ADVERTISEMENT

ಗಂಗಾಪೂಜೆ ಮಾಡಿದ ಖರ್ಗೆ ದಂಪತಿ

ಭೀಮಾನದಿ ದಂಡೆಯಲ್ಲಿ ಇಂದು ಪುಷ್ಕರ ಕುಂಭಮೇಳ ಕೊನೆದಿನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 14:33 IST
Last Updated 22 ಅಕ್ಟೋಬರ್ 2018, 14:33 IST
ಯಾದಗಿರಿ ಸಮೀಪದ ಭೀಮಾನದಿಯಲ್ಲಿ ಸೋಮವಾರ ಸಂಸದ ಮಲ್ಲಿಕಾರ್ಜುನ ದಂಪತಿ ಗಂಗಾಪೂಜೆ ನೆರವೇರಿಸಿದರು
ಯಾದಗಿರಿ ಸಮೀಪದ ಭೀಮಾನದಿಯಲ್ಲಿ ಸೋಮವಾರ ಸಂಸದ ಮಲ್ಲಿಕಾರ್ಜುನ ದಂಪತಿ ಗಂಗಾಪೂಜೆ ನೆರವೇರಿಸಿದರು   

ಯಾದಗಿರಿ: ಇಲ್ಲಿ ಭೀಮಾನದಿಯ ಗುರಸಣಗಿ ಬ್ಯಾರೇಜ್‌ ಬಳಿಯ ನದಿದಂಡೆಯಲ್ಲಿ ಕಮ್ಮಾ ಸಮಾಜದ ಹಮ್ಮಿಕೊಂಡಿರುವ ಪುಷ್ಕರ ಕುಂಭಮೇಳದಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ದಂಪತಿ ಭಾಗವಹಿಸುವ ಮೂಲಕ ಸೋಮವಾರ ಭೀಮಾನದಿಯಲ್ಲಿ ಗಂಗಾಪೂಜೆ ನೆರವೇರಿಸಿದರು.

ಖರ್ಗೆ ಅವರ ಶ್ರೀಮತಿಯವರು ನದಿಗೆ ಬಾಳೆಹಣ್ಣು, ಹಸಿರುಸೀರೆ, ಹಸಿರು ಗಾಜಿನ ಬಳೆ, ಕೆಂಪು, ಹರಿಷಿಣ ಕುಂಕುಮವನ್ನು ಗಂಗೆಗೆ ಅರ್ಪಿಸುವ ಮೂಲಕ ನದಿಗೆ ನಮಸ್ಕರಿಸಿದರು.

ಆಂಧ್ರ ಮೂಲದ ಮೂವರು ಅರ್ಚಕರು ಖರ್ಗೆ ದಂಪತಿ ಗಂಗಾಪೂಜೆ ನೆರವೇರಿಸುವಲ್ಲಿ ಧಾರ್ಮಿಕ ಕಾರ್ಯಗಳಿಗೆ ನೆರವಾದರು. ನಂತರ ನದಿದಂಡೆಯಲ್ಲಿ ಕಮ್ಮಾ ಸಮಾಜ ಸ್ಥಾಪಿಸಿದ್ದ ಭೀಮಾಶಂಕರ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಕಮ್ಮಾ ಸಮಾಜ ಖರ್ಗೆ ದಂಪತಿಯನ್ನು ಸನ್ಮಾನಿಸಿತು.

