ADVERTISEMENT

ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿಯ ರಕ್ಷಣೆ

ಎರಡು ಯಾಂತ್ರಿಕ ಬೋಟ್ ಬಳಸಿ ಸತತ 4 ಗಂಟೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:32 IST
Last Updated 9 ಆಗಸ್ಟ್ 2020, 16:32 IST
ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಳಿಯ ನದಿಯ ಮಧ್ಯೆದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಕುರಿಗಾಹಿಯನ್ನು ಸುರಕ್ಷಿತವಾಗಿ ಕರೆ ತರಲಾಯಿತು
ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಳಿಯ ನದಿಯ ಮಧ್ಯೆದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಕುರಿಗಾಹಿಯನ್ನು ಸುರಕ್ಷಿತವಾಗಿ ಕರೆ ತರಲಾಯಿತು   

ಹುಣಸಗಿ: ತಾಲ್ಲೂಕಿನ ನಾರಾಯಣಪುರದ ಛಾಯಾ ಭಗವತಿ ದೇವಸ್ಥಾನ ಬಳಿ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿಯನ್ನು ಭಾನುವಾರು ಅಧಿಕಾರಿಗಳು ಮತ್ತು ಎನ್‌ಡಿಆರ್‌ಎಫ್‌ ತಂಡದ ಸದಸ್ಯರು ರಕ್ಷಿಸಿದರು.

‌ವಾರದ ಹಿಂದೆ 230ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸಲು ನಡುಗಡ್ಡೆಗೆ ಟೋಪಣ್ಣ ರಾಠೋಡ ತೆರಳಿದ್ದ ವೇಳೆ ನಾರಾಯಣಪುರ ಜಲಾಶಯದ 18 ಗೇಟ್‌ಗಳ ಮೂಲಕ ಕೃಷ್ಣಾ ನದಿಗೆ 2.20 ಲಕ್ಷ ಕ್ಯುಸೆಕ್ ನೀರನ್ನು ಹರಿಸಲಾಗಿತ್ತು. ಇದರಿಂದ ಟೋಪಣ್ಣ ಕುರಿಗಳೊಂದಿಗೆ ನಡುಗಡ್ಡೆಯಲ್ಲೇ ಸಿಲುಕಿದ್ದರು.

ನೀರಿನ ಹರಿಯುವ ಪ್ರಮಾಣ ಹೆಚ್ಚಿದ್ದರಿಂದ ಶನಿವಾರ ಟೋಪಣ್ಣ ಮತ್ತು ಕುರಿಗಳನ್ನು ಮೀನುಗಾರರ ನೆರವಿನೊಂದಿಗೆ ರಕ್ಷಿಸಲು ಸಾಧ್ಯವಾಗಿರಲಿಲ್ಲ. ಭಾನುವಾರ ಹೈದರಾಬಾದ್‌ನ 16 ಜನರ ಎನ್‌ಡಿಆರ್‌ಎಫ್‌ ತಂಡ ಎರಡು ಯಾಂತ್ರಿಕ ಬೋಟ್ ಬಳಸಿ ಸತತ 4 ಗಂಟೆ ಕಾರ್ಯಾಚರಣೆ ನಡೆಸಿ ಟೋಪಣ್ಣ ಮತ್ತು ನಾಯಿಯನ್ನು ರಕ್ಷಿಸಿತು. ಕುರಿಗಳನ್ನು ಅಲ್ಲಿಯೇ ಬಿಡಲಾಗಿದ್ದು,‌ ನೀರಿನ ಹರಿಯುವ ಪ್ರಮಾಣ ಕಡಿಮೆಯಾದ ಬಳಿಕ ಅವುಗಳನ್ನು ತರಲು ನಿರ್ಧರಿಸಲಾಗಿದೆ.

ADVERTISEMENT

‘ಹಲವು ವರ್ಷಗಳಿಂದ ಕುರಿಗಳನ್ನು ಮೇಯಿಸುವುದೇ ನನ್ನ ಕಾಯಕ. ದವಸ– ಧಾನ್ಯ, ಆಹಾರ ಪದಾರ್ಥಗಳೊಂದಿಗೆ ಕುರಿ ಮೇಯಿಸಲು ತೆರಳಿದ್ದೆ. ಆದರೆ, ನಡುಗಡ್ಡೆಯಲ್ಲಿ ಸಿಲುಕಿದ್ದರಿಂದ ಆತಂಕವಾಗಿತ್ತು’ ಎಂದು ಟೋಪಣ್ಣ ತಿಳಿಸಿದರು.

‘ಪ್ರವಾಹದ ಕುರಿತು ತಾಲ್ಲೂಕು ಆಡಳಿತದ ವತಿಯಿಂದ ಡಂಗೂರ ಸಾರಿಸಿ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಲಾಗಿತ್ತು. ಆದರೂ ಕುರಿಗಳನ್ನು ಮೇಯಿಸಲು ಕೆಲ ಕುರಿಗಾಹಿಗಳು ಹೋಗುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ಇನ್ನಷ್ಟು ಜಾಗೃತಿ ಮೂಡಿಸಲು ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಜಲಾಶಯ ಮತ್ತು ನದಿ ತೀರದ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗುವುದು’ ಎಂದು ಶಾಸಕ ರಾಜೂಗೌಡ ತಿಳಿಸಿದರು.

ತಹಶೀಲ್ದಾರ್ ವಿನಯಕುಮಾರ ಪಾಟೀಲ, ಉಪ ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ, ಅಭಿವೃದ್ಧಿ ಅಧಿಕಾರಿ ಶರಣಬಸವ ಬಿರಾದಾರ, ಎನ್‌.ಡಿ.ಆರ್‌.ಎಫ್. ಅಧಿಕಾರಿ ಸುನೀಲಕುಮಾರ, ಡಿಎಫ್ಒ ಹನುಮಗೌಡ, ಬಿ.ಎಂ.ಹಳ್ಳಿಕೋಟೆ, ಎಫ್ಎಸ್ಒ ಪ್ರಮೋದ ವಾಲಿ, ಅಮರಣ್ಣ ಹುಡೇದ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಮೇಲಪ್ಪ ಗುಳಗಿ, ಪಿಎಸ್ಐಗಳಾದ ಅರ್ಜುನಪ್ಪ ಅರಕೇರಿ, ಬಾಶುಮೀಯ ಕೊಂಚೂರು, ಅಪ್ಪಣ್ಣ, ಶಿವು ಬಿರಾದಾರ, ಆಂಜನೇಯ ದೊರೆ, ರಮೇಶ ಕೋಳೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.