ADVERTISEMENT

‘ಕಾಂಗ್ರೆಸ್‌ನಿಂದ ಮಾತ್ರ ಅಲ್ಪಸಂಖ್ಯಾತರ ರಕ್ಷಣೆ’:ಅಬ್ದುಲ್ ಜಫರ್ ಸಾಬ್

ಅಲ್ಪಸಂಖ್ಯಾತರ ಚಿಂತನಾ ಸಭೆ; ಕಾಂಗ್ರೆಸ್‌ ಬೆಂಬಲಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 6:04 IST
Last Updated 22 ಜನವರಿ 2023, 6:04 IST
ಶಹಾಪುರ ನಗರದ ಚಾಂದ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆದ ಅಲ್ಪಸಂಖ್ಯಾತರ ಚಿಂತನಾ ಸಭೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಜಫರ್ ಸಾಬ್, ಶಾಸಕ ಶರಣಬಸಪ್ಪ ದರ್ಶನಾಪುರ ಅವರನ್ನು ಸನ್ಮಾನಿಸಲಾಯಿತು
ಶಹಾಪುರ ನಗರದ ಚಾಂದ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆದ ಅಲ್ಪಸಂಖ್ಯಾತರ ಚಿಂತನಾ ಸಭೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಜಫರ್ ಸಾಬ್, ಶಾಸಕ ಶರಣಬಸಪ್ಪ ದರ್ಶನಾಪುರ ಅವರನ್ನು ಸನ್ಮಾನಿಸಲಾಯಿತು   

ಶಹಾಪುರ: ‘ಮಾತಿನಲ್ಲಿ ನಾವೆಲ್ಲರೂ ಒಂದೇ ಎನ್ನುತ್ತ ಹಿಂದುತ್ವ ಮಂತ್ರ ಪಠಿಸುತ್ತಾ, ಜಾತಿ, ಧರ್ಮವನ್ನು ಒಡೆದು ಆಳುವ ನೀತಿ ಬಿಜೆಪಿಯ ಪ್ರಮುಖ ಉದ್ದೇಶ. ಕಾಂಗ್ರೆಸ್‌ನಿಂದ ಮಾತ್ರ ಅಲ್ಪಸಂಖ್ಯಾತರಿಗೆ ರಕ್ಷಣೆ ಸಾಧ್ಯ’ ಎಂದು ಕೆಪಿಸಿಸಿ ಅಲ್ಪಾಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಜಫರ್ ಸಾಬ್ ವಾಗ್ದಾಳಿನಡೆಸಿದರು.

ನಗರದ ಚಾಂದ್ ಪ್ಯಾಲೆಸ್‌ನಲ್ಲಿ ಶನಿವಾರ ನಡೆದ ಅಲ್ಪಾಸಂಖ್ಯಾತರ ಚಿಂತನ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಸರ್ಕಾರ ಇದ್ದಾಗ ಅಲ್ಪಸಂಖ್ಯಾತರ ಹಿತ ರಕ್ಷಣೆಗಾಗಿ ಜಾರಿಗೊಳಿಸಿದ್ದ ಎಲ್ಲ ಅಭಿವೃದ್ದಿ ಕಾರ್ಯಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿದೆ. ಧರ್ಮದ ವಿಷ ಬೀಜ ಬಿತ್ತಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಿದ್ದಾರೆ. ಕೋಮು ಭಾವನೆ ಕೆರಳಿಸುವುದು ಬಿಜೆಪಿಯ ಅಭಿವೃದ್ಧಿಯ ಮಂತ್ರದ ಜತೆಗೆ ತಂತ್ರವು ಅಡಗಿದೆ ಎಂದು ಆರೋಪಿಸಿದರು.

ADVERTISEMENT

ಬಿಜೆಪಿಯವರದ್ದು ಕಮಿಷನ್ ಸರ್ಕಾರ. ಪ್ರತಿ ಕಚೇರಿಯಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ನಾವೆಲ್ಲರೂ ಜಾಗೃತರಾಗದಿದ್ದರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು. ಕೋಮುವಾದಿ ಬಿಜೆಪಿಯನ್ನು ಕಿತ್ತು ಹಾಕಬೇಕು. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ ಕೊಟ್ಟಿರುವ ಅನುದಾನ ಹಾಗೂ ಸೌಲಭ್ಯವನ್ನು ಯಾರು ಮರೆಯಲು ಸಾಧ್ಯವಿಲ್ಲ. ಬಿಜೆಪಿ ಅಧಿಕಾರದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ಮಹಿಳೆಯರಿಗೆ ರಕ್ಷಣೆಯಿಲ್ಲ ಎಂದರು.

