ನಾರಾಯಣಪುರ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ತಗ್ಗಿದ ಹಿನ್ನೆಲೆಯಲ್ಲಿ ಮಂಗಳವಾರ ಬಸವಸಾಗರ ಜಲಾಶಯದ 19 ಕ್ರಸ್ಟ್‌ಗೇಟ್‌ಗಳನ್ನು ತೆರೆದು 65 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ.
ಮಂಗಳವಾರ ಬೆಳಿಗ್ಗೆ ಬಸವಸಾಗರ ಜಲಾಶಯಕ್ಕೆ ಆಲಮಟ್ಟಿಯ ಲಾಲ್‌ಬಹಾದ್ದೂರ್ ಶಾಸ್ತ್ರೀ ಜಲಾಶಯದಿಂದ ಬರುವ ಒಳಹರಿವು 65 ಸಾವಿರ ಕ್ಯುಸೆಕ್‌ಗೆ ಕಡಿಮೆಗೊಳಿಸಲಾಗಿದೆ.
ಪ್ರಸ್ತುತ ಉಭಯ ಜಲಾಶಯಗಳಿಗೆ ಬರುವ ಒಳಹರಿವು ಕೃಷ್ಣಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣವನ್ನು ಅವಲಂಬಿಸಿದೆ. ಒಂದೊಮ್ಮೆ ಮಳೆ ಪ್ರಮಾಣ ತಗ್ಗಿದರೆ ಜಲಾಶಯಗಳಿಗೆ ಬರುವ ಒಳಹರಿವು ಹಂತ ಹಂತವಾಗಿ ಕಡಿಮೆಯಾಗಲಿದೆ. ಆ ವೇಳೆ ನದಿಗೆ ನೀರು ಹರಿಸುವ ಪ್ರಮಾಣ ಕಡಿಮೆಗೊಳಿಸಲಾಗುತ್ತದೆ. ಮಳೆ ಹೆಚ್ಚಾದರೆ ಒಳಹರಿವು ಹೆಚ್ಚಾಗಿ ಜಲಾಶಯಗಳಿಂದ ನದಿಗೆ ನೀರು ಹರಿಸುವದನ್ನು ಹೆಚ್ಚಿಸಲಾಗುತ್ತದೆ. ಮಳೆಗಾಲದ ಅವಧಿಯಲ್ಲಿ ಇದು ನಿರಂತರ ಪ್ರಕ್ರಿಯೆಯಾಗಿದೆ ಹೀಗಾಗಿ ನದಿ ತೀರದ ಗ್ರಾಮಗಳ ಜನರು ಜಾಗೃತಿಯಿಂದ ಇರಬೇಕು ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸುತ್ತಾರೆ.
ಪ್ರತಿ ವರ್ಷದ ಮಳೆಗಾಲದ ಅವಧಿಯಲ್ಲಿ ಉಭಯ ಜಲಾಶಯಗಳಿಂದ ಲಕ್ಷಾಂತರ ಕ್ಯುಸೆಕ್‌ನಷ್ಟು ಭಾರೀ ಪ್ರಮಾಣದಲ್ಲಿ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತದೆ. ಒಂದು ಹಂತದಲ್ಲಿ ಜಲಾಶಯಗಳ ಹಿನ್ನೀರು ವ್ಯಾಪ್ತಿಯ ನದಿ ತೀರದ ಗ್ರಾಮಗಳಿಗೆ ಹಿನ್ನೀರು ಸಂಗ್ರಹದಿಂದ ಧಕ್ಕೆಯಾಗದಂತೆ ಮತ್ತು ಜಲಾಶಯದ ಸಂಗ್ರಹ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಸವಾಲಿನ ಕೆಲಸದ ನಡುವೆಯೂ ನದಿಯಲ್ಲಿನ ನೀರಿನ ಪ್ರವಾಹ ನಿಯಂತ್ರಿಸುವ ಜವಬ್ದಾರಿಯನ್ನು ಉಭಯ ಜಲಾಶಯಗಳ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಸಮರ್ಪಕವಾಗಿ ನಿರ್ವಹಿಸುತ್ತಾರೆ.
ಪ್ರಸ್ತುತ ಬಸವಸಾಗರದಲ್ಲಿ 32.28 ಟಿಎಮ್ಸಿ ಅಡಿ ನೀರು ಸಂಗ್ರಹ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.