ADVERTISEMENT

ಕೆರೆಗಳಲ್ಲಿ ತೇಲುತ್ತಿವೆ ಪಿಒಪಿ ಗಣೇಶ ಮೂರ್ತಿಗಳು

ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಿವಿಗೊಡದ ಜನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 19:45 IST
Last Updated 14 ಸೆಪ್ಟೆಂಬರ್ 2019, 19:45 IST
ಯಾದಗಿರಿಯ ಲುಂಬಿನಿ ಕೆರೆ ಮುಂಭಾಗದ ಹೊಂಡದಲ್ಲಿ ವಿಸರ್ಜಿಸಿದ ಗಣೇಶ ಮೂರ್ತಿಗಳು ತೇಲಿರುವುದು
ಯಾದಗಿರಿಯ ಲುಂಬಿನಿ ಕೆರೆ ಮುಂಭಾಗದ ಹೊಂಡದಲ್ಲಿ ವಿಸರ್ಜಿಸಿದ ಗಣೇಶ ಮೂರ್ತಿಗಳು ತೇಲಿರುವುದು   

ಯಾದಗಿರಿ: ಗಣೇಶ ಮೂರ್ತಿ ವಿಸರ್ಜನೆಗೆ ಜಿಲ್ಲಾಡಳಿತ ಮತ್ತು ನಗರಸಭೆ ಗುರುತಿಸಿದ್ದ ಕೆರೆ ಮತ್ತು ಹೊಂಡಗಳಲ್ಲಿ ಗಣೇಶ ವಿಗ್ರಹಗಳು ನೀರಲ್ಲಿ ಕರಗದೆ ಹಾಗೆಯೇ ಉಳಿದಿವೆ.

ನಗರದ ಲುಂಬಿನಿ ಕೆರೆ, ಸಣ್ಣ ಮತ್ತು ದೊಡ್ಡ ಕೆರೆಗಳಲ್ಲಿ ಮೂರ್ತಿ ವಿಸರ್ಜನೆಗೆ ಜಿಲ್ಲಾಡಳಿತ ಸೂಚಿಸಿತ್ತು.

ಪರಿಸರ ಮಾಲಿನ್ಯ ತಡೆಗಟ್ಟಲು ಪಿಒಪಿ ಬದಲು ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಜಿಲ್ಲಾಡಳಿತ ಹಲವು ಬಾರಿ ಸಭೆ ಕರೆದು ಸಂಘ ಸಂಸ್ಥೆಗಳಿಗೆ, ಗಣೇಶ ಉತ್ಸವ ಸಮಿತಿಗಳಿಗೆ ಸೂಚಿಸಿತ್ತು. ‌ನಗರಸಭೆ ಅಧಿಕಾರಿಗಳು ಪಿಒಪಿ ಗಣೇಶ ಮೂರ್ತಿ ತಯಾರಕರಿಗೆ ನೋಟಿಸ್ ನೀಡಿ ತಯಾರು ಮಾಡದಂತೆ ಕಟ್ಟುನಿಟ್ಟಾಗಿ ಆದೇಶ ಮಾಡಿದ್ದರು. ಆದರೆ, ಜಿಲ್ಲಾಡಳಿತ, ನಗರಸಭೆ ಸೂಚನೆಗೆ ಕಿವಿಗೊಡದ ಸಮಿತಿಗಳು ನಗರದ ಬಹುತೇಕ ಕಡೆಗಳಲ್ಲಿ ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದವು.

ADVERTISEMENT

ಜಿಲ್ಲಾಡಳಿತ ನಿಗದಿಗೊಳಿಸಿದ್ದ ಮೂರ್ತಿ ವಿಸರ್ಜನೆ ಸ್ಥಳದಲ್ಲೇ ಗಣೇಶನ ಮೂರ್ತಿಗಳು ವಿಸರ್ಜಿಸಲಾಗಿದೆ. ಆದರೆ, ಅವುಗಳು ನೀರಲ್ಲಿ ಕರಗದೆ ಬಣ್ಣ ಬಿಡುತ್ತಿವೆ. ಇದರಿಂದ ಕೆರೆಯ ಹೊಂಡದ ನೀರು ಮಲೀನವಾಗಿದೆ.

ಗಣೇಶ ಮೂರ್ತಿ ವಿಸರ್ಜನೆ ವೇಳೆ ಎಸೆದ ಹೂವಿನ ಹಾರ, ಅಲಂಕಾರಿಕ ಪ್ಲಾಸ್ಟಿಕ್ ಸಾಮಾನು, ಕೊಳೆತ ಹಣ್ಣುಗಳು ಕೆರೆಯ ನೀರನ್ನು ಕಲುಷಿತಗೊಳಿಸಿದೆ ಎನ್ನುತ್ತಾರೆ ಸ್ಥಳೀಯರು.

ಕೆರೆಗಳಲ್ಲಿ ವಿಸರ್ಜಿಸಿದ ಗಣೇಶನ ಮೂರ್ತಿಗಳನ್ನು ಜಿಲ್ಲಾಡಳಿತವೇ ಮೇಲೆತ್ತಿ ಬೇರೆ ಕಡೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಕೆರೆಯ ನೀರು ಮತ್ತಷ್ಟು ಕಲುಷಿತಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.