ADVERTISEMENT

ಪೊಲೀಸರ ಕರ್ತವ್ಯ ಸ್ಮರಣೀಯ: ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಶ್ಲಾಘನೆ

ಯಾದಗಿರಿಯಲ್ಲಿ ಹುತಾತ್ಮರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 17:04 IST
Last Updated 21 ಅಕ್ಟೋಬರ್ 2020, 17:04 IST
ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರು ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು
ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರು ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು   

ಯಾದಗಿರಿ: ಕೋವಿಡ್, ಪ್ರವಾಹ ಸಂದರ್ಭದಲ್ಲಿ ಪೊಲೀಸರು ಸಲ್ಲಿಸಿದ ಕರ್ತವ್ಯ ಸೇವೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರು ಪೊಲೀಸರ ಕಾರ್ಯವನ್ನು ಶ್ಲಾಘನೆ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಕರ್ತವ್ಯದ ಪಾಲನೆಯಲ್ಲಿ ಪ್ರಾಣ ಸಮರ್ಪಿಸಿದ ಪೊಲೀಸರ ಸ್ಮರಣೆಗಾಗಿ ಬುಧವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

1959ರ ಅಕ್ಟೋಬರ್ 21ರಂದು ಲಡಾಕ್‍ನಲ್ಲಿ ಕರ್ತವ್ಯ ಪಾಲನೆಯ ಸಂದರ್ಭದಲ್ಲಿ 10 ಜನ ಪೊಲೀಸರು ಹುತಾತ್ಮರಾದ ದಿನದ ಸ್ಮರಣಾರ್ಥವಾಗಿ ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಕೇಂದ್ರ ಪೊಲೀಸ್ ದಳದಲ್ಲಿ ಒಟ್ಟು 264 ಹಾಗೂ ಕರ್ನಾಟಕದಲ್ಲಿ 17 ಜನ ಪೊಲೀಸರು ಹುತಾತ್ಮರಾಗಿದ್ದಾರೆ ಎಂದು ಹೇಳಿದ ಅವರು, ಕರ್ತವ್ಯ ಪಾಲನೆಯಲ್ಲಿ ಹುತಾತ್ಮರಾದ ಪೊಲೀಸರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಆಯುಷ್ಯ, ಆರೋಗ್ಯ ನೀಡಲೆಂದು ಅವರು ದೇವರಲ್ಲಿ ಪ್ರಾರ್ಥಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ ಮಾತನಾಡಿ, 1959ರ ಅಕ್ಟೋಬರ್ 21ರಂದು ಚೀನಾ-ಭಾರತ ಗಡಿ ಭಾಗದ ಹಾಟ್ ಸ್ಟ್ರೀಗ್ ಪೋಸ್ಟ್ ಹತ್ತಿರ ಸಿಆರ್‌ಪಿಎಫ್ ಡಿಎಸ್‍ಪಿ ಕರಣಸಿಂಗ್ ಅವರ ನೇತೃತ್ವದಲ್ಲಿ ಪೊಲೀಸ್ ದಳವು ಪಹರೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಚೀನಾ ಸೈನಿಕರಿಂದ ಏಕಾಏಕಿ ದಾಳಿ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ವೈರಿಗಳ ದಾಳಿಗೆ ವಿಚಲಿತರಾಗದೆ ತಮ್ಮ ಪ್ರಾಣದ ಹಂಗನ್ನು ತೊರೆದು ಕೊನೆಯುಸಿರಿನವರೆಗೂ ಧೈರ್ಯದಿಂದ ಹೋರಾಡಿ ಪ್ರಾಣ ತೆತ್ತ 10 ಜನ ಭಾರತೀಯ ಪೊಲೀಸ್ ಯೋಧರ ಬಲಿದಾನದ ಸ್ಮರಣೆಯ ಪ್ರತೀಕವಾಗಿ ಪ್ರತಿ ವರ್ಷ ಅಕ್ಟೋಬರ್ 21ರಂದು ದೇಶದಾದ್ಯಂತ ಎಲ್ಲಾ ಜಿಲ್ಲಾ ಪೊಲೀಸ್ ಕೇಂದ್ರ ಸ್ಥಾನಗಳಲ್ಲಿ ಪೊಲೀಸ್ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಆಂತರಿಕ ಶತ್ರುಗಳು ಹಾಗೂ ದೇಶ ವಿರೋಧಿ ಕೃತ್ಯಗಳನ್ನೆಸಗುವ ದುಷ್ಟರ ವಿರುದ್ಧ ಧೀರತನದಿಂದ ಹೋರಾಡಿ ಪ್ರಾಣವನ್ನು ಸಮರ್ಪಿಸಿದ ಪೊಲೀಸ್ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವುದರ ಮೂಲಕ ಈ ದಿನ ಪೊಲೀಸ್ ಹುತಾತ್ಮರ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಪೊಲೀಸ್ ಹುತಾತ್ಮರ ಗೌರವ ಸೂಚಕವಾಗಿ ಪರೇಡ್ ಕಮಾಂಡರ್ ಆರ್‌ಎಸ್‍ಐ ಚಂದ್ರಶೇಖರ ಅವರ ನೇತೃತ್ವದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ ನಂತರ ಮೌನಾಚರಣೆ ಮಾಡಲಾಯಿತು. ಕಾನ್‍ಸ್ಟೆಬಲ್ ಸಂತೋಷ ಎಂ. ಜಯಕರ್ ನಿರೂಪಿಸಿದರು.

***

ಪೊಲೀಸರು ಕೋವಿಡ್, ಪ್ರವಾಹದ ವೇಳೆಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಿಳಿಸುತ್ತಾರೆ. ಸಾರ್ವಜನಿಕರು ಕಾನೂನು ಪಾಲನೆ ಮಾಡುತ್ತಾ ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕು

- ಡಾ.ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.