ADVERTISEMENT

‘ನದಿಯಲ್ಲಿ ಮುಕ್ಕೋಟಿ ದೇವತೆಗಳಿ ನೆಲೆಸಿರುತ್ತಾರೆ ಎಂಬುದು ಧಾರ್ಮಿಕ ನಂಬಿಕೆ. ಪುಷ್ಕರ ಕೂಡ ಅಪರೂಪದ ಧಾರ್ಮಿಕ ಕಾರ್ಯಕ್ರಮ. ಕಮ್ಮಾ ಸಮಾಜ ಹಾಗೂ ಸ್ಥಳೀಯ ಮುಖಂಡರ ಆಹ್ವಾನದ ಮೇರೆಗೆ ಕುಂಭಮೇಳದಲ್ಲಿ ಭಾಗವಹಿಸಿದ್ದೇನೆ. ಇದರಿಂದಾಗಿ ಆತ್ಮತೃಪ್ತಿ ಮನಸ್ಸಿಗೆ ದೊರೆತಂತಾಗಿದೆ. ನದಿಪೂಜೆ ಅತ್ಯಂತ ಶ್ರೇಷ್ಠ. ರೈತರಿಗೆ ಜೀವನಾಡಿ ಆಗಿರುವ ನೀರಿನ ಮೂಲಗಳನ್ನು ಪೂಜಿಸಿ ರಕ್ಷಿಸಬೇಕಾದ ಹೊಣೆ ನಮ್ಮದು’ ಎಂದು ಸಂಸದ ಖರ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಇಂದು ಪುಷ್ಕರ ಕುಂಭಮೇಳ ಕೊನೆದಿನ

12 ದಿನಗಳಿಂದ ಭೀಮಾ ನದಿ ದಂಡೆಯಲ್ಲಿ ಹಮ್ಮಿಕೊಂಡಿರುವ ಪುಷ್ಕರ ಕುಂಭಮೇಳ ಅ.23 ರಂದು ಕೊನೆಗೊಳ್ಳಲಿದೆ ಎಂದು ಕಮ್ಮಾ ಸಮಾಜ ರಾಜ್ಯ ಘಟಕದ ಅಧ್ಯಕ್ಷ ಶ್ರೀರಾಮಕೃಷ್ಣ ತಿಳಿಸಿದರು.

ರಾಜ್ಯದಲ್ಲಿ ಕಾವೇರಿ, ತಿಂಥಿಣಿ ಬಳಿಯ ಕೃಷ್ಣಾ ಹಾಗೂ ಈ ಬಾರಿ ಭೀಮಾ ನದಿ ಸೇರಿದಂತೆ ಮೂರು ಕಡೆ ಪುಷ್ಕರ ಕುಂಭಮೇಳ ಮಹೋತ್ಸವ ನಡೆಸಲಾಗಿದೆ. ಕಮ್ಮಾ ಸಮಾಜ12 ವರ್ಷಗಳಿಗೊಮೆಮ ಪುಷ್ಕರ ಕುಂಭಮೇಳ ಮಹೋತ್ಸವ ನಡೆಸುತ್ತಾ ಬರಲಾಗಿದೆ. ಈ ಉತ್ಸವದಲ್ಲಿ ಭಾಗವಹಿಸಿ ನದಿಸ್ನಾನ ಮಾಡಿದವರಿಗೆ ನೆಮ್ಮದಿ ಸಿಗಲಿದೆ ಎಂಬ ನಂಬಿಕೆ ಇದೆ’ ಎಂದು ಹೇಳಿದರು.

ಉತ್ಸವದಲ್ಲಿ ಇದುವರೆಗೂ ಭಾಗವಹಿಸಿದ್ದ 1ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಕಮ್ಮ ಸಮಾಜ ಪ್ರಸಾದ, ಅನ್ನ ಸಂತರ್ಪಣೆ ಮಾಡಿದೆ. ಸ್ಥಳೀಯ ಮುಖಂಡರು ಕಮ್ಮಾ ಸಮಾಜಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ ಕಾರಣ ಮಹೋತ್ಸವ ಯಶಸ್ವಿಯಾಗಿದೆ. ಹೀಗೆ ಸ್ಥಳೀಯರು ಪ್ರೋತ್ಸಾಹ ನೀಡಿದರೆ ಜಿಲ್ಲೆಯಲ್ಲಿ ಭೀಮಾಶಂಕರ ದೇಗುಲ ನಿರ್ಮಿಸುವ ಚಿಂತನೆಯನ್ನು ಸಮಾಜ ಮಾಡಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.