ADVERTISEMENT

ನುಲಿಯ ಚಂದಯ್ಯ ಜಯಂತಿ: ಶರಣರ ವಿಚಾರಧಾರೆ ಬದುಕಿಗೆ ದಾರಿದೀಪ 

ಎಡಿಸಿ ರಮೇಶ ಕೋಲಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:42 IST
Last Updated 10 ಆಗಸ್ಟ್ 2025, 2:42 IST
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಶರಣ ನುಲಿಯಾ ಚಂದಯ್ಯ ಅವರ ಜಯಂತಿ ಆಚರಿಸಲಾಯಿತು
ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಶರಣ ನುಲಿಯಾ ಚಂದಯ್ಯ ಅವರ ಜಯಂತಿ ಆಚರಿಸಲಾಯಿತು   

ಯಾದಗಿರಿ: ‘ಬಸವಾದಿ ಶರಣರ ವಿಚಾರಧಾರೆಗಳು ಬದುಕಿಗೆ ದಾರಿದೀಪವಾಗಿವೆ. ನುಲಿಯ ಚಂದಯ್ಯನವರ ಆದರ್ಶಗಳನ್ನು ಪಾಲಿಸುವುದರ ಜೊತೆಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ನುಲಿಯ ಚಂದಯ್ಯ ಜಯಂತ್ಯುತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನುಡಿದಂತೆ ನಡೆದ ನೂಲಿಯ ಚಂದಯ್ಯ ಅವರು ಶ್ರೇಷ್ಠ ಕಾಯಕ ಜೀವಿ. ಅವರ ವಚನಗಳಲ್ಲಿ ಸಮ ಸಮಾಜ ನಿರ್ಮಾಣದ ತಾತ್ವಿಕ ಚಿಂತನೆಗಳು ಅಡಗಿವೆ. ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು’ ಎಂದರು.

ADVERTISEMENT

‘ಸಮಾಜದವರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಕಡೆಗೆ ಹೆಚ್ಚು ಗಮನ ವಹಿಸಬೇಕು. ವಚನಗಳಲ್ಲಿನ ವಿಚಾರಗಳನ್ನು ಸಹ ಅನುಷ್ಠಾನಕ್ಕೆ ತರಬೇಕು’ ಎಂದು ಹೇಳಿದರು.

ಸುಭಾಶ್ಚಂದ್ರ ಕೌಲಗಿ ಮಾತನಾಡಿ, ‘ನುಲಿಯ ಚಂದಯ್ಯ ಅವರು 12ನೇ ಶತಮಾನದ ದಾರ್ಶನಿಕ ಬಸವಣ್ಣನವರ ಸಮಕಾಲಿನವರು. ಅವರು ರಚಿಸಿರುವ ಕಾಯಕ ಮತ್ತು ದಾಸೋಹದ ವಚನಗಳಲ್ಲಿ ಸಮ ಸಮಾಜ ನಿರ್ಮಾಣದ ತಾತ್ವಿಕ ಚಿಂತನೆಗಳಿವೆ’ ಎಂದರು.

‘ನುಲಿಯ ಚಂದಯ್ಯ ‌ಅವರು ತಮ್ಮ ವಚನಗಳ ಮೂಲಕ ಕಾಯಕ ತತ್ವವನ್ನು ಸಾರಿದ ಶ್ರೇಷ್ಠ ವಚನಕಾರ. ಕಾಯಕವನ್ನು ಭಾವಶುದ್ಧವಾಗಿ ಹಾಗೂ ಅಂತಃಕರುಣೆಯ ಮೂಲಕ ಮಾಡಬೇಕೆಂಬುದನ್ನು ತಿಳಿಸಿದ್ದಾರೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಪಿಎಸ್ಐ ನಾಗಮ್ಮ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಕರವೇ ಕಚೇರಿಯಲ್ಲಿ ಆಚರಣೆ

ನಗರದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ಶಿವಶರಣ ನೂಲಿಯ ಚಂದಯ್ಯ ಅವರ ಜಯಂತಿ ಆಚರಿಸಲಾಯಿತು. ಕರವೇ ಜಿಲ್ಲಾ ಪ್ರಧಾನ ಸಂಚಾಲಕ ಹುಲಗಪ್ಪ ಭಜಂತ್ರಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

ಬಳಿಕ ಮಾತನಾಡಿದ ಅವರು ‘ಕಾಯಕಯೋಗಿ ಶಿವಶರಣ ನೂಲಿಯ ಚಂದಯ್ಯನವರು ಕೊರಮ (ಭಜಂತ್ರಿ) ಸಮಾಜದ ಕುಲಪುರುಷರಾಗಿದ್ದಾರೆ. ಅವರ ಕಾಯಕ ನಿಷ್ಠೆ ಹಾಗೂ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳುವ ಮೂಲಕ ಕಾಯಕ ಶ್ರೇಷ್ಠತೆ ಎತ್ತಿಹಿಡಿದು ಬದುಕಬೇಕು’ ಎಂದರು.‌

ಪ್ರಮುಖರಾದ ಹಣಮಂತ ಯಾದಗಿರಿ ಮರೆಪ್ಪ ಹೆಡಗಿಮುದ್ರಿ ಸಾಬಣ್ಣ ವರ್ಕನಳ್ಳಿ ಸಿದ್ದು ಹೆಡಗಿಮುದ್ರಿ ಆಶಪ್ಪ ಯಾದಗಿರಿಮ ಯಲ್ಲಪ್ಪ ಅಂಜಪ್ಪ ಮಹೇಶ ಭೀಮರಾಯ ಹೆಡಗಿಮುದ್ರ ಭೀಮರಾಯ ವರ್ಕನಳ್ಳಿ ಕಾಶಿನಾಥ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.