ADVERTISEMENT

ಖಾಸಾಮಠಕ್ಕೆ ಎಂದೂ ಅಸಹಕಾರ ತೋರಿಲ್ಲ

ಗುರುಮಠಕಲ್‌ ಖಾಸಾಮಠಕ್ಕೆ ಭೇಟಿ ನೀಡಿದ ಶಿವಮೂರ್ತಿ ಮುರುಘರಾಜೇಂದ್ರ ಶರಣರು

ಮಲ್ಲೇಶ್ ನಾಯಕನಹಟ್ಟಿ
Published 17 ಡಿಸೆಂಬರ್ 2018, 13:29 IST
Last Updated 17 ಡಿಸೆಂಬರ್ 2018, 13:29 IST
ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ
ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ   

ಯಾದಗಿರಿ: ಹಲವು ವರ್ಷಗಳಿಂದ ಜಿಲ್ಲೆಯ ಗುರುಮಠಕಲ್‌ನ ಖಾಸಾಮಠದೊಂದಿಗೆ ಅಂತರ ಕಾಯ್ದುಕೊಂಡಿದ್ದ ಚಿತ್ರದುರ್ಗದ ಮುರುಘ ಮಹಾಸಂಸ್ಥಾನ ಪೀಠಾಧಿಪತಿ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಖಾಸಾಮಠಕ್ಕೆ ಭಾನುವಾರ ಭೇಟಿ ನೀಡುವ ಮೂಲಕ ಭಕ್ತರಲ್ಲಿ ಅಚ್ಚರಿ ಹುಟ್ಟುಹಾಕಿದರು.

2008ರ ನವೆಂಬರ್‌ನಲ್ಲಿ ಜಿಲ್ಲೆಯ ಖಾಸಾಮಠದ ಪೀಠಾಧ್ಯಕ್ಷರಾಗಿದ್ದ ಶಾಂತವೀರ ಶಾಂತವೀರ ಶ್ರೀಗಳನ್ನು ಧಾರವಾಡದ ಶಾಖಾಮಠದ ಪೀಠಾಧಿಪತಿಯನ್ನಾಗಿಸಲು ಚಿತ್ರದುರ್ಗದ ಮುರುಘ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಮುಂದಾಗಿದ್ದರು. ಆಗ, ಜಿಲ್ಲೆಯ ಭಕ್ತರಿಂದ ಬಹಳ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ, ಶಾಂತವೀರ ಶ್ರೀಗಳು, ‘ಧಾರವಾಡ ಮಠದ ನಿಯೋಜನೆ ನನಗೂ ಇಷ್ಟವಿರಲಿಲ್ಲ. ಒತ್ತಾಯ ಪೂರ್ವಕವಾಗಿ ಸಹಿ ಪಡೆಯಲಾಗಿದೆ’ ಎಂಬುದಾಗಿ ಬಹಿರಂಗ ಹೇಳಿಕೆ ನೀಡಿದ್ದರು.

ಶಾಂತವೀರ ಶ್ರೀಗಳ ಬಹಿರಂಗ ಹೇಳಿಕೆಯಿಂದ ಚಿತ್ರದುರ್ಗದ ಶ್ರೀಗಳು ಅಸಮಾಧಾನಕ್ಕೆ ಒಳಗಾಗಿದ್ದರು. ಭಕ್ತರ ಆಗ್ರಹದ ಮೇರೆಗೆ ಖಾಸಾಮಠಕ್ಕೆ ಗುರುಶಾಂತವೀರ ಅವರು ಪುನಃ ಪೀಠಾಧ್ಯಕ್ಷರಾದಾಗ ಶಿವಮೂರ್ತಿ ಶರಣರು ಖಾಸಾಮಠದ ಎಲ್ಲಾ ಚಟುವಟಿಕೆಗಳಿಂದ ದೂರ ಉಳಿದು, ಅಂತರ ಕಾಯ್ದುಕೊಂಡಿದ್ದರು. ಖಾಸಾಮಠದಲ್ಲಿ ನಡೆಯುವ ಯಾವುದೇ ಚಟುವಟಿಕೆಗಳಿಗೆ ಮಹಾಸಂಸ್ಥಾನದ ಪೀಠಾಧಿಪತಿಗೆ ಆಮಂತ್ರಣ ನೀಡುತ್ತಿರಲಿಲ್ಲ. ಮಹಾಸಂಸ್ಥಾನದಲ್ಲಿ ಹಮ್ಮಿಕೊಳ್ಳುವ ಯಾವ ಸಭೆ, ಸಮಾರಂಭಗಳಿಗೂ ಖಾಸಾಮಠದ ಶ್ರೀಗಳಿಗೆ ಆಹ್ವಾನ ಇರುತ್ತಿರಲಿಲ್ಲ.

