ADVERTISEMENT

ಪ್ರವಾಸೋದ್ಯಮ ಇಲಾಖೆಯ ಕಾಮಗಾರಿ ಮುಗಿಸದಿದ್ದರೆ ಅಧಿಕಾರಿಗಳೇ ಹೊಣೆ: ಡಾ.ರಾಗಪ್ರಿಯಾ

ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 16:32 IST
Last Updated 24 ಫೆಬ್ರುವರಿ 2021, 16:32 IST
ಡಾ.ರಾಗಪ್ರಿಯಾ ಆರ್.
ಡಾ.ರಾಗಪ್ರಿಯಾ ಆರ್.   

ಯಾದಗಿರಿ: ‘ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಎಲ್ಲ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಮುಗಿಸಬೇಕು. ಒಂದು ವೇಳೆ ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ವಿವಿಧ ಕಾಮಗಾರಿ, ಪ್ರವಾಸಿಗರನ್ನು ಆಕರ್ಷಿಸುವಂತೆ ನೂತನ ರೀತಿಯಲ್ಲಿ ಹಾಗೂ ವಿಭಿನ್ನ ವಿನ್ಯಾಸದಲ್ಲಿ ಯೋಜನೆ ಸಿದ್ಧಪಡಿಸಿ ಉತ್ತಮ ಗುಣಮಟ್ಟದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಸಿದ್ಧಪಡಿಸುವಾಗ ಹಿರಿಯ ಅಧಿಕಾರಿಗಳ ಹಾಗೂ ತಜ್ಞರ ಸಲಹೆಯಂತೆ ವಿನೂತನ ರೀತಿಯಲ್ಲಿ ಆಕರ್ಷಕವಾಗಿ ಕಾಮಗಾರಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಎಲ್ಲಾ ಕಾಮಗಾರಿಗಳನ್ನು ಮುಕ್ತಾಯಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

‘ದೇವರಗೋನಾಳ ಗ್ರಾಮದ ಹೈಯಾಳಲಿಂಗೇಶ್ವರ ದೇವಸ್ಥಾನದ ಬಳಿ ಯಾತ್ರಿ ನಿವಾಸ ನಿರ್ಮಾಣ, ಮೈಲಾಪುರ ಗ್ರಾಮದ ಮೈಲ್ಲಾರಲಿಂಗೇಶ್ವರ ದೇವಸ್ಥಾನದ ಬಳಿ ಸಿ.ಸಿ ರಸ್ತೆ ಹಾಗೂ ಯಾತ್ರಿ ನಿವಾಸ ನಿರ್ಮಾಣ, ಜಿಲ್ಲೆಯ ಅರಕೇರಾ (ಕೆ) ಗ್ರಾಮದ ಬ್ರಹ್ಮವಿದ್ಯಾಶ್ರಮ ಮಠದ ಬಳಿ ಯಾತ್ರಿ ನಿವಾಸ, ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ ಶರಭಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಯಾತ್ರಿ ನಿವಾಸ ನಿರ್ಮಾಣ ಸೇರಿದಂತೆ ಇತರೆ ಕಾಮಗರಿಗಳನ್ನು ಕೂಡಲೇ ಮುಗಿಸುವಂತೆ ಸಂಬಂಧಿಸಿದ ಏಜೆನ್ಸಿಗಳಿಗೆ ನಿರ್ದೇಶನ ನೀಡಬೇಕು’ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಗುರುಮಠಕಲ್ ಪಟ್ಟಣದ ಶಾಂತವೀರಸ್ವಾಮಿ ಮಠ ಹಾಗೂ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಮೂಲ ಸೌಕರ್ಯ ಕಾಮಗಾರಿಗಳ ಕುರಿತು ದಾಖಲಾತಿಗಳನ್ನು ಸಲ್ಲಿಸಿದ ನಂತರ ಆಡಳಿತಾತ್ಮಕ ಅನುಮೋದನೆ ನೀಡಲಾಗುತ್ತದೆ. ಹೀಗಾಗಿ ಕೂಡಲೇ ದಾಖಲಾತಿಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ಇದೇ ವೇಳೆ ಪುರಾತತ್ವ ಸಂರಕ್ಷಣ ಸಹಾಯಕ ಅಧಿಕಾರಿ ಬಿ.ಎಂ. ಪ್ರೇಮಲತಾ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಭೀಮರಾಯ ಕೊಲ್ಲೂರು, ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಭಾವಿಕಟ್ಟಿ, ಸಹಾಯಕ ಎಂಜಿನಿಯರ್ ಶಿವರಾಜ, ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್‌ ಪಾಂಚಾಲ್‌ ಸೇರಿದಂತೆ ಸಭೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.