ಯಾದಗಿರಿ: ಜಿಲ್ಲೆಯ ಕಕ್ಕೇರಾ, ಕೆಂಭಾವಿ 2015ರಲ್ಲಿ ಗ್ರಾಮ ಪಂಚಾಯಿತಿಯಿಂದಪುರಸಭೆಗೆ ಮೇಲ್ದರ್ಜೆಗೇರಿದ್ದರೂ, ರಾಜೀವ ಗಾಂಧಿ ವಸತಿ ನಿಗಮ ನಿಯಮಿತ (RGRHCL) ತಂತ್ರಾಂಶದಲ್ಲಿ ಮಾತ್ರ ಗ್ರಾಮ ಪಂಚಾಯಿತಿ ಎಂದು ನಮೂದಾಗಿವೆ. ಇದರಿಂದ ಕಳೆದ ವರ್ಷ ಅತಿವೃಷ್ಟಿಯಿಂದ ಮನೆ ಬಿದ್ದವರಿಗೆ ಪರಿಹಾರ ಬರುವುದು ತಡವಾಗಿದೆ.
ಏಪ್ರಿಲ್ 30, 2015ರಂದು ಅಂದಿನ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಸಿದ್ದಿಕ್ ಪಾಷಾ ಅವರು ಸುರಪುರ ತಾಲ್ಲೂಕಿನ ಕೆಂಭಾವಿಯನ್ನು ಗ್ರಾಮ ಪಂಚಾಯಿತಿಯಿಂದ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿದ್ದರು. ಆದರೆ,ರಾಜೀವ ಗಾಂಧಿ ವಸತಿ ನಿಗಮ ನಿಯಮಿತದಲ್ಲಿ ಮಾತ್ರ ಅಧಿಕಾರಿಗಳ ಯಡವಟ್ಟಿನಿಂದ ಗ್ರಾಮ ಪಂಚಾಯಿತಿ ಎಂದು ನಮೂದಾಗಿದೆ. ಇದು ಅಲ್ಲಿಯ ಜನರಿಗೆ ಪರಿಹಾರದ ಹಣ ಬರಲು
ತಡವಾಗಿದೆ.
ಕಳೆದ ವರ್ಷ ಸುರಿದ ಅಧಿಕ ಮಳೆಗೆ ಹಲವಾರು ಹಳೆ ಮನೆಗಳು ಬಿದ್ದಿವೆ. ಈ ಮನೆಗಳ ಜಿಪಿಎಸ್ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದರೆ ಮಾತ್ರ ಪರಿಹಾರದ ಹಣ ಬರುತ್ತದೆ. ಆದರೆ, ಈ ಎರಡು ಪಟ್ಟಣಗಳು ಪುರಸಭೆ ಎಂದಾಗಿದ್ದರೂ ದಾಖಲೆಯಲ್ಲಿ ಗ್ರಾಮ ಪಂಚಾಯಿತಿಎಂದುತೋರಿಸುತ್ತಿರುವರಿಂದ ತೊಡಕಾಗಿ ಪರಿಣಮಿಸಿದೆ. ಈ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿಯವರುರಾಜೀವ ಗಾಂಧಿ ವಸತಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರಿಗೆ ಇತ್ತೀಚೆಗೆ ಪತ್ರ ಬರೆದು ತಾಂತ್ರಿಕ ಸಮಸ್ಯೆ ಪರಿಹರಿಸಲು ಮನವಿ ಮಾಡಿದ್ದರು.
ಪತ್ರದಲ್ಲೇನಿದೆ?: ‘2020–21ನೇ ಸಾಲಿನಲ್ಲಿ ಅತಿವೃಷ್ಟಿಯಿಂದಸುರಪುರ ತಾಲ್ಲೂಕಿನಲ್ಲಿ ಹಾನಿಯಾದ ಮನೆಗಳ ಮಾಹಿತಿಯನ್ನುರಾಜೀವ ಗಾಂಧಿ ವಸತಿ ನಿಗಮ ನಿಯಮಿತ ತಂತ್ರಾಂಶದಲ್ಲಿ ದಾಖಲು ಮಾಡಲಾಗಿರುವ ಮನೆಗಳನ್ನು ಜಿಪಿಎಸ್ ಮಾಡಲು ಕಕ್ಕೇರಾ ಮತ್ತು ಕೆಂಭಾವಿ ಗ್ರಾಮ ಪಂಚಾಯಿತಿ ಎಂದು ತೋರಿಸುತ್ತಿದ್ದು, ಸದರಿ ಗ್ರಾಮ ಪಂಚಾಯಿತಿಗಳು 2015ರಲ್ಲಿ ಪುರಸಭೆ ಎಂದು ಮೇಲ್ದರ್ಗೇರಿವೆ. ತಂತ್ರಾಂಶದಲ್ಲಿ ಗ್ರಾಮ ಪಂಚಾಯಿತಿ ಬದಲಾಗಿ ಪುರಸಭೆ ಎಂದು ನಮೂದಿಸಿ ಜಿಪಿಎಸ್ ಮಾಡಲು ಅನುಕೂಲ ಮಾಡಿಕೊಡಬೇಕು’ ಎಂದು ಉಲ್ಲೇಖಿಸಿದ್ದಾರೆ.
