ADVERTISEMENT

ಯಾದಗಿರಿ: ಸುಗಮ ಸಂಚಾರಕ್ಕೆ ಸಂಕಟ ತಂದ ಹದಗೆಟ್ಟ ರಸ್ತೆಗಳು

ನಗರ ಸೇರಿದಂತೆ ಜಿಲ್ಲೆಯಾದ್ಯಂತ ರಸ್ತೆಗಳಲ್ಲಿ ತಗ್ಗು ದಿನ್ನೆ, ಹೊಂಡಗಳ ಹಾವಳಿ; ಶೀಘ್ರ ದುರಸ್ತಿಗೆ ಆಗ್ರಹ

ಬಿ.ಜಿ.ಪ್ರವೀಣಕುಮಾರ
Published 26 ಸೆಪ್ಟೆಂಬರ್ 2021, 19:30 IST
Last Updated 26 ಸೆಪ್ಟೆಂಬರ್ 2021, 19:30 IST
ಯಾದಗಿರಿಯ ನೇತಾಜಿ ಸುಭಾಷ ವೃತ್ತದ ಬಳಿ ಬೃಹತ್‌ ಹೊಂಡ ಬಿದ್ದಿರುವುದು 
ಯಾದಗಿರಿಯ ನೇತಾಜಿ ಸುಭಾಷ ವೃತ್ತದ ಬಳಿ ಬೃಹತ್‌ ಹೊಂಡ ಬಿದ್ದಿರುವುದು    

ಯಾದಗಿರಿ: ಜಿಲ್ಲೆಯ ವಿವಿಧೆಡೆ ರಸ್ತೆಗಳು ಹದಗೆಟ್ಟಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

ರಸ್ತೆಗಳಲ್ಲಿ ಸಂಚರಿಸುವಾಗ, ಸ್ವಲ್ಪ ಮೈಮರೆತರೂ ಅಪಘಾತಕ್ಕೀಡಾಗುವ ಪರಿಸ್ಥಿತಿ ಇದೆ. ಮಳೆಗಾಲ ಮುಗಿದ ನಂತರ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ರಸ್ತೆಗಳ ಪರಿಸ್ಥಿತಿ ಗಮನಿಸಿದರೆ ಅವರ ಹೇಳಿಕೆಗಳು ಬರೀ ಭರವಸೆಯಾಗಿಯೆ ಉಳಿದಿವೆ.

ಪ್ರವಾಹದ ರಸ್ತೆಗಳೇ ದುರಸ್ತಿಯಾಗಿಲ್ಲ: ಜಿಲ್ಲೆಯಲ್ಲಿ ಕಳೆದ ವರ್ಷ ಉಂಟಾದ ಪ್ರವಾಹದಿಂದ ರಸ್ತೆಗಳನ್ನೇ ಇನ್ನೂ ದುರಸ್ತಿ ಮಾಡಿಲ್ಲ. ಈಗಾಗಲೇ ಒಂದು ಬಾರಿ ಕೃಷ್ಣಾ ನದಿ ಪ್ರವಾಹ ಬಂದು ಹೋಗಿದೆ. ಹಲವಾರು ಕಿ.ಮೀ ರಸ್ತೆ ಹಾಳಾಗಿದೆ. ಇದಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ.

ADVERTISEMENT

ಕಳೆದ ವರ್ಷ ಕೃಷ್ಣಾ, ಭೀಮಾ ನದಿಗಳೆರಡಲ್ಲೂ ಭೀಕರ ಪ್ರವಾಹ ಉಂಟಾಗಿತ್ತು. ಭೀಮಾ ನದಿ ಪ್ರವಾಹದಿಂದ ವಡಗೇರಾ, ಶಹಾಪುರ ತಾಲ್ಲೂಕಿನ ಹಲವು ಗ್ರಾಮಗಳಿಗೆ ನೀರು ನುಗ್ಗಿತ್ತು. ಅಲ್ಲದೆ ಜಮೀನುಗಳಿಗೆ ತೆರಳುವ ರಸ್ತೆ ಮಾಯವಾಗಿದೆ. ಹೊಲ–ಗದ್ದೆ ರಸ್ತೆಗಳು ಕಾಣದಾಗಿವೆ. ಇವುಗಳ ದುರಸ್ತಿಯಂತೂ ಇನ್ನೂ ಆಗಿಲ್ಲ.

2019ರಲ್ಲೂ ಪ್ರವಾಹ ಉಂಟಾಗಿ ಸೇತುವೆಗಳು ಮತ್ತು ರಸ್ತೆಗಳು ಸೇರಿ ₹15 ಕೋಟಿ ಮೊತ್ತದ ಹಾನಿ ಸಂಭವಿಸಿತ್ತು. ಕಳೆದ ವಾರದಲ್ಲಿ ಸುರಿದ ಮಳೆಗೆ 59.95 ಕಿ.ಮೀ ಉದ್ದ ರಸ್ತೆ ಹಾನಿಯಾಗಿ, ₹19.51 ಕೋಟಿ ನಷ್ಟವಾಗಿದೆ. 8 ಸೇತುವೆಗಳಿಗೆ ಹಾನಿಯಾಗಿದ್ದು, ಅದು ₹2.70 ಕೋಟಿಯಷ್ಟಿದೆ.

ಹಲವಾರು ದಿನಗಳಿಂದ ಕೃಷ್ಣಾ ನದಿ ಪ್ರವಾಹ ಉಂಟಾಗಿದ್ದರಿಂದ ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಗ್ರಾಮದ ಸೇತುವೆ ಸೇತುವೆಯ ಕಲ್ಲುಗಳು ಉರುಳಿ ಬಿದ್ದಿದ್ದವು. ಇದಲ್ಲದೇ ಹಲವಾರು ಕಡೆ ರಸ್ತೆಗಳು ಹದಗೆಟ್ಟು ಹೋಗಿವೆ.

