ಶಹಾಪುರ: ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ ಮರಕಲ್ ಅವರನ್ನು ತಕ್ಷಣ ವಜಾಗೊಳಿಸಬೇಕು. ಭೀಮರಾಯನಗುಡಿ ಠಾಣೆಯ ಪಿಎಸ್ಐ ಅವರನ್ನು ವರ್ಗಾವಣೆಗೊಳಿಸಿ ಹಾಗೂ ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಅವರ ಮೇಲೆ ಹಾಕಿದ ದೂರು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಶುಕ್ರವಾರ ಸಂಯುಕ್ತ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ,‘ರೈತರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿ ಮಾತನಾಡುವುದು ತಪ್ಪು ಎನ್ನುವಂತೆ ಆಗಿದೆ. ಕೃಷಿ ಪರಿಕರ ಮಾರಾಟಗಾರರ ಸಂಘದ 300ಕ್ಕೂ ಹೆಚ್ಚು ಸದಸ್ಯರು ಮುಂಗಾರು ಹಬ್ಬದಲ್ಲಿ ಇದ್ದಾರೆ. ಒಬ್ಬ ವ್ಯಕ್ತಿ ಬಂದು ಹಲ್ಲೆ ಮಾಡಲು ಬಂದಿದ್ದಾರೆ ಎಂದು ದೂರು ನೀಡಿದರೆ ಪೊಲೀಸರು ಹಿಂದೆ ಮುಂದೆ ವಿಚಾರಿಸಿದೆ ದೂರು ದಾಖಲಿಸಿಕೊಂಡಿದ್ದು ಗಮನಿಸಿದರೆ ಇಲ್ಲಿ ಪೊಲೀಸ್ ಆಡಳಿತ ವ್ಯವಸ್ಥೆ ಎದ್ದುಕಾಣುತ್ತಲಿದೆ. ಪಡಿತರ ಅಕ್ಕಿ ಮಾರಾಟಗಾರರಿಗೆ ಭದ್ರತೆ, ನಕಲಿ ರಸಗೊಬ್ಬರ, ಬೀಜ ಮಾರಾಟಗಾರರಿಗೆ ರಕ್ಷಣೆ ನೀಡುತ್ತಿರುವ ಪೊಲೀಸ್ ವ್ಯವಸ್ಥೆ ಜನತೆಯಲ್ಲಿ ಭೀತಿ ಉಂಟು ಮಾಡಿದೆ’ ಎಂದು ಆಪಾದಿಸಿದರು.
ರೈತ ಹಿರಿಯ ಮುಖಂಡ ಮಲ್ಲಣ್ಣ ಪರಿವಾಣ ಗೋಗಿ ಹಾಗೂ ಮಲ್ಲಿಕಾರ್ಜುನ ಸತ್ಯಂಪೇಟೆ,‘ರೈತ ಹಾಗೂ ನ್ಯಾಯಪರ ಕೆಲಸ ಮಾಡುವ ರೈತ ಮುಖಂಡ ಚೆನ್ನಪ್ಪ ಆನೇಗುಂದಿ ಅವರ ಮೇಲೆ ಇಲ್ಲ ಸಲ್ಲದ ಆರೋಪಿ ಮಾಡಿ ಅವರ ನೈತಿಕ ಶಕ್ತಿ ಕಸಿದುಕೊಳ್ಳುವ ಯತ್ನ ನಡೆಸಿದ್ದಾರೆ. ಹೋರಾಟ ಹಕ್ಕು ಕಸಿದುಕೊಂಡು ಹಾಗೂ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಸಾಗಿದಾಗ ದುಷ್ಟಶಕ್ತಿಗಳು ಜತೆಗೂಡಿ ಪೊಲೀಸ್ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಜೀವ ಬೆದರಿಕೆ ಎಂಬ ಕಪಟ ನಾಟಕ ಆಡುತ್ತಿರುವ ಕೃಷಿ ಪರಿಕರ ಮಾರಾಟಗಾರರು ಎಚ್ಚರಿಕೆ ಹೆಜ್ಜೆ ಇಡಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೀಶ, ಕೃಷಿ ಜಂಟಿ ನಿರ್ದೇಶಕಿ ಮಂಜುಳಾ , ತಹಶೀಲ್ದಾರ್ ಉಮಾಕಾಂತ ಹಳ್ಳೆ, ಕೃಷಿ ಅಧಿಕಾರಿ ಸುನೀಲ್ ಕುಮಾರ, ಪಿಐ ಎಸ್.ಎಂ ಪಾಟೀಲ ಅವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ನಗರದ ಸಿ.ಬಿ ಕಮಾನಿಂದ ಬಸವೇಶ್ವರ ವೃತ್ತದವರೆಗೆ ರೈತ ಮುಖಂಡರು ಪ್ರತಿಭಟನೆಯ ಮೂಲಕ ಆಗಮಿಸಿ ನಂತರ ಸಮಾವೇಶಗೊಂಡರು.
ಪ್ರತಿಭಟನೆಯಲ್ಲಿ ಮುಖಂಡರಾದ ದಾವಲಸಾಬ್ ನದಾಫ್, ಎಸ್.ಎಂ ಸಾಗರ, ದೇವಿಂದ್ರಪ್ಪಗೌಡ ಗುತ್ತೆದಾರ, ಶರಣು ಮಂದರವಾಡ ಮದ್ರಿಕಿ, ದೇವಿಂದ್ರಪ್ಪ ಕೊಲ್ಕರ್, ಹೊನ್ನಪ್ಪ ಗಂಗನಾಳ, ನಾಗಣ್ಣ ಬಡಿಗೇರ, ಚನ್ನಾರಡ್ಡಿ ಪಾಟೀಲ, ಮಹೇಶಗೌಡ ಸುಬೇದಾರ,ಬಸವರಾಜ ದೊರೆ, ಅನಿತಾ ಹಿರೇಮಠ, ಜೈಲಾಲ್ ತೋಟದಮನಿ, ಭೀಮರಾಯ ಪೂಜಾರಿ, ಮಲ್ಕಣ್ಣ ಚಿಂತಿ, ಭೀಮಣ್ಣ ಶಖಾಪುರ, ಪ್ರಭಾಕರರೆಡ್ಡಿ, ಮಲ್ಲಣಗೌಡ ನಗನೂರ, ಸಿದ್ದು ಮುಂಡಾಸ, ಪ್ರದೀಪ ಅಣಬಿ, ರಾಮಯ್ಯ ದೊರಿ, ವೆಂಕೋಬ ಕಟ್ಟಿಮನಿ, ಪ್ರಕಾಶ ಆಲ್ದಾಳ, ಸಿದ್ದಯ್ಯ ಹಿರೇಮಠ, ದೇವಿಂದ್ರಪ್ಪ ಪತ್ತಾರ, ಮಲ್ಲಣ್ಣ, ಮಹಾದೇವಮ್ಮ ಹಿರೇಮಠ, ಬಸಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.