ADVERTISEMENT

ಪ್ರಾಣಿಗಳ ರಕ್ಷಕ ಫುಟ್‌ಬಾಲ್ ಪಟು ಕರಣ್

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 10:17 IST
Last Updated 1 ಜನವರಿ 2022, 10:17 IST
ಕರಣ್
ಕರಣ್   

ಯರಗೋಳ (ಯಾದಗಿರಿ ಜಿಲ್ಲೆ): ರಸ್ತೆ ಮೇಲೆ ಪ್ರಾಣಿ, ಪಕ್ಷಿ ಮೃತಪಟ್ಟಿದ್ದು ಕಂಡರೆ ಕರಣ್ ಚವಾಣ್ ತಕ್ಷಣವೇ ಕಾರ್ಯಪ್ರವೃತ್ತರಾಗಿ, ಅವುಗಳ ಅಂತ್ಯಕ್ರಿಯೆಗೆ ಮುಂದಾಗುತ್ತಾರೆ. ನೃತ್ಯ ಮತ್ತು ಫುಟ್‌ಬಾಲ್ ಪಟು ಆಗಿರುವ ಅವರು ಸಂಕಷ್ಟದಲ್ಲಿರುವ ಪ್ರಾಣಿಗಳ ರಕ್ಷಕರೂ ಆಗಿದ್ದಾರೆ.

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಯಾಗಾಪುರ ಶಿವನಗರ ತಾಂಡಾದ 23 ವರ್ಷದ ಯುವಕ ಕರಣ ಚವಾಣ್‌ ಅವರು ಯರಗೋಳದಲ್ಲಿ ಶಾಲಾ ಶಿಕ್ಷಣವನ್ನು ಮತ್ತು ಯಾದಗಿರಿಯ ಮಲ್ಲಿಕಾ ಪದವಿ ಮಹಾವಿದ್ಯಾಲಯದಲ್ಲಿ ಬಿ.ಕಾಂ. ಪದವಿ ಪೂರ್ಣಗೊಳಿಸಿದ್ದಾರೆ.

ಮುಂಬೈನ ಸರ್ಕಾರೇತರ ಸಂಸ್ಥೆ ಆಸ್ಕರ್ ಫೌಂಡೇಷನ್‌ನಿಂದ ಫುಟ್‌ಬಾಲ್ ತರಬೇತಿ ಪಡೆದು, ಅದೇ ಸಂಸ್ಥೆಯಲ್ಲಿ ತರಬೇತುದಾರರು ಆಗಿದ್ದಾರೆ. ಯಾದಗಿರಿ ಜಿಲ್ಲೆಯ 20ಕ್ಕೂ ಹೆಚ್ಚು ಗ್ರಾಮಗಳ 500ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಫುಟ್‌ಬಾಲ್‌ ತರಬೇತಿ ನೀಡುತ್ತಿದ್ದಾರೆ. ಯಾದಗಿರಿಯಲ್ಲಿ ನೃತ್ಯ ತರಬೇತಿ ಶಾಲೆ ತೆರೆದಿದ್ದಾರೆ.

ADVERTISEMENT

180ಕ್ಕೂ ಹೆಚ್ಚು ಕಡೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಯಿ, ಹಂದಿ, ಬೆಕ್ಕು, ಹಾವು, ಕಾಗೆ, ಎಮ್ಮೆ, ಆಕಳು, ಅಳಿಲು, ಮುಂಗುಸಿಗಳನ್ನು ಸ್ಥಳದಿಂದ ತೆರವುಗೊಳಿಸಿ, ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯ ಫುಟ್‌ಬಾಲ್ ತಂಡದ ಸದಸ್ಯರಾಗಿ ಅಲ್ಲದೇ ಡ್ರೀಮ್ ಫೌಂಡೇಶನ್ ಮುಂಬೈ ‘ರಗ್ಬಿ’ ತಂಡದ ಪ್ರತಿನಿಧಿಯಾಗಿ ಅವರು ವಿವಿಧ ರಾಜ್ಯಗಳಲ್ಲಿ ಆಟವಾಡಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಆಸ್ಕರ್ ಸಂಸ್ಥೆಯ ನೆರವಿನಿಂದ 1,500 ಜನರಿಗೆ ಆಹಾರ ಸಾಮಗ್ರಿ ಪೊಟ್ಟಣ ವಿತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.