಳಲ್ಲಿ ನೀಡಲಾಗುವ ಸೂಚನೆಗಳನ್ನು ಪಾಲಿಸಿ, ಪ್ರಯಾಣವನ್ನು ಮೂಂದೂಡಿರಿ. ಮನೆಯ ಕಿಟಕಿ, ಬಾಗಿಲುಗಳನ್ನು ಮುಚ್ಚಿರಿ, ಮಕ್ಕಳು, ವಯೋವೃದ್ಧರು ಹಾಗೂ ಜಾನುವಾರುಗಳನ್ನು ಸಿಡಿಲು ಸಂದರ್ಭಗಳಲ್ಲಿ ಮನೆಯ ಒಳಗಿರಲು ತಿಳಿಸಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಮನೆಯ ಛಾವಣಿಗಳಲ್ಲಿ ಒಣಗಿದ ಹುಲ್ಲು ಮತ್ತು ಕಸಕಡ್ಡಿಗಳ ಸಂಗ್ರಹಣೆ ತೆರವುಗೊಳಿಸಿ, ಸಿಡಿಲು ಸಂದರ್ಭಗಳಲ್ಲಿ ಸ್ನಾನ ಮಾಡುವುದು, ಪಾತ್ರೆ ತೊಳೆಯುವುದು, ಬಟ್ಟೆ, ಒಗೆಯುವುದನ್ನು ಮುಂದೂಡಿರಿ. ಕಿಟಕಿ, ಬಾಗಿಲು, ವಿದ್ಯುತ್ ಸಂಪರ್ಕಗಳಿಂದ ದೂರವಿರಿ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.