ಸೋಫಿ ಸರ್ಮಸ್ತ ದರ್ಗಾದ ಸೈಯದ್ ಶಾ ಮುಜಿಬುದ್ದೀನ್ ಸಾಬ್, ಕೆಪಿಸಿಸಿ ರಾಜ್ಯ ಘಟಕದ ಉಪಾಧ್ಯಕ್ಷ ಲಾಲ್ ಅಹ್ಮದ್ ಬಾಂಬೆ ಸೇಠ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮರಿಗೌಡ ಹುಲಕಲ್, ಸಯ್ಯದ ಇಬ್ರಾಹಿಂಸಾಬ್ ಜಮದಾರ, ಚಾಂದಪಾಶ ಗೋಗಿ, ಸುಭಾನಿ ಸಾಬ್ ಮಲ್ಲಾ, ಅಲ್ಲಾ ಪಟೇಲ್ ಮಕ್ತಾಪುರ, ಸೇಠ್ ಮುಸ್ತಫಾ, ರಫಿಕ್ ಚೌದ್ರಿ, ಮುಜಾಹೀದ್ ಅನುರಿ, ಸೈಯದ್ ಶಾ ಇಸ್ಮಾಯಿಲ್, ಸೈಯದ್ ಶಾ ಅಮೀನುದ್ದೀನ್, ಕೆ.ಅಬ್ದುಲ್ ಜಬ್ಬರ್, ತಲಾಖ್ ಚಂದ್, ನಯೀಮ್ ಪಟೇಲ್, ಆಸೀಫ್ ಅಸನ್, ಜೈರ್, ಶೇಖ ಅಬೀದ್, ಜಬ್ಬೀರ್ ಖಾನ್, ಸಲೀಂ ಸಂಗ್ರಾಂ ಇದ್ದರು.

‘ಕಾಂಗ್ರೆಸ್ ಗೆಲುವಿಗೆ ಶ್ರಮಿಸಿ’

ಸುರಪುರ: ‘ಅಲ್ಪಸಂಖ್ಯಾತರ ರಕ್ಷಣೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಮುಂಬರುವ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಜನರು ಮತ ಚಲಾಯಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಘಟಕದ ಅಧ್ಯಕ್ಷ ಕೆ. ಅಬ್ದುಲ್ ಜಬ್ಬಾರ್ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ರಾಹುಲ್ ಗಾಂಧಿ ಅವರು 3600 ಕಿಮೀ ಭಾರತ ಜೋಡೊ ಪಾದಯಾತ್ರೆ ಮಾಡಿರುವುದು ದೀನ ದಲಿತರ, ಬಡವರ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮತ್ತು ಸಂವಿಧಾನದ ರಕ್ಷಣೆಗಾಗಿ ಎಂಬುದನ್ನು ಬಂಧುಗಳು ನೆನಪಿಟ್ಟುಕೊಳ್ಳಬೇಕು. ಬಿಜೆಪಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ನೀಡುತ್ತಿದ್ದ ಅನುದಾನ ಕಡಿತ ಮಾಡಿದೆ’ ಎಂದು ಆರೋಪಿಸಿದರು.

‘ಮುಸ್ಲಿಂ ಸಮುದಾಯದವರು ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಕೆಲಸ ಮಾಡುತ್ತಿದ್ದು ಪಟ್ಟಿಯನ್ನು ಪರಿಶೀಲಿಸಿಕೊಳ್ಳಬೇಕು. ಈ ಚುನಾವಣೆಯಲ್ಲಿ ರಾಜಾ ವೆಂಕಟಪ್ಪ ನಾಯಕ ಅವರನ್ನು ಬೆಂಬಲಿಸಬೇಕು’ ಎಂದು ಹೇಳಿದರು.

ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಮಾತನಾಡಿ, ‘ಬಿಜೆಪಿಯವರಲ್ಲಿ ನಡುಕು ಹುಟ್ಟಿದೆ. ನನ್ನ ಬಗ್ಗೆ ಅಂಜಿಕೆ ಇದೆ. ಅದಕ್ಕಾಗಿಯೇ ಇಲ್ಲಿಗೆ ಮೋದಿಯವರನ್ನು ಕರೆತಂದು ಪ್ರಚಾರ ಮಾಡಿಸಿದ್ದಾರೆ. ಮೋದಿ ಅವರನ್ನು ನೋಡಿ ಮತ ಹಾಕ್ರಿ ಎನ್ನುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಲಾಲ್ ಅಹ್ಮದ್ ಸೇಠ್ ಬಾಂಬೆ, ಪ್ರಧಾನ ಕಾರ್ಯದರ್ಶಿ ಸಿರಾಜ್ ಸಾಬ್, ಜಿಲ್ಲಾಧ್ಯಕ್ಷ ಜಹೀರ್ ಸೇಠ್, ಕಲಬುರಗಿ ಮಹಾ ನಗರ ಪಾಲಿಕೆ ಸದಸ್ಯ ಶೇಖ್ ಹುಸೇನ್ ಬಾಬಾ, ಸುರಪುರ-ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಇದ್ದರು. ದಾವುದ್ ಪಠಾಣ ಸ್ವಾಗತಿಸಿದರು. ಅಬ್ದುಲ್ ಅಲಿಂ ಗೋಗಿ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.