ಶಹಾಪುರ: ಇಲ್ಲಿನ ಟಿಎಪಿಸಿಎಂಎಸ್‌ನ ಆಹಾರ ಧಾನ್ಯ ಉಗ್ರಾಣ ಕೇಂದ್ರದಲ್ಲಿನ ಸುಮಾರು ₹ 2 ಕೋಟಿ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ ಪ್ರಕರಣದ ಸಂಬಂಧ ಬಂಧನದ ಭೀತಿ ಎದುರಿಸುತ್ತಿರುವ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕ ಭೀಮರಾಯ ಹಾಗೂ ಹಿಂದಿನ ಡಿ.ಡಿ ಪ್ರಭು ದೊರೆ ಅವರು ನಿರೀಕ್ಷಣಾ ಜಾಮೀನು ಕೋರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಆರು ಜನರು ಜಾಮೀನು ಕೋರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ಪ್ರಕರಣದ ತನಿಖಾಧಿಕಾರಿಯಾದ ಜಾವೇದ ಇನಾಂದಾರ ಅವರು, ‘ಪ್ರಕರಣ ಇನ್ನುಳಿದ ಆರೋಪಿಗಳಾದ ಗುರುನಾಥರೆಡ್ಡಿ ಪಾಟೀಲ,ಆಹಾರ ಇಲಾಖೆಯ ಅಧಿಕಾರಿಗಳಾದ ಭೀಮರಾಯ, ಹಿಂದಿನ ಡಿ.ಡಿ ಪ್ರಭು ದೊರೆ ಹಾಗೂ ಇತರ ಸಿಬ್ಬಂದಿಯನ್ನು ದಸ್ತಗಿರಿ ಮಾಡುವ ಕುರಿತು ಬಾಕಿ ಇದೆ' ಎಂದು ಜಾಮೀನು ಅರ್ಜಿಗೆ ಸರ್ಕಾರಿ ವಕೀಲರ ಮೂಲಕ ತಕರಾರು ಸಲ್ಲಿಸಿದ್ದರು. ಇದರ ವಾಸನೆ ಅರಿತ ಅಧಿಕಾರಿಗಳು ಯಾವ ಸಮಯದಲ್ಲಿ ನಮ್ಮನ್ನು ಬಂಧಿಸಬಹುದು ಎಂದು ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಲು ಹತ್ತಿದ್ದಾರೆ. ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಜನವರಿ2 ವರೆಗೆ ರಜೆ ಮೇಲೆ ತೆರಳಿದ್ದರಿಂದ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತಿದೆ ಎಂದು ವಕೀಲರೊಬ್ಬರು ಮಾಹಿತಿ ನೀಡಿದರು.
ಟಿಎಪಿಸಿಎಂಎಸ್‌ನ ಅಧ್ಯಕ್ಷ ಗುರುನಾಥರಡ್ಡಿ ಪಾಟೀಲ ಹಳಿಸಗರ ಸೇರಿ ಆಡಳಿತ ಮಂಡಳಿಯ 13 ಮಂದಿ ನಿರ್ದೇಶಕರಿಗೆ ಗುರುವಾರ ಜಿಲ್ಲಾ ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ದೊರಕಿದೆ. ನಮಗೂ ನಿರೀಕ್ಷಣಾ ಜಾಮೀನು ಸಿಗುವ ಭರವಸೆಯಿದೆ ಎಂದು ಆರೋಪಿಗಳ ಪರ ವಕೀಲರು ಆಶಾ ಭಾವನೆ ವ್ಯಕ್ತಪಡಿಸಿದರು.
ಅಕ್ಕಿ ನಾಪತ್ತೆ ಪ್ರಕರಣ ಸಂಬಂಧ ಅವರು ನ.25ರಂದು ಟಿಎಪಿಸಿಎಂಎಸ್‌ನ ವ್ಯವಸ್ಥಾಪಕ ಶಿವರಾಜ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರ ವಿರುದ್ಧ ಶಹಾಪುರ ಠಾಣೆಯಲ್ಲಿ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕ ಭೀಮರಾಯ ಅವರು ದೂರು ದಾಖಲಿಸಿದ್ದರು.
ಆದರೆ ಈಗ ಪ್ರಕರಣದ ಸತ್ಯಾಸತ್ತತೆ ಹೊಸ ದಿಕ್ಕಿನತ್ತ ಚಲಿಸುತ್ತಿದ್ದಂತೆ ದೂರುದಾರನಿಗೆ ಬಂಧನದ ಭೀತಿ ಎದುರಾಗಿದೆ. ಈಗಾಗಲೇ ತನಿಖಾಧಿಕಾರಿ ವಿಚಾರಣೆಗಾಗಿ ಬರುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಮಾನತು ಇಲ್ಲ:
‘ಅಕ್ಕಿ ನಾಪತ್ತೆ ಪ್ರಕರಣ ದಾಖಲಾಗಿ 28 ದಿನ ಸಂದಿವೆ. ತನಿಖಾಧಿಕಾರಿ ಜಾವೇದ ಇನಾಂದಾರ ಅವರು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಉಪ ನಿರ್ದೇಶಕ ಭೀಮರಾಯ ಅವರನ್ನು ದಸ್ತಗಿರಿ ಮಾಡುವ ಬಾಕಿ ಎಂದು ಹೇಳಿದ್ದಾರೆ. ಆದರೆ ಇಂದಿಗೂ ಬಂಧಿಸಿಲ್ಲ. ಅಲ್ಲದೇ ಆಹಾರ ನಿಗಮದ ಉನ್ನತಾಧಿಕಾರಿಗಳು ಭೀಮರಾಯ ಅವರನ್ನು ಅಮಾನತು ಮಾಡದೆ ರಕ್ಷಣೆಗೆ ಮುಂದಾಗಿದ್ದಾರೆ ಇದು ನಾಚಿಗೇಡು ಸಂಗತಿಯಾಗಿದೆ' ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಚೆನ್ನಪ್ಪ ಆನೇಗುಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಬ್ಬರು ಅಧಿಕಾರಿಗಳು ಉನ್ನತ ಹುದ್ದೆಯಲ್ಲಿ ಇದ್ದಾರೆ. ರಾಜಕೀಯ ಒತ್ತಡದಿಂದ ಅವರನ್ನು ಬಂಧಿಸುತ್ತಿಲ್ಲ ಮತ್ತು ಅಮಾನತುಗೊಳಿಸುತ್ತಿಲ್ಲ ಎಂದು ಅವರು ಅರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.