ADVERTISEMENT

ಹತ್ತಿಕುಣಿ ಜಲಾಶಯದಿಂದ 22 ರಂದು, ಸೌಧಾಗರದಿಂದ 28ರಂದು ಕಾಲುವೆಗೆ ನೀರು

ಶಾಸಕ ನಾಗನಗೌಡ ಕಂದಕೂರ ನೇತೃತ್ವದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 2:10 IST
Last Updated 15 ನವೆಂಬರ್ 2020, 2:10 IST
ಯರಗೋಳ ಸಮೀಪದ ಹತ್ತಿಕುಣಿ ಜಲಾಶಯದ ಆವರಣದಲ್ಲಿ ಶಾಸಕ ನಾಗನಗೌಡ ಕಂದಕೂರ ನೇತೃತ್ವದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು
ಯರಗೋಳ ಸಮೀಪದ ಹತ್ತಿಕುಣಿ ಜಲಾಶಯದ ಆವರಣದಲ್ಲಿ ಶಾಸಕ ನಾಗನಗೌಡ ಕಂದಕೂರ ನೇತೃತ್ವದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು   

ಯರಗೋಳ: ಹತ್ತಿಕುಣಿ ಜಲಾಶಯದಿಂದ ನ.22 ರಂದು ಮತ್ತು ಸೌಧಾಗರ ಜಲಾಶಯದಿಂದ ನ.28ರಂದು ಕಾಲುವೆಗಳಿಗೆ ನೀರು ಬಿಡಲು ಶನಿವಾರ ಮಧ್ಯಾಹ್ನ ಹತ್ತಿಕುಣಿ ಜಲಾಶಯದ ಆವರಣದಲ್ಲಿ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ನೇತೃತ್ವದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ಈ ವರ್ಷ ಹತ್ತಿಕುಣಿ ಹಾಗೂ ಸೌಧಾಗರ ಜಲಾಶಯಗಳು ಭರ್ತಿಯಾಗಿದ್ದು ರೈತರಲ್ಲಿ ಸಂತಸ ಮೂಡಿದೆ. ಉಭಯ ಜಲಾಶಯಗಳ ಕಾಲುವೆಗಳಲ್ಲಿನ ಹೂಳು ತೆಗೆದು ನೀರು ಬಿಡಬೇಕು ಎಂದು ಅಧಿಕಾರಿಗಳಿಗೆ ನಾಗನಗೌಡ ಕಂದಕೂರ ಸೂಚಿಸಿದರು.

ಇಲ್ಲಿ ಸಿಬ್ಬಂದಿ ಕೊರತೆ ಹಾಗೂ ಕಾಲುವೆಗಳ ದುರಸ್ತಿ ಕಾಮಗಾರಿ, ಇನ್ನಿತರ ಸಮಸ್ಯೆಗಳ ಬಗ್ಗೆಅಧಿಕಾರಿಗಳು ಸಕಾಲಕ್ಕೆ ನನ್ನ ಗಮನಕ್ಕೆ ತಂದಿಲ್ಲ. ವರ್ಷದಲ್ಲಿ ಕೆಲವು ಸಲ ಜಲಾಶಯಗಳಿಗೆ ಬಂದು ಹೋಗುತ್ತೀರಿ, ನಿಮಗೆ ರೈತರ ವಾಸ್ತವಿಕ ಪರಿಸ್ಥಿತಿ ತಿಳಿದಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ರೈತರು ಜಲಾಶಯದ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಹೊನಗೇರಾ ಗ್ರಾಮದ ರೈತರು ಮಾತನಾಡಿ, ಶೇಂಗಾ ಬಿತ್ತನೆ ಮಾಡಿ 1 ತಿಂಗಳಾಗಿದೆ. ನೀರಿಲ್ಲದೆ ಬೆಳೆ ಬಾಡುತ್ತಿದೆ. 4-5 ದಿನಗಳಲ್ಲಿ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಲಾಶಯದಿಂದ ನಮ್ಮ ಜಮೀನಿಗೆ ನೀರು ತಲುಪುತ್ತಿಲ್ಲ ಎಂದು ಬಂದಳ್ಳಿ ಗ್ರಾಮದ ರೈತರು ಶಾಸಕರ ಗಮನಕ್ಕೆ ತಂದಾಗ, ಅಲ್ಲಿದ್ದ ಕಾರ್ಯ ನಿರ್ವಾಹಕ ಎಂಜಿನಿಯರ್‌ ‘ಸರ್ಕಾರದಿಂದ ಎರಡೂ ಜಲಾಶಯಗಳ ಅಭಿವೃದ್ಧಿಗೆ ಸೂಕ್ತ ಅನುದಾನ ಸಕಾಲದಲ್ಲಿ ಬಿಡುಗಡೆ ಆಗುತ್ತಿಲ್ಲ. ಪರಿಣಾಮ ಸಮಸ್ಯೆ ಉದ್ಭವಿಸಿದೆ’ ಎಂದರು.

