ADVERTISEMENT

ಫಲಾನುಭವಿಗಳಿಗೆ ನಿವೇಶನ ಒದಗಿಸಿ: ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 5:31 IST
Last Updated 5 ಜನವರಿ 2023, 5:31 IST
ರಾಜಾ ವೆಂಕಟಪ್ಪನಾಯಕ
ರಾಜಾ ವೆಂಕಟಪ್ಪನಾಯಕ   

ಸುರಪುರ: ‘ಇಲ್ಲಿನ ನಗರಸಭೆ ವ್ಯಾಪ್ತಿಯ ಪ್ರದೇಶದ ನಿವಾಸಿಗಳಿಗೆ 1997-98ನೇ ಸಾಲಿನಲ್ಲಿ ಹಕ್ಕು ಪತ್ರ ನೀಡಿರುವ ಫಲಾನುಭವಿಗಳಿಗೆ ನಿವೇಶನಗಳನ್ನು ಕೂಡಲೇ ಒದಗಿಸಬೇಕು’ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅವರು, ‘ನಗರಸಭೆ ವ್ಯಾಪ್ತಿಯ ವಣಿಕಿಹಾಳ ಸೀಮಾಂತರದ ಸರ್ವೇ ನಂ. 186 ರಲ್ಲಿ 180 ಮತ್ತು ಖಾನಾಪುರ ಎಸ್‍ಎಚ್ ಸೀಮಾಂತರದ ವೆಂಕಟಾಪುರ ಹತ್ತಿರದ ಸರ್ವೇ ನಂ. 95, 96 ರಲ್ಲಿ 300 ಫಲಾನುಭವಿಗಳಿಗೆ ಪುರಸಭೆ ವತಿಯಿಂದ ಆಶ್ರಯ ಯೋಜನೆಯಡಿ 1997-98ನೇ ಸಾಲಿನಲ್ಲಿ ನಿವೇಶನ ರಹಿತರಿಗೆ ಹಕ್ಕು ಪತ್ರ ಒದಗಿಸಲಾಗಿತ್ತು. ಇದುವರೆಗೂ ನಿವೇಶನ ಒದಗಿಸಿಲ್ಲ’ ಎಂದು ದೂರಿದ್ದಾರೆ.

‘ಆದರೆ ಇದೇ ಸರ್ವೇ ನಂಬರ್‌ಗಳಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯವರು ಹಕ್ಕು ಪತ್ರ ವಿತರಿಸಿದ ಫಲಾನುಭವಿಗಳಿಗೆ ನಿವೇಶನ ಹಂಚದೆ ಹೊಸ ಫಲಾನುಭವಿ ಗಳಿಗೆ ಮನೆಗಳನ್ನು ನಿರ್ಮಿಸುತ್ತಿದ್ದಾರೆ. 97-98 ನೇ ಸಾಲಿನಲ್ಲಿ ಹಕ್ಕು ಪತ್ರ ನೀಡಿದ ಫಲಾನುಭವಿಗಳಿಗೆ ನಿವೇಶನಗಳನ್ನು ಮೊದಲು ಒದಗಿಸಿ ಉಳಿದ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸಂಬಂಧಿಸಿದ ಅಧಿಕಾರಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಹಕ್ಕುಪತ್ರ ನೀಡಿದ ಫಲಾನುಭವಿಗಳಿಗೆ ಒಂದು ವಾರದೊಳಗೆ ನಿವೇಶನ ಒದಗಿಸದಿದ್ದರೆ ಸುರಪುರ ನಗರಸಭೆ ಕಾರ್ಯಾಲಯದ ಮುಂದೆ ನಿವೇಶನ ರಹಿತ ಫಲಾನುಭವಿಗಳೊಂದಿಗೆ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.