ADVERTISEMENT

ಇದ್ದೂ ಇಲ್ಲದಂತಾದ ಚೆಕ್‌ಪೋಸ್ಟ್

ಮುಡಬೂಳ: ಕಟ್ಟುನಿಟ್ಟಾಗಿ ಕೋವಿಡ್ ತಪಾಸಣೆ ನಡೆಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 3:20 IST
Last Updated 5 ಜನವರಿ 2022, 3:20 IST
ಶಹಾಪುರ ತಾಲ್ಲೂಕಿನ ಮುಡಬೂಳ ಕ್ರಾಸ್ ಬಳಿ ಸ್ಥಾಪಿಸಿರುವ ಚೆಕ್‌ಪೋಸ್ಟ್
ಶಹಾಪುರ ತಾಲ್ಲೂಕಿನ ಮುಡಬೂಳ ಕ್ರಾಸ್ ಬಳಿ ಸ್ಥಾಪಿಸಿರುವ ಚೆಕ್‌ಪೋಸ್ಟ್   

ಶಹಾಪುರ: ನೆರೆ ರಾಜ್ಯದಿಂದ ಆಗಮಿ ಸುವ ಪ್ರಯಾಣಿಕರು ತಪಾಸಣೆ ಮಾಡಲು ತಾಲ್ಲೂಕಿನ ಮುಡಬೂಳ ಕ್ರಾಸ್ ಬಳಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಆದರೆ ಅಲ್ಲಿ ಕನಿಷ್ಠ ಸೌಲಭ್ಯದ ಕೊರತೆಯ ಜತೆಗೆ ತಪಾಸಣೆ ಮಾಡಲು ಆರೋಗ್ಯ ಇಲಾಖೆಯ ಸಿಬ್ಬಂದಿಯು ನಿಗದಿತ ಸಮಯಕ್ಕೆ ಬರುತ್ತಿಲ್ಲ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ.

‘ಪ್ರತಿದಿನ ಮಹಾರಾಷ್ಟ್ರದಿಂದ ಬೆಳಿಗ್ಗೆ 9 ಗಂಟೆಯ ಒಳಗೆ 4 ಖಾಸಗಿ ಬಸ್ ಜಿಲ್ಲೆಯನ್ನು ಪ್ರವೇಶ ಮಾಡುತ್ತವೆ. ತಪಾಸಣೆಯ ಕೇಂದ್ರದಲ್ಲಿ ಯಾರು ಇರುವುದಿಲ್ಲ. 10 ಗಂಟೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ ಒಂದಿಷ್ಟು ಕಾಟಾಚಾರಕ್ಕೆ ತಪಾಸಣೆ ಮಾಡಿ ಹಾಜರಿ ಪುಸ್ತಕದಲ್ಲಿ ನಮೂದಿಸುತ್ತಾರೆ. ಅಷ್ಟರಲ್ಲಿ ನೂರಾರು ಬಂದಿ ಮಹಾರಾಷ್ಟ್ರದಿಂದ ಆಗಮಿಸಿದ ಪ್ರಯಾಣಿಕರು ನಗರವನ್ನು ಪ್ರವೇಶ ಮಾಡಿ ತಮ್ಮ ಮನೆ ಸೇರಿಕೊಳ್ಳುತ್ತಾರೆ. ‌ಹೆದ್ದಾರಿಯ ಮೇಲೆ ದಿನಾಲು ತಹಶೀಲ್ದಾರ್ ಹಾಗೂ ಇತರ ಉನ್ನತಾಧಿಕಾರಿಗಳು ಇದೇ ರಸ್ತೆಯ ಮೇಲೆ ಪ್ರಯಾಣಿಸುತ್ತಿದ್ದರೂ ತಪಾಸಣೆಯ ಕೇಂದ್ರದ ಕಡೆ ಕಣ್ಣೆತ್ತಿ ನೋಡುತ್ತಿಲ್ಲ. ಇದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಮುಡಬೂಳ ಗ್ರಾಮದ ಜನರು ಆರೋಪಿದರು.

‘ನಮಗೆ ನೆರೆ ರಾಜ್ಯ ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚು ಆತಂಕವಿದೆ. ಕೋವಿಡ್ ಆರಂಭದಲ್ಲಿ ಬಂದಾಗ ಶಹಾಪುರ ನಗರದಲ್ಲಿ ಕ್ವಾರಂಟೈನ್ ಮಾಡಿದಾಗ ಅತಿ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಿಂದ ಬಂದ ಜನತೆಯಲ್ಲಿ ಕೊರೊನಾ ಆವರಿಸಿದ್ದು, ಇನ್ನೂ ಜನತೆಯಲ್ಲಿ ಹಸಿರಾಗಿದೆ. ಈಗ ಮತ್ತೆ ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣಗಳ ಜತೆಯ ಓಮೈಕ್ರಾನ್ ಪ್ರಕರಣ ಜಾಸ್ತಿಯಾಗಿರುವುದು ವರದಿಯಾಗುತ್ತಿದೆ. ಆದರೆ ಗಡಿಯಲ್ಲಿ ನಿರ್ಮಿಸಿದ ತಪಾಸಣೆ ಕೇಂದ್ರ ನಗಣ್ಯವಾಗಿದೆ. ಕೇವಲ ಪತ್ರಿಕೆಗಳಲ್ಲಿ ಮಾತ್ರ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳ ಹೇಳಿಕೆ ಸೀಮಿತವಾಗಿದೆ’ ಎಂದು ಮುಡಬೂಳ ಗ್ರಾಮದ ರೈತ ಮುಖಂಡ ಅಶೋಕ ಮಲ್ಲಾಬಾದಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮುನ್ನೆಚ್ಚರಿಕೆ ಕ್ರಮವಾಗಿ ಕಡ್ಡಾಯವಾಗಿ ತಪಾಸಣೆ ಮಾಡಿದರೆ ಯಾವುದೇ ತೊಂದರೆ ಆಗುವುದಿಲ್ಲ. ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ತಪಾಸಣೆಯ ಕೇಂದ್ರದಲ್ಲಿ ಸರದಿಯಂತೆ ತಂಡವನ್ನು ರಚಿಸಿ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ತಕ್ಷಣವೆ ಅಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಕನಿಷ್ಠ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

*ಚೆಕ್‌ಪೋಸ್ಟ್ ಬಳಿ ಶೆಡ್ ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ ಆದೇಶ ನೀಡಲಾಗಿದೆ. ಇನ್ನೂ ನಿರ್ಮಿಸಿಲ್ಲ. ಆರೋಗ್ಯ ಸಿಬ್ಬಂದಿಯನ್ನು ನೇಮಿಸಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಲು ಸೂಚಿಸಲಾಗುವುದು

- ಮಧುರಾಜ ಕೂಡ್ಲಿಗಿ, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.