ADVERTISEMENT

ಗುರುಮಠಕಲ್: ಆಗಸದಲ್ಲಿ ಗುಡುಗಿನ ಅಬ್ಬರ,ಆಲಿಕಲ್ಲು ಮಳೆ

ಎಂ.ಪಿ.ಚಪೆಟ್ಲಾ
Published 28 ಏಪ್ರಿಲ್ 2025, 6:21 IST
Last Updated 28 ಏಪ್ರಿಲ್ 2025, 6:21 IST
<div class="paragraphs"><p>ಗುರುಮಠಕಲ್ ಪಟ್ಟಣದಲ್ಲಿ ಭಾನುವಾರ ಸುರಿದ ಮಳೆಯಿಂದ ರಸ್ತೆಯಲ್ಲಿ ಆಲಿಕಲ್ಲು ಸಂಗ್ರಹವಾಗಿರುವುದು</p></div>

ಗುರುಮಠಕಲ್ ಪಟ್ಟಣದಲ್ಲಿ ಭಾನುವಾರ ಸುರಿದ ಮಳೆಯಿಂದ ರಸ್ತೆಯಲ್ಲಿ ಆಲಿಕಲ್ಲು ಸಂಗ್ರಹವಾಗಿರುವುದು

   

ಗುರುಮಠಕಲ್: ಬಾನಿನಲ್ಲಿ ಗುಡುಗಿನ ಅಬ್ಬರ, ಮಿಂಚಿನ ಚಿತ್ತಾರಗಳು, ಗಾಳಿಯ ತಾಳಕೆ ಕುಣಿದ ಆಲಿಕಲ್ಲು, ರಭಸದಿಂದ ಧಾತ್ರಿಯ ಚುಂಬಿಸಿದ ವರುಣ!

ಇದು, ತಾಲ್ಲೂಕಿನ ವಿವಿಧೆಡೆ ಭಾನುವಾರ ಕಂಡುಬಂದ ಪೂರ್ವ ಮಂಗಾರು ವೈಭವದ ದೃಶ್ಯ.

ADVERTISEMENT

ತಾಲ್ಲೂಕು ವ್ಯಾಪ್ತಿಯ ಗುರುಮಠಕಲ್ ಪಟ್ಟಣ ಸೇರಿದಂತೆ ಚಪೆಟ್ಲಾ, ಕಾಕಲವಾರ, ಚಂಡ್ರಿಕಿ, ಕೇಶ್ವಾರ ಗ್ರಾಮಗಳಲ್ಲಿ ಆಲಿಕಲ್ಲು ಮಳೆಯಾಗಿದೆ.

ದಂತಾಪುರ, ಪುಟಪಾಕ, ಮಲ್ಲಾಪುರ, ಮುಸಲೇಪಲ್ಲಿ, ಅಮ್ಮಪಲ್ಲಿ, ಮಿನಾಸಪುರ, ನಜರಾಪುರ, ಗಾಜರಕೋಟ, ಎಂ.ಟಿ.ಪಲ್ಲಿ, ಗುಂಜನೂರು, ಚಿನ್ನಾಕಾರ, ಕಂದಕೂರು, ಕೊಂಕಲ್, ಅನಪುರ, ಯಲ್ಲೇರಿ ಗ್ರಾಮಗಳಲ್ಲಿ ಬಿರುಸಿನ ಗಾಳಿ ಸಹಿತ ಮಳೆ ಸುರಿದಿದೆ.

ಮಧ್ಯಾಹ್ನ 1 ಗಂಟೆಗೆ ಆರಂಭವಾಗಿ ಸುಮಾರು ಒಂದು ಗಂಟೆಕಾಲ ಉತ್ತಮ ಮಳೆ ಸುರಿದಿದ್ದು, ಕಾದ ಕಾವಲಿಯಂತಾಗಿದ್ದ ವಾತಾವರಣವು ತಂಪಾಯಿತು.

ಭಾನುವಾರ ಬೆಳಿಗ್ಗೆಯಿಂದ ಬಿಸಿಲಿನ ಧಗೆ ಹೆಚ್ಚಿತ್ತು. ಮಧ್ಯಾಹ್ನ ಜೋರು ಗಾಳಿ ಬೀಸಲು ಆರಂಭಗೊಂಡಿತು. ಏಕಾಏಕಿ ಮೋಡ ಕವಿದ ವಾತಾವರಣ. ಗುಂಡುಗಳನ್ನು ಎಸೆಯುತ್ತಿದ್ದಾರೇನೋ’ ಎನ್ನುವಂತೆ ಆಲಿಕಲ್ಲು ಮಳೆಯಾಗಿದೆ.

ಭತ್ತ ಕಟಾವಿಗೆ ಸಮಸ್ಯೆ:

ಬೇಸಿಗೆಯಲ್ಲಿ ನೀರಾವರಿ ಮೂಲಕ ಬೆಳೆದ ಭತ್ತ ಈಗೆ ಹೊಟ್ಟೆ ಹಿಡಿದಿದೆ (ಭತ್ತದ ತೆನೆ ಪೂರ್ಣವಾಗಿ ಬಲಿತದ್ದು), ಕೆಲವೆಡೆ ಕಟಾವು ಕೂಡ ನಡೆದಿದೆ. ಆಲಿಕಲ್ಲಿನ ರಭಸಕ್ಕೆ ಭತ್ತವು ಹುಲ್ಲಿನಿಂದ ಉದುರುವ ಭೀತಿ ಕಾಡುತ್ತಿದೆ. ಹೀಗಾದರೆ, ಕೈಗೆ ಬಂದ ಬೆಳೆ ಭೂಮಿ ಪಾಲಾಗುವಂತಿದೆ ಎಂದು ಕೇಶ್ವಾರದ ರೈತರಾದ ಪುಲ್ಲಾರೆಡ್ಡಿ ಸಜ್ಜಲ್, ಮಹಬೂಬ್ ಕೋರೆಬನ್ ಮತ್ತು ಊಷಪ್ಪ ಗೊಲ್ಲ ಅಳಲು ತೋಡಿಕೊಂಡರು.

