ADVERTISEMENT

ಬೆಳೆ ಹಾನಿ ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 16:07 IST
Last Updated 2 ಅಕ್ಟೋಬರ್ 2020, 16:07 IST
ಸುರಪುರದಲ್ಲಿ ಜೆಡಿಎಸ್ ಮುಖಂಡರು ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ಸುರಪುರದಲ್ಲಿ ಜೆಡಿಎಸ್ ಮುಖಂಡರು ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು   

ಸುರಪುರ: ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದಲ್ಲಿ ರೈತರ ಬೆಳೆ ನಷ್ಟವಾಗಿದ್ದು ಸರ್ಕಾರ ತಕ್ಷಣ ಬೆಳೆ ಪರಿಹಾರ ನೀಡಬೇಕು ಎಂದು ಜೆಡಿಎಸ್ ಮುಖಂಡರು ಗುರುವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿ, ‘ಭಾರಿ ಮಳೆಯಿಂದ ರೈತರ ಜಮೀನುಗಳಿಗೆ ಹಳ್ಳ, ಕಾಲುವೆ ನೀರು ನುಗ್ಗಿ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳು ಹಾಳಾಗಿವೆ’ ಎಂದು ತಿಳಿಸಿದರು.

‘ರೈತರು ಬೆಳೆದಿದ್ದ ಸಜ್ಜೆ, ತೊಗರಿ, ಹತ್ತಿ ಸೇರಿ ಇತರೆ ಬೆಳೆಗಳು ನಷ್ಟವಾಗಿದ್ದು ರೈತರ ಸ್ಥಿತಿ ಚಿಂತಾಜನಕವಾಗಿದೆ. ಕಂದಾಯ ಇಲಾಖೆಯವರು ತಕ್ಷಣ ಬೆಳೆ ನಷ್ಟ ಸಮೀಕ್ಷೆ ಮಾಡಿಸಿ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು. ಪರಿಹಾರ ವಿಳಂಬವಾದಲ್ಲಿ ರೈತರೊಂದಿಗೆ ಉಪವಾಸ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ತಹಶೀಲ್ದಾರ್ ನಿಂಗಣ್ಣ ಬಿರಾದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಎಚ್.ಡಿ.ಕುಮಾರಸ್ವಾಮಿ ಸೇನೆ ರಾಜ್ಯಾಧ್ಯಕ್ಷ ವೆಂಕೋಬ ದೊರೆ, ಜೆಡಿಎಸ್ ಜಿಲ್ಲಾ ಯುವ ಸಂಘಟನಾ ಕಾರ್ಯದರ್ಶಿ ತಿಪ್ಪಣ್ಣ ಪೊಲೀಸ್ ಪಾಟೀಲ್, ಜೆಡಿಎಸ್ ಮುಖಂಡರಾದ ಸಂಗಣ್ಣ ಬಾಕ್ಲಿ, ಶೌಕತ್ ಅಲಿ ಖುರೇಶಿ, ಎಂ.ಡಿ.ಬಾಬಾ, ಗೋಪಾಲ ಬಾಗಲಕೋಟೆ, ಅಲ್ತಾಫ್ ಸಗರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.