ಎಷ್ಟು ಮನೆಗಳು ಬಿದ್ದಿವೆ?: ಕೆಂಭಾವಿ ಪುರಸಭೆಯ ವ್ಯಾಪ್ತಿಯಲ್ಲಿ 29, ಕಕ್ಕೇರಾಪುರಸಭೆಯ ವ್ಯಾಪ್ತಿಯಲ್ಲಿ 34 ಮನೆಗಳು ಸೇರಿದಂತೆ 63 ಮನೆಗಳು ಅತಿವೃಷ್ಟಿಯಿಂದ ಬಿದ್ದಿವೆ. ಇವುಗಳಿಗೆ ಜಿಪಿಎಸ್ ಆಗದ ಕಾರಣ ಇನ್ನೂ ಪರಿಹಾರದ ಹಣ ಬಂದಿಲ್ಲ.
‘ಕಕ್ಕೇರಾ ಮತ್ತು ಕೆಂಭಾವಿ ವ್ಯಾಪ್ತಿಯಲ್ಲಿ ಬಿದ್ದಿರುವ ಮನೆಗಳ ಜಿಪಿಎಸ್ ಮಾಡಲು ಇತ್ತೀಚೆಗೆ ತಂತ್ರಾಂಶದಲ್ಲಿ ಸರಿಪಡಿಸಲಾಗಿದೆ. ಗ್ರಾಮ ಪಂಚಾಯಿತಿ ಎಂದು ನಮೂದಿಸಿದ್ದರೂ ಪರಿಹಾರ ಅಷ್ಟೆ ಸಿಗುತ್ತದೆ. ಮುಂದಿನ ಬಾರಿ ಬದಲಾವಣೆ ಮಾಡಲಾಗುತ್ತದೆ. ಈಗಾಗಲೇ ಜಿಪಿಎಸ್ ಆರಂಭಿಸಲಾಗಿದೆ’ಎನ್ನುತ್ತಾರೆತಾಂತ್ರಿಕ ಇಲಾಖೆಯ ಅಧಿಕಾರಿಯೊಬ್ಬರು.
***
ಕಕ್ಕೇರಾ ಪುರಸಭೆ ಆಗಿದ್ದರೂ ಸರ್ಕಾರಿ ದಾಖಲೆಯಲ್ಲಿ ಗ್ರಾಮೀಣ ಎಂದು ತೋರಿಸುತ್ತದೆ. ನಾನು ಪುರಸಭೆ ಅಧ್ಯಕ್ಷನಾಗಿದ್ದಾಗ ಸರಿಪಡಿಸಲು ಮನವಿ ಮಾಡಲಾಗಿತ್ತು
ರಾಜೂ ಹವಾಲ್ದಾರ್, ಪುರಸಭೆ ಸದಸ್ಯ ಕಕ್ಕೇರಾ
***
2015 ರಿಂದ ಪುರಸಭೆ ಆಗಿದ್ದರೂ ತಾಂತ್ರಿಕ ದೋಷ ಸರಿಪಡಿಸಲು ಮನವಿ ಮಾಡಿದರೂ ಉಪಯೋಗವಾಗಿಲ್ಲ. ಶೀಘ್ರದಲ್ಲಿ ಪಿನ್‌ಕೋಡ್ ಸರಿಪಡಿಸಿದರೆ ಎಲ್ಲವೂ ಸರಿಯಾಗುತ್ತವೆ
ಶರಣಕುಮಾರ ಸೊಲ್ಲಾಪುರ, ಪುರಸಭೆ ಸದಸ್ಯ, ಕಕ್ಕೇರಾ
***
ನಾನು ಈಚೆಗೆ ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಈ ವಿಷಯದ ಬಗ್ಗೆ ಮೇಲಿನ ಅಧಿಕಾರಿಗಳಿಗೆ ಮನವಿ ಮಾಡಿ, ಶೀಘ್ರವಾಗಿ ಪರಿಹರಿಸಲಾಗುವುದು
ಓಂಕಾರ ಪೂಜಾರಿ, ಪುರಸಭೆ ಮುಖ್ಯಾಧಿಕಾರಿ, ಕಕ್ಕೇರಾ
***
ಸಮಸ್ಯೆಯ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸರ್ಕಾರದ ಮಟ್ಟದಲ್ಲಿರುವುದರಿಂದ ತಡವಾಗಿದೆ. ಜಿಲ್ಲಾಡಳಿತದಿಂದ ಜಿಪಿಎಸ್ ಮಾಡುವಂತೆ ಸೂಚನೆ ನೀಡಿದ್ದಾರೆ
ಪ್ರಕಾಶ ಭಾಗ್ಲಿ, ಮುಖ್ಯಾಧಿಕಾರಿ ಕೆಂಭಾವಿ
***
ಕೆಂಭಾವಿಯು ಪುರಸಭೆಯಾಗಿ ಮೇಲ್ದರ್ಜೆಗೇರಿದ್ದರೂ ಇಲಾಖೆಯ ಕಾಗದಗಳಲ್ಲಿ ಗ್ರಾ.ಪಂ ಎಂದು ನಮೂದಾಗಿದ್ದು, ಸರ್ಕಾರದ ನಿರ್ಲಕ್ಷ್ಯ ಧೋರಣೆ ಕಾಣುತ್ತಿದೆ
ಮಹಿಪಾಲರೆಡ್ಡಿ ಡಿಗ್ಗಾವಿ, ಪುರಸಭೆ ಸದಸ್ಯ ಕೆಂಭಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.