ADVERTISEMENT

ಯಾದಗಿರಿ ಜಿಲ್ಲೆಯಲ್ಲಿರುವ ಅವೈಜ್ಞಾನಿಕ ಹಂಪ್ಸ್‌ ತೆರವುಗೊಳಿಸಲು ಸೂಚನೆ

ಜಿಲ್ಲೆಯಲ್ಲಿ ಮಾರ್ಚ್ ಅಂತ್ಯದೊಳಗೆ ಹಂಪ್ಸ್‌ಗಳಿಗೆ ಬಣ್ಣ ಹಾಕಲು ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 2:07 IST
Last Updated 31 ಜನವರಿ 2021, 2:07 IST
ಯಾದಗಿರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಮಾತನಾಡಿದರು
ಯಾದಗಿರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಮಾತನಾಡಿದರು   

ಯಾದಗಿರಿ: ಮುಂಬರುವ ಮಾರ್ಚ್ ಅಂತ್ಯದೊಳಗೆ ಜಿಲ್ಲೆಯ ಎಲ್ಲ ರಸ್ತೆಗಳಲ್ಲಿರುವ ಹಂಪ್ಸ್‌‌ಗಳಿಗೆ ವೈಜ್ಞಾನಿಕ ರೀತಿಯಲ್ಲಿ ಬಣ್ಣ ಬಳಿದು, ರಸ್ತೆ ಉಬ್ಬು ಇರುವ ಎಚ್ಚರಿಕೆಯ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ಇತರೆ ಇಲಾಖೆಗಳಿಂದ ನಿರ್ಮಾಣವಾಗುವ ವಿವಿಧ ರೀತಿಯ ರಸ್ತೆಗಳಲ್ಲಿ ಹಾಕಲಾದ ಹಂಪ್ಸ್‌ಗಳು ಸಂಚಾರದ ವೇಳೆ ವಾಹನ ಸವಾರರ ಗಮನಕ್ಕೆ ಬರಬೇಕು. ಇಲ್ಲದಿದ್ದಲ್ಲಿ ಅವಘಡಗಳಾಗುವ ಸಂಭವವಿರುತ್ತದೆ. ಹೀಗಾಗಿ ಮುಂಬರುವ ಮಾರ್ಚ್ ಅಂತ್ಯದೊಳಗೆ ಹಂಪ್ಸ್‌‌ಗಳಿಗೆ ಬಣ್ಣ ಬಳಿದು, ಎಚ್ಚರಿಕಾ ಫಲಕಗಳನ್ನು ಅಳವಡಿಸಬೇಕು. ಅವೈಜ್ಞಾನಿಕ ಹಂಪ್ಸ್‌ಗಳನ್ನು ತೆರವುಗೊಳಿಸಿ, ವೈಜ್ಞಾನಿಕವಾಗಿ ಅಳವಡಿಸುವಂತೆ ರಸ್ತೆ ನಿರ್ಮಾಣ ಎಜೆನ್ಸಿಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ADVERTISEMENT

ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಈ ಕುರಿತು ಪರಿಶೀಲಿಸಬೇಕು. ರಸ್ತೆ ಹಂಪ್ಸ್ ಬರುವ 500 ಮೀಟರ್‌ಗಳ ಹಿಂದೆಯೇ ಹಂಪ್ಸ್ ಇರುವ ಬಗ್ಗೆ ಫಲಕ ಅಳವಡಿಸಬೇಕು. ಯಾವ ರಸ್ತೆಗಳಲ್ಲಿ ಪ್ರಗತಿ ಕಾಮಗಾರಿ ಅಥವಾ ದುರಸ್ತಿ ನಡೆದರೂ ಆ ಕುರಿತು ಫಲಕಗಳನ್ನು ಅಳವಡಿಸಬೇಕು. ಯಾವುದೇ ಕಾರಣಕ್ಕೂ ವಾಹನ ಸವಾರರಿಗೆ ತೊಂದರೆಯಾಗಬಾರದು ಎಂದು ತಿಳಿಸಿದರು.
ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ವಿವಿಧ ಶಾಲೆ–ಕಾಲೇಜುಗಳಲ್ಲಿ ಪೊಲೀಸ್, ಸಾರಿಗೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಜಾಗೃತಿ ಮೂಡಿಸಲು ವಿವಿಧ ರೀತಿಯ ಸ್ಪರ್ಧೆ ಹಮ್ಮಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿ, ಮಿತಿ ಮೀರಿದ ಸರಕು ಸಾಗಾಣಿಕೆ ಹಾಗೂ ಮಿತಿಗಿಂತಲೂ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ವಾಹನಗಳ ಚಾಲಕರ ಪರವಾನಗಿ ಅಮಾನತುಗೊಳಿಸಿ, ಈ ರೀತಿಯ ದಾಳಿ ಹೆಚ್ಚು ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ್ ಅವರಿಗೆ ತಿಳಿಸಿದರು.

ಜಿಲ್ಲೆಯ ಎಲ್ಲ ರಸ್ತೆಗಳಲ್ಲಿ 14 ಬ್ಲಾಕ್ ಸ್ಪಾಟ್‍ಗಳನ್ನು ಗುರುತಿಸಲಾಗಿದೆ. ಅಲ್ಲಿ ಕಡ್ಡಾಯವಾಗಿ ಗುರುತಿನ ಫಲಕ ಅಳವಡಿಸಬೇಕು. ಹೊಸದಾಗಿ ಬರುವ ವಾಹನಗಳು ಕಡ್ಡಾಯವಾಗಿ ನೋಂದಾಯಿಸಿರಬೇಕು. ಆ ವಾಹನಗಳು ನಂಬರ್ ಪ್ಲೇಟ್‍ನೊಂದಿಗೆ ಹೊರಬರಬೇಕು. ದ್ವಿಚಕ್ರವಾಹನಗಳ ಸವಾರರು ಹೆಲ್ಮೆಟ್ ಬಳಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಸೇರಿದಂತೆ ರಸ್ತೆ ನಿರ್ಮಾಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.