ADVERTISEMENT

ಶಹಾಪುರ: ಮೊದಲ ಮಳೆಗೆ ಮುರಿದು ಬಿದ್ದ 30 ವಿದ್ಯುತ್‌ ಕಂಬ

ಟಿ.ನಾಗೇಂದ್ರ
Published 27 ಏಪ್ರಿಲ್ 2025, 7:34 IST
Last Updated 27 ಏಪ್ರಿಲ್ 2025, 7:34 IST
ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದಲ್ಲಿ ಗಾಳಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿವೆ
ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದಲ್ಲಿ ಗಾಳಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿವೆ   

ಶಹಾಪುರ: ಪೂರ್ವ ಮುಂಗಾರಿನ ಮಳೆ ಹಾಗೂ ಗಾಳಿಗೆ ತಾಲ್ಲೂಕಿನ ಅಲ್ಲಲ್ಲಿ ಇತ್ತೀಚೆಗೆ ಅಳವಡಿಸಲಾದ ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿ ಬೀಳುತ್ತಿದ್ದು, ಕಳಪೆ ಗುಣಮಟ್ಟದಿಂದ ಕೂಡಿದ ವಿದ್ಯುತ್‌ ಕಂಬಗಳ ಅಳವಡಿಕೆಯೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ಕೆಲ ಹಲವು ವರ್ಷದ ಹಿಂದೆ ಹಾಕಿದ ಕಂಬ ಮಜಬೂತವಾಗಿವೆ. ಆದರೆ ಕೆಲ ತಿಂಗಳ ಹಿಂದೆ ಹಾಕಿದ ಕಂಬ ಮಾತ್ರ ಮುರಿದು ಬಿಳುತ್ತಲಿವೆ. ಇದಕ್ಕೆ ತಾಜಾತನ ಎನ್ನುವಂತೆ ತಾಲ್ಲೂಕಿನ ಕೊಂಗಂಡಿ, ಮಂಡಗಳ್ಳಿ, ಶಾರದಹಳ್ಳಿ ಗ್ರಾಮದಲ್ಲಿ ಜೋರಾದ ಗಾಳಿಯಿಂದ 150ಕ್ಕೂ ಹೆಚ್ಚು ವಿದ್ಯುತ್‌ ಕಂಬ ಮುರಿದು ಬಿದ್ದಿವೆ. ಶುಕ್ರವಾರ (ಏ.25) ತಾಲ್ಲೂಕಿನ ರಸ್ತಾಪುರ ಗ್ರಾಮದಲ್ಲಿ ಗಾಳಿ–ಮಳೆಗೆ 30ಕ್ಕೂ ಹೆಚ್ಚು ಕಂಬ ಮುರಿದು ಬಿದ್ದಿವೆ.

‘ಮುರಿದು ಬಿದ್ದಿರುವ ಬಹುತೇಕ ಕಂಬಗಳು ಹೆಚ್ಚಾಗಿ ಮಧ್ಯದಲ್ಲಿ ಹಾಗೂ ನೆಲಮಟ್ಟದಲ್ಲಿ ತುಂಡಾಗಿವೆ. ಈ ಕಂಬಗಳಲ್ಲಿ ಚಿಕ್ಕದಾದ ಕಬ್ಬಿಣದ ರಾಡ್‌ ಇವೆ. ಸಿಮೆಂಟ್ ಧೂಳು ಮಿಶ್ರಿತ ಕಚ್ಚಾ ಸಾಮಗ್ರಿ ಹಾಕಿದ್ದಾರೆ. ಸರಿಯಾದ ನೀರು ಸಿಂಪರಣೆ ಮಾಡಿಲ್ಲ. ಇದರಿಂದ ಅರೆಬರೆಯಾಗಿರುವುದು ಕಾಣುತ್ತದೆ. ಗುಣಮಟ್ಟದ ಹಾಗೂ ಅಂದಾಜುಪಟ್ಟಿಯಂತೆ ಕಂಬ ಸಿದ್ಧಪಡಿಸಿಲ್ಲ. ಇದು ಸಂಶಯಕ್ಕೆ ಕಾರಣವಾಗಿದೆ. ವಿಚಿತ್ರವೆಂದರೆ ಇದಕ್ಕೂ ಮುಂಚೆ ಹಾಕಿದ ವಿದ್ಯುತ್ ಕಂಬಗಳು ಇಂದಿಗೂ ಮಜಬೂತವಾಗಿವೆ’ ಎನ್ನುತ್ತಾರೆ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.