ಇದರಿಂದ ಆಕ್ರೋಶಗೊಂಡ ಶಾಸಕರು, ರೈತರೊಂದಿಗೆ ನಿಮ್ಮ ಕಚೇರಿ ಬಳಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಧಿಕಾರಿಗಳು ಸ್ಥಳದಲ್ಲಿಯೇ ಕೆಲ ಹೊತ್ತು ಚರ್ಚಿಸಿ, ‘ಹತ್ತಿಕುಣಿ ಜಲಾಶಯದಿಂದ 15 ಉಪ ಕಾಲುವೆವರೆಗೆ ಶೇಂಗಾ ಬಿತ್ತನೆ ಮಾಡಿದ ರೈತರಿಗೆ ನೀರು ಪೂರೈಸುತ್ತೇವೆ, 18 ಉಪ ಕಾಲುವೆವರೆಗೆ ಜೋಳ ಬಿತ್ತನೆ ಮಾಡಿದ ರೈತರಿಗೆ ನೀರು ತಲುಪಿಸಲು ಪ್ರಯತ್ನ ಮಾಡುತ್ತೇವೆ’ ಎಂದು ತಿಳಿಸಿದರು.

ಶಾಸಕರು ಸೌಧಾಗರ ಜಲಾಶಯ ಕುರಿತು ರೈತರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕೊನೆಗೆ ಜಲಾಶಯದ 9 ಉಪ ಕಾಲುವೆವರೆಗೆ ನೀರು ಬಿಡಲು ನಿರ್ಧರಿಸಲಾಯಿತು.

ನೀರಾವರಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಸಂಗಮನಾಥ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಕೈಲಾಸ್ ಅನವಾರ್, ಎಂಜಿನಿಯರ್‌ಗಳಾದ ಸಿದ್ದಾರೂಢ, ಪ್ರಭಾಕರ, ಭೀಮಣ್ಣ, ಹತ್ತಿಕುಣಿ ನೀರು ಬಳಕೆದಾರ ಸಹಕಾರ ಸಂಘ ಮಹಾ ಮಂಡಳದ ಅಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ, ಸೌಧಾಗರ ಜಲಶಾಯ ನೀರು ಬಳಕೆದಾರರ ಸಹಕಾರ ಸಂಘ ಮಹಾ ಮಂಡಳದ ಅಧ್ಯಕ್ಷ ಮಹಿಪಾಲರೆಡ್ಡಿ ಹತ್ತಿಕುಣಿ, ಅಮೀನರೆಡ್ಡಿ ಬಿಳ್ಹಾರ, ಶರಣಪ್ಪ ದುಗ್ಗಾಣಿ, ಸುಭಾಶ್ಚಂದ್ರ ಹೊನಗೇರಾ, ಭೊಜಣಗೌಡ ಯಡ್ಡಳ್ಳಿ, ರವಿಗೌಡ ಪಾಟೀಲ ಹತ್ತಿಕುಣಿ, ಚಂದ್ರಾರೆಡ್ಡಿ ದಳಪತಿ, ಲಿಂಗಾರೆಡ್ಡಿ ಯಡ್ಡಳ್ಳಿ, ಸುಭಾಸ ನಾಯಕ, ದೇವಿಂದ್ರಪ್ಪ ಜೀನಭಾವಿ ಸೇರಿದಂತೆ ಉಭಯ ಜಲಾಶಯಗಳ ವ್ಯಾಪ್ತಿಯ ಗ್ರಾಮಗಳ ರೈತರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.