ವಿದ್ಯುತ್ ಕಡಿತ:

ಭಾನುವಾರ ಮಧ್ಯಾಹ್ನ 1 ಗಂಟೆಗೆ ಗಾಳಿ ಬೀಸುವುದು ಆರಂಭ ಗೊಳ್ಳುತ್ತಿದ್ದಂತೆ ವಿದ್ಯುತ್ ಕಡಿತವಾಗಿದ್ದು, ಗ್ರಾಮೀಣ ಭಾಗದಲ್ಲಿ ಗಾಳಿ ಬರುತ್ತಲೇ ವಿದ್ಯುತ್ ಕಡಿತ ಸಾಮಾನ್ಯ. ಜೆಸ್ಕಾಂ ನೆಪ ಹುಡುಕುತ್ತ ಕೂತಿರುತ್ತದೆ ಎನ್ನಿಸುತ್ತದೆ. ಸ್ವಲ್ಪ ಗಾಳಿಯಾದರೂ ವಿದ್ಯುತ್ ಕಡಿತ ಮಾಡುತ್ತಾರೆ ಎಂದು ಸಾರ್ವಜನಿಕರು ದೂರಿದರು.

ವಿದ್ಯುತ್ ಕಡಿತಕ್ಕೆ ಸಂಬಂಧಿಸಿದಂತೆ ಜೆಸ್ಕಾಂ ಅಧಿಕಾರಿಯೊಬ್ಬರು, ‘ಮಳೆ-ಗಾಳಿಯ ವೇಳೆ ತಂತಿಗಳಲ್ಲಿ ಅಥವಾ ಮೇನ್ ಲೈನ್ ಸಂಪರ್ಕದ ಜಂಕ್ಷನ್ ಗಳಲ್ಲಿ ಏನಾದರೂ ವ್ಯತ್ಯಾಸವಾದರೆ ಲೈನ್ ತಾನಾಗಿಯೇ ಟ್ರಿಪ್ ಆಗುತ್ತದೆ. ಅದನ್ನು ನಮ್ಮ ಸಿಬ್ಬಂದಿ ಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಹುಡುಕಿ, ಸರಿಪಡಿಸಿ, ವಿದ್ಯುತ್ ಸಂಪರ್ಕವನ್ನು ಆರಂಭಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಬದ್ದೇಪಲ್ಲಿ ತಾಂಡಾ: ಸಿಡಿಲಿಗೆ 3 ಮೇಕೆ ಸಾವು

ಬದ್ದೇಪಲ್ಲಿ ತಾಂಡಾ (ಸೈದಾಪುರ): ಸಮೀಪದ ಬದ್ದೇಪಲ್ಲಿ ತಾಂಡದಲ್ಲಿ ಭಾನುವಾರ ಮಧ್ಯಾಹ್ನ ಸಿಡಿಲಿಗೆ ಗ್ರಾಮದ ಇಮ್ಲನಾಯಕ ಅವರ ಮೂರು ಮೇಕೆಗಳು ಮೃತಪಟ್ಟಿವೆ.

ಸುಮಾರು ₹40 ಸಾವಿರ ಮೌಲ್ಯದ ಮೇಕೆಗಳು ಮೃತಪಟ್ಟಿವೆ. ಸಂಕಷ್ಟದ ಸಮಯದಲ್ಲಿ ಜೀವನೋಪಾಯಕ್ಕೆ ಅನುಕೂಲವಾಗುವ ನಂಬಿಕೆಯಿಂದ ಸಾಕಿಕೊಂಡಿದ್ದ ಮೇಕೆಗಳು ನೈಸರ್ಗಿಕ ವಿಕೋಪಕ್ಕೆ ತುತ್ತಾಗಿವೆ. ಸರ್ಕಾರ ಸಹಾಯಧನ ಒದಗಿಸಿಕೊಡಬೇಕು ಎಂದು ರೈತ ಅವಲು ತೋಡಿಕೊಂಡರು.

ಮಧ್ಯಾಹ್ನ ಸುಮಾರು 2 ಗಂಟೆಗೆ ಪ್ರಾರಂಭವಾದ ಭಾರಿ ಮಳೆ, ಗಾಳಿ, ಗುಡುಗು-ಸಿಡಿಲಿಗೆ ಅಡವಿಯಲ್ಲಿ ಮೇಯಲು ಹೋದಾಗ ದುರ್ಘಟನೆ ಸಂಭವಿಸಿದೆ.

ಭತ್ತ ಕಟಾವು ನಡೆಸಲು ಸಿದ್ಧತೆ ಮಾಡಿಕೊಂಡಿದ್ದೆವು. ಭಾನುವಾರ ಸುರಿದ ಗಾಳಿ ಸಹಿತ ಮಳೆಗೆ ಭತ್ತ ನೆಲಕಚ್ಚಿದೆ
ರಾಮರೆಡ್ಡಿ ಯಡ್ಲಾ ಕೇಶ್ವಾರ, ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.