ADVERTISEMENT

ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸರ್ಕಾರ ನಿರ್ಲಕ್ಷ್ಯ: ಪ್ರಿಯಾಂಕ್ ಖರ್ಗೆ

ನಮ್ಮ ಸಂಪರ್ಕದಲ್ಲಿ ಬಿಜೆಪಿ, ಜೆಡಿಸ್‌ ಮುಖಂಡರಿದ್ದಾರೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 4:25 IST
Last Updated 18 ಸೆಪ್ಟೆಂಬರ್ 2022, 4:25 IST
ಪ್ರಿಯಾಂಕ ಖರ್ಗೆ
ಪ್ರಿಯಾಂಕ ಖರ್ಗೆ   

ಗುರುಮಠಕಲ್: ‘ನಂಜುಂಡಪ್ಪ ಅವರ ವರದಿಯನ್ವಯ ರಾಜ್ಯದಲ್ಲಿನ ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ನೀಡಬೇಕಿದ್ದ ಅನುದಾನವನ್ನು ನೀಡಲು ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಕೆಕೆಆರ್‌ಡಿಬಿ ಅನುದಾನವನ್ನೂ ಹಂಚಿಕೆ ಮಾಡುತ್ತಿಲ್ಲ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೆಕೆಆರ್‌ಡಿಬಿಗೆ ₹3 ಸಾವಿರ ಕೋಟಿ ಅನುದಾನ ನೀಡಿದ್ದಾಗಿ ಹೇಳುತ್ತಾರೆ. ಆದರೆ, ನಿಜಕ್ಕೂ ಸರ್ಕಾರ ನೀಡಿದ್ದು ಕೇವಲ ₹15 ನೂರು ಕೋಟಿ ಮಾತ್ರ’ ಎಂದರು.

ಪಿಎಸ್‌ಐ, ಕೆಪಿಎಸ್‌ಸಿ, ಕೆಕೆಆರ್‌ಡಿಬಿ ಹಗರಣಗಳನ್ನು ಕಾಂಗ್ರೆಸ್ ಬಿಚ್ಚಿಟ್ಟಿದೆ. ಭ್ರಷ್ಟಾಚಾರವೇ ಬಿಜೆಪಿ ಸರ್ಕಾರದ ಸಾಧನೆ. ಕೋವಿಡ್ ಹೆಸರಲ್ಲಿ ಅಭಿವೃದ್ಧಿಗೆ ಮಾತ್ರ ಹಿನ್ನಡೆಯಾಗಿದೆ ಎಂದು ವ್ಯಂಗ್ಯವಾಡಿದರು.

ADVERTISEMENT

ಕಾಂಗ್ರೆಸ್ ಮತ್ತೆ ಸಂಘಟಿತವಾಗಿ ಮೇಲೆದ್ದಿದೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ನಮ್ಮ ಸಂಪರ್ಕದಲ್ಲೂ ಇದ್ದಾರೆ. ಕೆಲವು ಕಾರಣಗಳಿಂದ ಪಕ್ಷ ತೊರೆದ ಮುಖಂಡರು ಮತ್ತೆ ಪಕ್ಷ ಸೇರಿದರೆ ತಪ್ಪೇನು? ಹಾಗೆ ಅವರೂ ನಮ್ಮೊಡನೆ ಉತ್ತಮ ಸಂಬಂಧ ಹಾಗೂ ಸಂಪರ್ಕ ಹೊಂದಿದ್ದಾರೆ ಎಂದು ಸಾಯಿಬಣ್ಣ ಬೋರಬಂಡಾ ಅವರ ಪಕ್ಷ ಸೇರ್ಪಡೆಯ ಪ್ರಶ್ನೆಗೆ ಉತ್ತರಿಸಿದರು.

ಕ್ಷೇತ್ರದಲ್ಲಿ ಪಕ್ಷದ ಶಕ್ತಿ ಕುಂದಿದೆ ಎಂಬ ತಪ್ಪು ಗ್ರಹಿಕೆ ಬೇಡ, ಇಲ್ಲಿ ಕೆಲವರು ಸ್ವಾರ್ಥಕ್ಕಾಗಿ ಪಕ್ಷತೊರೆದು ಕಾರ್ಯಕರ್ತರನ್ನು ವಂಚಿಸಿದ್ದಾರೆ. ಪಕ್ಷ ಸಂಘಟನೆಗೆ ಹಿನ್ನಡೆಯಾಗಿಲ್ಲ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಂಘಟಿತಗೊಳ್ಳಲಿದೆ. ಕ್ಷೇತ್ರದ ಅಭ್ಯರ್ಥಿಯ ವಿಷಯ ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ. ಖರ್ಗೆ ಕುಟುಂಬಕ್ಕೂ ಕ್ಷೇತ್ರದ ಜನತೆಗೂ ಕರಳು ಬಳ್ಳಿಯ ಸಂಬಂಧವಿದೆ. ನಮ್ಮ ಕುಟುಂಬದಿಂದ ಯಾರೂ ಅಭ್ಯರ್ಥಿಯಾಗಲ್ಲ ಎಂದು ಸ್ಪಷ್ಟನೆ ನೀಡಿದರು.

ಮಹಿಪಾಲರೆಡ್ಡಿ ಹತ್ತಿಕುಣಿ, ವಿಶ್ವನಾಥ ನೀಲಹಳ್ಳಿ, ಶ್ರೇಣಿಕಕುಮಾರ ದೋಖಾ, ಬಸಿರೆಡ್ಡಿಗೌಡ ಅನಪೂರ, ರಘುನಾಥರೆಡ್ಡಿ ನಜರಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.