ADVERTISEMENT

2014ರಲ್ಲಿ ಒಮ್ಮೆ ಖಾಸಾಮಠದತ್ತ ಕಣ್ಣುಹಾಯಿಸಿದ್ದ ಶಿವಮೂರ್ತಿ ಶರಣರು ಕೆಲನಿಮಿಷ ಮಾತ್ರ ಇದ್ದು, ನಿರ್ಗಮಿಸಿದ್ದರು. ಇದರಿಂದ ಚಿತ್ರದುರ್ಗ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ ಮತ್ತು ಶಾಖಾ ಮಠ ಖಾಸಗಿ ಮಠದ ಮಧ್ಯೆ ದಶಕ ಸಂವತ್ಸರಗಳ ಮಟ್ಟಿಗೆ ಸಂಬಂಧ ಹಳಸಿತ್ತು. ಕ್ರಮೇಣ ಖಾಸಾಮಠದ ಅಭಿವೃದ್ಧಿ ಆಮೆಗತಿ ಸಾಗಿದೆ ಎಂಬುದಾಗಿ ಭಕ್ತರು ಬೇಸರಗೊಂಡಿದ್ದರು.

ಇಂಥಾ ಸಮಯದಲ್ಲಿ ಖಾಸಾಮಠ ಮತ್ತು ಚಿತ್ರದುರ್ಗ ಮಹಾ ಸಂಸ್ಥಾನದ ಶರಣರ ಮಧ್ಯೆ ಮತ್ತೆ ಪ್ರೀತಿ ಮೊಳೆತಿದೆ. ಭಾನುವಾರ ಅನ್ಯ ಕಾರ್ಯ ನಿಮಿತ್ತ ಜಿಲ್ಲೆಗೆ ಭೇಟಿ ನೀಡಿದ್ದ ಶಿವಮೂರ್ತಿ ಮುರುಘರಾಜೇಂದ್ರ ಶರಣರು ಖಾಸಾಮಠದಲ್ಲಿ ತಂಗುವ ಮೂಲಕ ಇಷ್ಟಲಿಂಗ ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಿದ್ದಾರೆ. ಖಾಸಾಮಠದ ಅಭಿವೃದ್ಧಿ ಮತ್ತು ಶಾಂತಾವೀರ ಶ್ರೀಗಳ ಬಗ್ಗೆ ಮುಕ್ತವಾಗಿ ಶ್ಲಾಘಿಸಿದ್ದಾರೆ. ಇದರಿಂದಾಗಿ ಮತ್ತೆ ಖಾಸಾಮಠ ಚಿತ್ರದುರ್ಗದ ಮಹಾಸಂಸ್ಥಾನದ ಕೃಪೆಗೆ ಪಾತ್ರವಾಗಿದೆ ಎಂಬುದಾಗಿ ಮಠದ ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ.

‘ಧಾರವಾಡ ಮಠದ ನಿಯೋಜನೆ ಪ್ರಕರಣದಿಂದ ಮಹಾಸಂಸ್ಥಾನ ಮತ್ತು ಖಾಸಾಮಠದ ಮಧ್ಯೆ ಅಂತ ಉಂಟಾಗಿದ್ದು ನಿಜ. ಆದರೆ, ಹಿರಿಯ ಶ್ರೀಗಳ ಬಗ್ಗೆ ಎಂದೂ ಅಗೌರವ ತೋರಿಲ್ಲ. ಅದೊಂದು ಕೆಟ್ಟಸಮಯ ಅಷ್ಟೇ. ಮಹಾಸಂಸ್ಥಾನದ ಸಹಕಾರ ಇಲ್ಲದೇ ಭಕ್ತರೊಟ್ಟಿಗೆ ಸೇರಿ ಖಾಸಾಮಠ ಅಭಿವೃದ್ಧಿಪಡಿಸಿರುವ ಬಗ್ಗೆ ಶಿವಮೂರ್ತಿ ಶರಣರ ಮೆಚ್ಚುಗೆಗೆ ಕಾರಣವಾಗಿದೆ. ಹಾಗಾಗಿಯೇ, ಅವರು ಖಾಸಾಮಠದ ಮೇಲೆ ವಿಶೇಷ ಪ್ರೀತಿ ತೋರಿದ್ದಾರೆ. ಅವರ ಪ್ರೀತಿ, ಮಾರ್ಗದರ್ಶನ ಎಂದೂ ಬೇಡುತ್ತೇವೆ’ ಎಂದು ಖಾಸಾಮಠದ ಪೀಠಾಧಿಪತಿ ಶಾಂತಾವೀರ ಗುರು ಮುರುಘರಾಜೇಂದ್ರ ಶರಣರು ಹೇಳಿದರು.