ADVERTISEMENT

‘ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಜೋರಾದ ಗಾಳಿ ಬೀಸಿದರೆ ಒಂದಕ್ಕೊಂದು ತಗಲಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ಇದರಿಂದ 2-3 ದಿನಗಳ ಮತ್ತೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ವಿದ್ಯುತ್ ಸಮಸ್ಯೆ ಉಂಟಾದರೆ ಯಾರನ್ನು ಸಂಪರ್ಕಿಸಬೇಕು ಎಂಬುದು ಹಳ್ಳಿ ಜನರಿಗೆ ಯಕ್ಷ ಪ್ರಶ್ನೆಯಾಗಿದೆ. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಮಾರ್ಗದಾಳುಗಳ ವಿವರ ಹಾಗೂ ವಿದ್ಯುತ್‌ ಸಂಬಂಧಿತ ದೂರು ನೀಡಲು ದೂರವಾಣಿ ಸಂಖ್ಯೆ, ಇನ್ನಿತರ ಮಾಹಿತಿಯನ್ನು ಒದಗಿಸಬೇಕು’ ಎಂದು ಗ್ರಾಮೀಣ ಭಾಗದ ಜನರು ಒತ್ತಾಯಿಸಿದ್ದಾರೆ.

ವಿದ್ಯುತ್ ಕಂಬ ಪೂರೈಕೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಖಾಸಗಿ ಕಂಪನಿಗಳು ಸರಬರಾಜು ಮಾಡುತ್ತಾರೆ. ಕಂಬಗಳ ಗುಣಮಟ್ಟದ ಬಗ್ಗೆ ಜನರಿಂದ ದೂರು ಬಂದರೆ ವಿಚಾರಣೆ ಮಾಡುತ್ತೇವೆ. ರಸ್ತಾಪುರ ಗ್ರಾಮದಲ್ಲಿ 30 ಕಂಬ ಬಿದ್ದಿವೆ.
ಮರೆಪ್ಪ ಕಟ್ಟಿಮನಿ ಎಇಇ ಜೆಸ್ಕಾಂ ಶಹಾಪುರ
ಕೆಲ ವರ್ಷದ ಹಿಂದೆ ಹಾಕಿದ ಕಂಬ ಮಾತ್ರ ಮುರಿದು ಬಿದ್ದಿವೆ. ಇದು ಅನುಮಾನಕ್ಕೆ ಕಾರಣವಾಗಿದೆ. ಕಳಪೆಮಟ್ಟದ ಕಂಬ ಸರಬರಾಜು ಮಾಡುತ್ತಿರುವ ಬಗ್ಗೆ ತನಿಖೆ ನಡೆಸಬೇಕು.
ಯಲ್ಲಯ್ಯ ನಾಯಕ ವನದುರ್ಗ ರೈತ ಮುಖಂಡ ಶಹಾಪುರ

‘ವಿದ್ಯುತ್ ಸಮಸ್ಯೆ ಸಹಾಯವಾಣಿ ಆರಂಭಿಸಿ’

ಶಹಾಪುರ: ಪೂರ್ವ ಮುಂಗಾರಿನ ಆರಂಭದಲ್ಲೇ ರಭಸವಾದ ಗಾಳಿ–ಮಳೆಯ  ಹೊಡೆತಕ್ಕೆ ವಿದ್ಯುತ್ ಸಮಸ್ಯೆ ಹೆಚ್ಚಾಗುತ್ತಲಿದೆ. ಜೋತು ಬಿದ್ದ ವೈರ್ ಸ್ಪರ್ಶದಿಂದ ಬೆಂಕಿ ಕಾಣಿಸಿಕೊಳ್ಳುವುದು ಗಿಡ ಮರಗಳು ವಿದ್ಯುತ್‌ ತಂತಿ ಮೇಲೆ ಬೀಳುವುದು ಕಂಬ ಮುರಿದು ಬೀಳುವುದು ಹೀಗೆ ವಿದ್ಯುತ್ ಅವಘಡ ಉಂಟಾದರೆ ತಕ್ಷಣ ಜೆಸ್ಕಾಂ ಅಧಿಕಾರಿಗಳ ಸಂಪರ್ಕಿಸಲು ಸಹಾಯವಾಣಿ ಆರಂಭಿಸಲು ಜಿಲ್ಲಾಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕು ಎಂದು ಜನರು ಮನವಿ ಮಾಡಿದ್ದಾರೆ. ‘ವಿದ್ಯುತ್ ಅವಘಡ ಸಂಭವಿಸಿದಾಗ ಜೆಸ್ಕಾಂ ಸಿಬ್ಬಂದಿ ಮೊಬೈಲ್ ಸ್ವಿಚ್ ಆಫ್ ಹಾಗೂ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಹಾಗೂ ಕಾರ್ಯನಿರತವಾಗಿದೆ ಎಂಬ ಸಂದೇಶ ಬರುತ್ತದೆ. ಇದರಿಂದ ವಿದ್ಯುತ್ ಸಮಸ್ಯೆ ಉಂಟಾದಾಗ ಜನ ಪರದಾಡುವಂತೆ ಆಗಿದೆ. ಕನಿಷ್ಠ ಎರಡು ತಿಂಗಳ ಮಟ್ಟಿಗೆಯಾದರೂ ಸಹಾಯವಾಣಿ ಆರಂಭಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.