ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬರದ ಮಧ್ಯೆಯೂ ಭತ್ತದ ಫಸಲು ಬಂದಿದ್ದು, ಮುಂದಿನ ವಾರದಲ್ಲಿ ಕಟಾವು ಆರಂಭವಾಗಲಿದೆ. ತಾಲ್ಲೂಕಿನಲ್ಲಿ ಹಲವು ಬಾರಿ ಕಾಲುವೆ ಜಾಲದಲ್ಲಿ ಚಾಲೂ ಬಂದಿ ಬದಲಾವಣೆ ತಂದು ಪ್ರಸಕ್ತ ಹಂಗಾಮಿಗೆ ರೈತರ ಜಮೀನುಗಳಿಗೆ ನೀರು ಹರಿಸಲಾಯಿತು. 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆರ್‌ಎನ್‌ಆರ್, ಸೋನಾ ಹಾಗೂ ಇತರ ತಳಿಯ ಭತ್ತ ಬೆಳೆಯಲಾಗಲಿದೆ.
‘ಇನ್ನೇನು ಭತ್ತದ ಕಟಾವು ಆರಂಭವಾಗಲಿದ್ದು, ನಿಶ್ಚಿತ ಬೆಳೆಯ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಈ ಬಾರಿ ಮಳೆಯ ಕೊರತೆಯ ಜೊತೆಯಲ್ಲಿ ಬಿಸಿಲಿನಿಂದ ಕೂಡಿದ ವಾತಾವರಣ ಇದ್ದರೂ ಭತ್ತದ ತೆನೆ ಚೆನ್ನಾಗಿ ಕಾಳು ತುಂಬಿದ್ದು, ಎಕರೆಗೆ 50 ಚೀಲ ಇಳುವರಿ ಬರುವ ನಿರೀಕ್ಷೆ ಇದೆ’ ಎಂದು ವಜ್ಜಲ ಗ್ರಾಮದ ರೈತರಾದ ನಿಂಗನಗೌಡ ಎಂ. ಬಸನಗೌಡ್ರ ತಿಳಿಸಿದರು.
‘ಈ ಬಾರಿ ಬೆಳೆ ಚೆನ್ನಾಗಿ ಇದ್ದರಿಂದಾಗಿ ಕೇವಲ ಒಂದು ಬಾರಿ ಮಾತ್ರ ಕ್ರಿಮಿನಾಶಕ ಸಿಂಪಡಿಸಲಾಗಿದ್ದು, ಎರಡು ಬಾರಿ ಭತ್ತದಲ್ಲಿ ಕಳೆ ತೆಗೆಯಲಾಗಿದೆ. ಪ್ರಯೋಗಾರ್ಥವಾಗಿ ರಸಗೊಬ್ಬರ ಕೂಡಾ ಕಡಿಮೆ ಹಾಕಲಾಗಿದೆ’ ಎಂದು ಮುದನೂರು ಗ್ರಾಮದ ರೈತ ಮುಖಂಡ ಮಲ್ಲನಗೌಡ ನಗನೂರು ಹೇಳಿದರು.
‘ಈ ಬಾರಿ ರಾಶಿ ಆರಂಭದಲ್ಲಿಯೇ ಭತ್ತದ ಧಾರಣೆ ಕೂಡಾ ಚೆನ್ನಾಗಿ ಇದ್ದು, 75 ಕೆ.ಜಿ ಸೋನಾ ಮಸೂರಿಗೆ ಭತ್ತಕ್ಕೆ ₹1,900ವರೆಗೆ ಹಾಗೂ ಆರ್‌ಎನ್‌ಆರ್ ತಳಿಗೆ 2,100 ಬೆಲೆ ಇದೆ’ ಎಂದು ಖರೀದಿದಾರ ಆರ್.ವೆಂಕಟ್‌ರಾವ್ ಮಾಹಿತಿ ನೀಡಿದರು.
‘ಇದೇ ಧಾರಣೆ ಇದ್ದಲ್ಲಿ ಎಲ್ಲ ರೈತರಿಗೂ ಅನುಕೂಲವಾಗಲಿದೆ. ಆದರೆ, ಎಲ್ಲಿ ಸ್ಥಳೀಯ ಖರೀದಿದಾರರು ರೈತರ ಸೂಕ್ತ ಬೆಲೆ ನೀಡುತ್ತಾರೋ ಇಲ್ಲವೋ ಎಂಬ ಆತಂಕ ಎಲ್ಲ ರೈತರಲ್ಲಿ ಮನೆ ಮಾಡಿದೆ’ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಮುಖ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.
‘ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಭತ್ತ ಖರೀದಿ ಸಂದರ್ಭದಲ್ಲಿ ಭತ್ತದ ತೂಕದಲ್ಲಿ ಸೂಟ್ ಎಂದು ಕಡಿತ ಮಾಡದೇ ಚೀಲದ ತೂಕ ಮಾತ್ರ ಕಡಿತಮಾಡಬೇಕು. ಹೆಚ್ಚಿನ ಹಮಾಲಿ ವಿಧಿಸದಂತೆ ರೈತರ ಸಭೆಯಲ್ಲಿ ಹೇಳಲಾಗಿದೆ. ಯಾವುದೇ ಖರೀದಿದಾರರು ರೈತರಿಗೆ ತೊಂದರೆ ಮಾಡಿದಲ್ಲಿ ಅಂಥವರ ವಿರುದ್ಧ ಹೋರಾಟ ಮಾಡುವುದಾಗಿ’ ರೈತ ಮುಖಂಡರಾದ ಮಹಾದೇವಿ ಬೇನಾಳಮಠ ಹಾಗೂ ಮುದ್ದಣ್ಣ ಅಮ್ಮಾಪುರ ಹೇಳುತ್ತಾರೆ.
‘ಮೋಡ ಕವಿದ ವಾತಾವರಣ ಹಾಗೂ ಅಲ್ಪ ಮಳೆಯಾದರೂ ಕೂಡಾ ಕಾಳು ಕಟ್ಟಿದ ಭತ್ತ ನೆಲ ಕಚ್ಚಲಿದೆ. ಆದ್ದರಿಂದ ಮೋಡವಾದರೇ ನಮಗೆ ನಿದ್ದೆ ಬರದಂತಾಗುತ್ತದೆ’ ಎಂದು ಶ್ರೀಶೈಲ ದೇವತಕಲ್ಲ ಮಾಳನೂರು ಗ್ರಾಮದ ಸೋಮಣ್ಣ ಮೇಟಿ ಆತಂಕ ವ್ಯಕ್ತಪಡಿಸಿದರು.
‘ಹುಲ್ಲು ಹೊಲದಲ್ಲಿಯೇ ಇದ್ದರೂ ಅದು ಕೊಳೆತು ಮತ್ತೆ ಫಲವತ್ತಾದ ಗೊಬ್ಬರವಾಗುತ್ತದೆ. ಯಾವುದೇ ಕಾರಣಕ್ಕೂ ಭತ್ತದ ಹುಲ್ಲನ್ನು ಸುಡಬಾರದು’ ಎಂದು ಕೃಷಿ ಅಧಿಕಾರಿ ಸಿದ್ಧಾರ್ಥ ಪಾಟೀಲ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.