‘ಧಾರವಾಡ ಮಠ ನಿಯೋಜನೆ ಪ್ರಕರಣದ ನಂತರ ಖಾಸಾಮಠದತ್ತ ಹೆಚ್ಚು ಬಂದಿಲ್ಲ. ಹಾಗಂತ, ಮಠ ಮತ್ತು ಪೀಠಾಧಿಪತಿ ಬಗ್ಗೆ ಮಹಾಸಂಸ್ಥಾನ ಎಂದೂ ಅವಗಣನೆ ತೋರಿಲ್ಲ. ಮಠದ ಭಕ್ತರು ಈ ಕುರಿತು ಯಾವ ಅಸಮಾಧಾನವನ್ನೂ ತೋಡಿಕೊಂಡಿಲ್ಲ. ಖಾಸಮಠ ಮಹಾಸಂಸ್ಥಾನದ ಶಾಖಾಮಠ. ಅಲ್ಲಿನ ಕಿರಿಯ ಶ್ರೀಗಳಿಗೆ ಒಂದಷ್ಟು ಮಾರ್ಗದರ್ಶನ ನೀಡುವುದು ನಮ್ಮ ವಾಬ್ದಾರಿಯೂ ಹೌದು. ಹಾಗಾಗಿ, ಭೇಟಿ ನೀಡಿದ್ದೇವೆ. ಅಗತ್ಯ ಅನಿಸಿದ ಸಂದರ್ಭದಲ್ಲಿ ಮಹಾಸಂಸ್ಥಾನ ಮಠದಿಂದ ಖಾಸಾಮಠಕ್ಕೆ ಎಲ್ಲ ರೀತಿಯಿಂದಲೂ ಸಹಕಾರ ನೀಡಲಿದೆ’ ಎಂದು ಚಿತ್ರದುರ್ಗದ ಮುರುಘರಾಜೇಂದ್ರ ಮಹಾಸಂಸ್ಥಾನ ಪೀಠಾಧಿಪತಿ ಶಿವಮೂರ್ತಿ ಶರಣರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

**

ಸೌಹಾರ್ದ ಸಂಬಂಧಕ್ಕೆ ಶರಣಸಂಸ್ಕೃತಿ ಕಾರಣ

ಚಿತ್ರದುರ್ಗದಲ್ಲಿ ಈಚೆಗೆ ನಡೆದ ಶರಣ ಸಂಸ್ಕೃತಿ ಉತ್ಸವ ಖಾಸಾಮಠ ಮತ್ತು ಮಹಾಸಂಸ್ಥಾನ ಪೀಠಾಧಿಪತಿಗಳ ಮಧ್ಯೆ ಪ್ರೀತಿಯ ಎರಕ ಹೊಯ್ದಿದೆ ಎಂಬುದಾಗಿ ಖಾಸಾಮಠದ ಭಕ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಾಸಂಸ್ಥಾನ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಅತ್ಯಂತ ದೊಡ್ಡ ಕಾರ್ಯಕ್ರಮ. ಇದರಲ್ಲಿ ಶಾಂತವೀರ ಶ್ರೀಗಳು ಭಾಗವಹಿಸಿದ್ದರು. ಪರಿಣಾಮವಾಗಿ ಹಿರಿಯ ಶ್ರೀಗಳು ಖಾಸಾಮಠಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದ್ದಾರೆ. ಖಾಸಾಮಠದಲ್ಲೂ ಶರಣ ಸಂಸ್ಕೃತಿ ಉತ್ಸವ ಜರುಗಿಸುವಂತೆ ಭಕ್ತರಿಗೆ ಶಿವಮೂರ್ತಿ ಶರಣರು ಸಲಹೆ ನೀಡಿದ್ದು, ಭಕ್ತರು ಶರಣ ಸಂಸ್ಕೃತಿ ಉತ್ಸವ ನಡೆಸಲು ಉತ್ಸುಕತೆ ತೋರಿದ್ದಾರೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.