ನಗರದಲ್ಲಿ ಹದಗೆಟ್ಟ ರಸ್ತೆಗಳು: ಜಿಲ್ಲಾ ಕೇಂದ್ರವಾದ ನಗರದಲ್ಲಿ ಹಲವಾರು ಕಡೆ ರಸ್ತೆ ಹದಗೆಟ್ಟಿದ್ದು, ಸಂಚಾರಕ್ಕೆ ಸಂಚಕಾರ ತಂದಿದೆ. ನೇತಾಜಿ ಸುಭಾಷ ವೃತ್ತದ ಬಳಿ ದೊಡ್ಡದಾದ ಹೊಂಡ ಬಿದ್ದಿವೆ. ಇಲ್ಲಿಯೇ ಸಂಚಾರ ಪೊಲೀಸರು ಇದ್ದರೂ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಇನ್ನೂ ಹೊಸಳ್ಳಿ ಕ್ರಾಸ್‌ ಸಮೀಪದ ಲುಂಬಿನಿ ವನಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬೈಕ್‌ ಸವಾರರು ಈ ರಸ್ತೆಯಲ್ಲಿ ಸಂಚರಿಸುವಾಗ ತಗ್ಗು ದಿನ್ನೆಗಳ ಸಂಚಾರ ಮಾಡಬೇಕಾಗಿದೆ.

ಇನ್ನೂ ಎಪಿಎಂಸಿ ಮಾರುಕಟ್ಟೆಯ ಹಿಂದಿನ ರಸ್ತೆಯಂತೂ ಕೆಸರು ಮಯವಾಗಿದೆ. ಭಾರಿ ಗಾತ್ರದ ವಾಹನಗಳು ಸಂಚಾರ ಮಾಡುತ್ತಿದ್ದು, ಒಂದು ಬದಿಯಲ್ಲಿ ನೀರು ನಿಂತು ಸಂಚಾರಕ್ಕೆ ಪರದಾಡಬೇಕಾಗಿದೆ. ಕೋಟಗೇರಾವಾಡದ ರಸ್ತೆ ಮಧ್ಯೆಯೂ ಚರಂಡಿ ನೀರು ಹರಿಯುತ್ತಿದೆ. ಇದರಿಂದ ರಸ್ತೆ ಮತ್ತಷ್ಟು ಹದಗೆಟ್ಟಿದ್ದು, ಸವಾರರು ಪರದಾಟ ನಡೆಸುತ್ತಿದ್ದಾರೆ.

‘ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹದಗೆಟ್ಟಿರುವ ರಸ್ತೆಗಳನ್ನು ಶೀಘ್ರ ದುರಸ್ತಿ ಮಾಡಬೇಕು. ಇದರಿಂದ ಅನೇಕರ ಜೀವಕ್ಕೆ ಕುತ್ತು ಬರಲಿದೆ. ಈಗ ಶಾಲಾ–ಕಾಲೇಜುಗಳು ಆರಂಭವಾಗಿದ್ದು, ಸರಿಯಾದ ರಸ್ತೆ ಇಲ್ಲದ ಕಾರಣ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿ ಮಾಡಬೇಕು’ ಎಂದು ನಗರ ನಿವಾಸಿ ನಾಗಪ್ಪ ಪಾಟೀಲ ಆಗ್ರಹಿಸುತ್ತಾರೆ.

*ಪ್ರವಾಹ ಮತ್ತು ಮಳೆಗೆ ಹಾಳಾದ ರಸ್ತೆಗಳ ದುರಸ್ತಿಗೆ ₹ 27 ಕೋಟಿ ಪ್ರಸ್ತಾವ ಸಲ್ಲಿಸಿದ್ದು, ಸರ್ಕಾರದ ಹಂತದಲ್ಲಿದೆ. ಶೀಘ್ರ ಟೆಂಡರ್ ಕರೆದು ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು

- ಎಸ್.ಜಿ.ಪಾಟೀಲ, ಎಇಇ ಲೋಕೋಪಯೋಗಿ ಇಲಾಖೆ ಸುರಪುರ

*ಬಹುತೇಕ ಗ್ರಾಮೀಣ ರಸ್ತೆಗಳು ಮರಳು ತುಂಬಿದ ಲಾರಿಗಳ ಸಂಚಾರದಿಂದ ಹಾಳಾಗಿವೆ. ಇದರಿಂದ ಜನರ ತಿರುಗಾಟಕ್ಕೆ ತೊಂದರೆಯಾಗಿದೆ. ವಾಹನಗಳ ಸಂಚಾರಕ್ಕೆ ಸಂಚಕಾರ ಬಂದಿದೆ. ಲೋಕೋಪಯೋಗಿ ಇಲಾಖೆ ಈ ಬಗ್ಗೆ ಯೋಚನೆ ಮಾಡಬೇಕು

- ವಿಶ್ವರಾಜ ಒಂಟೂರ, ಚಂದಲಾಪುರ ಗ್ರಾಮಸ್ಥ

*ಪ್ರವಾಹದಿಂದ ಉಂಟಾದ ರಸ್ತೆಗಳ ದುರಸ್ತಿಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು. ಈ ಕುರಿತು ಕೆಲವು ಕಡೆ ಭೇಟಿ ನೀಡಿ ಪರಿಶೀಲಿಸಿದ್ದೇನೆ

- ಅಮೀನ್ ಮುಕ್ತಾರ, ಲೋಕೋಪಯೋಗಿ ಎಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.