ಯಾದಗಿರಿ: ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಕಾರಣ ಜಿಲ್ಲಾ ಬಿಜೆಪಿ ಸೇರಿದಂತೆ ನಗರದಲ್ಲಿ ವಿವಿಧ ಸಂಘಟನೆಗಳಿಂದ ಶನಿವಾರ ಸಂಜೆ ನಗರದ ಮೈಲಾಪುರ ಆಗಸಿಯಿಂದ ಮಹಾತ್ಮ ಗಾಂಧಿ ವೃತ್ತದ ವರೆಗೆ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು.
ಮಹಾತ್ಮ ಗಾಂಧಿ ವೃತದಲ್ಲಿ ಸಮಾವೇಶಗೊಂಡ ಯಾತ್ರೆಯಲ್ಲಿ ಸಾವಿರಾರು ನಾಗರಿಕರು ಭಾರತ್ ಮಾತಾ ಕೀ ಜೈ, ಭಾರತೀಯ ಸೈನಿಕರಿಗೆ ಜಯವಾಗಲಿ ಎಂಬ ಘೋಷಣೆ ಕೂಗಿದರು. ಭಾರತೀಯ ಮಾಜಿ ಯೋಧರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗನಗೌಡ ಮಾಲೀಪಾಟೀಲ ಮಾತನಾಡಿ, ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ. ಇನ್ನೊಮ್ಮೆ ನಡೆದರೆ ಪಾಕಿಸ್ತಾನ ನಿರ್ಣಾಮವಾಗಲಿದೆ. ಪಿಒಕೆ ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂಬುದು ದೇಶದ ನಿಲುವಾಗಿತ್ತು. ಪ್ರಧಾನಿಯವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರು. ಜನರು ಬಯಸಿದ್ದನ್ನು ನಾವು ಮಾಡಿ ತೋರಿಸಿದೆವು. ಸೈನಿಕರ ಹಿಂದೆ ಇಡೀ ರಾಷ್ಟ್ರ ನಿಂತಿತ್ತು. ಪಾಕಿಸ್ತಾನಕ್ಕೆ ಮಹಿಳೆಯರು ಸಮರ್ಥ ಉತ್ತರ ನೀಡಿದ್ದಾರೆ ಎಂದು ವಿವರಿಸಿದರು.
ಯುವಕರು ದೇಶಾಭಿಮಾನ ಬೆಳಸಿಕೊಳ್ಳುವ ಅಗತ್ಯವಿದೆ. ದೇಶದ ಸುರಕ್ಷತೆಗೆ ನಮ್ಮಇಡೀ ಸೈನ್ಯ ತಮ್ಮ ಕುಟುಂಬ ತೊರೆದು ಗಡಿಯಲ್ಲಿ ಶತೃಗಳೊಂದಿಗೆ ನಿರಂತರ ಹೋರಾಡುತ್ತಾ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ, ದೇಶದೊಳಗಿನ ಕೆಲ ರಾಜಕೀಯ ವ್ಯಕ್ತಿಗಳು ಭಾರತೀಯ ಸೈನ್ಯ ಮತ್ತು ಸೈನಿಕರಿಗೆ ಅಪಮಾನಗೊಳಿಸುವ ಮಾತನ್ನಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ದಾಸಬಾಳ ಮಠದ ವೀರೇಶ್ವರ ಸ್ವಾಮೀಜಿ ಯಾತ್ರೆಗೆ ಚಾಲನೆ ನೀಡಿದರು. 20ಕ್ಕೂ ಹೆಚ್ಚು ಮಾಜಿ ಯೋಧರು ಪಾಲ್ಗೊಂಡಿದ್ದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಯುಡಾ ಅಧ್ಯಕ್ಷ ವಿನಾಯಕ ಮಾಲಿಪಾಟೀಲ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಬಿಜೆಪಿ ನಾಯಕ ದೇವಿಂದ್ರನಾಥ ನಾದ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಅಮೀನ ರೆಡ್ಡಿ ಯಾಳಗಿ, ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ, ಮುಖಂಡರಾದ ರಾಚಣ್ಣಗೌಡ ಮುದ್ನಾಳ, ನಾಗರತ್ನ ಕುಪ್ಪಿ, ಡಾ.ಶರಣಭೂಪಾಲರೆಡ್ಡಿ, ಚೇಂಬರ್ಸ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ದಿನೇಶ ದೋಕಾ, ಅಕ್ಕಿ ಗಿರಣಿ ಮಾಲೀಕ ಸಂಘ ಜಿಲ್ಲಾಧ್ಯಕ್ಷ ಹನಮಾನ ದಾಸ ಮುಂಡದ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ, ಬಂಗಾರ ವರ್ತಕರು ಅಧ್ಯಕ್ಷ ವಿಜಯ್ ಬಟ್ಟಡ, ಲಿಂಗಪ್ಪ ಹತ್ತಿಮನಿ, ಮಾಜಿ ಯೋಧ ರಾಜಶೇಖರ ಬಾಪೂರೆ, ತಿಪ್ಪಣ್ಣಗೌಡ, ಮಡಿವಾಳಪ್ಪ, ವಿಶ್ವರಾಜ ಬಿರಾದಾರ ವಿಶ್ವ ಹಿಂದೂ ಪರಿಷತ್, ಭಜರಂಗ ದಳದ ಶಿವು ಸಂಕೂಲರ, ಭಾರತೀಯ ವೈದ್ಯ ಸಂಘದ ಪದಾಧಿಕಾರಿಗಳು, ಯಿಮ್ಸ್ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.