ADVERTISEMENT

ಪ್ರಜಾವಾಣಿ ವರದಿಗೆ ಫಲಶ್ರುತಿ| ರೈತ ಪರಿಹಾರ ನಿಧಿಯಿಂದ ಕುಟುಂಬಕ್ಕೆ ₹5 ಲಕ್ಷ

ಒಂದೇ ಕುಟುಂಬದ ಆರು ಜನ ಆತ್ಮಹತ್ಯೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 2:13 IST
Last Updated 8 ಜುಲೈ 2021, 2:13 IST

ಶಹಾಪುರ: ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಮೃತ ರೈತ ಭೀಮರಾಯ ಅವರ ಕುಟುಂಬಕ್ಕೆ ರೈತ ಪರಿಹಾರ ನಿಧಿಯಿಂದ ₹5 ಲಕ್ಷ ಹಣ ಮಂಜೂರು ಮಾಡಲಾಗಿದೆ ಎಂದು ತಹಶೀಲ್ದಾರ್ ಜಗನ್ನಾಥರಡ್ಡಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ರೈತ ಆತ್ಮಹತ್ಯೆ ಪ್ರಕರಣದ ಮಾರ್ಗಸೂಚಿ ನಿಯಮಗಳನ್ನು ಗಮನಿಸಿ ಸಮಿತಿಯ ವರದಿಯಂತೆ ರೈತ ಆತ್ಮಹತ್ಯೆ ಪ್ರಕರಣ ಎಂದು ಭಾವಿಸಿ ಮೃತ ಭೀಮರಾಯ ಅವರ ಕುಟುಂಬದ ಸದಸ್ಯರಿಗೆ ಶೀಘ್ರದಲ್ಲಿ ಪರಿಹಾರ ಧನದ ಚೆಕ್ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಜೂನ್ 28ರಂದು ನಾಲ್ಕು ಮಕ್ಕಳೊಂದಿಗೆ ಭೀಮರಾಯ ದಂಪತಿ ಕೃಷಿ ಹೊಂಡದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಕುಟುಂಬದಲ್ಲಿ ಏಕೈಕ ಮಹಿಳೆ ಚಂದ್ರಕಲಾ ಇದ್ದಾರೆ. ಈಗಾಗಲೇ ಜಿಲ್ಲಾಡಳಿತವು ಮೃತ ಭೀಮರಾಯ ಅವರ ಮಗಳು ಚಂದ್ರಕಲಾ ಅವರಿಗೆ ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಿಪಾಯಿ ಹುದ್ದೆ ನೀಡಿ ಮಾನವೀಯತೆ
ಮೆರೆದಿದೆ.

ADVERTISEMENT

ಜಿಲ್ಲಾಡಳಿತವು ‘ಪ್ರಜಾವಾಣಿ’ ವರದಿಗೆ ಸ್ಪಂದಿಸಿ ಪರಿಹಾರ ನಿಧಿ ನೀಡುವಲ್ಲಿ ಮುತುವರ್ಜಿ ವಹಿಸಿದ್ದರಿಂದ ಮೃತ ರೈತ ಕುಟುಂಬಕ್ಕೆ ತುಸು ಆಸರೆಯಾಗಲಿದೆ. ಬುಧವಾರ ಪ್ರಜಾವಾಣಿಯಲ್ಲಿ ‘ಮೃತ ರೈತನಿಗಿಲ್ಲ ಪರಿಹಾರ’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.