ADVERTISEMENT

26ಕ್ಕೆ ಗಣರಾಜ್ಯೋತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ

ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅಧ್ಯಕ್ಷತೆಯಲ್ಲಿ ಪೂರ್ವಸಿದ್ಧತಾ ಸಭೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 14:11 IST
Last Updated 16 ಜನವರಿ 2019, 14:11 IST
ಯಾದಗಿರಿಯಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿದರು
ಯಾದಗಿರಿಯಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿದರು   

ಯಾದಗಿರಿ:‘ಜಿಲ್ಲಾಡಳಿತದ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆಯನ್ನು ಜ.26ರಂದು ಬೆಳಿಗ್ಗೆ 9ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಜೆ 6ಕ್ಕೆ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜ.26ರಂದು ಬೆಳಿಗ್ಗೆ 7ರಿಂದ 8ರವರೆಗೆ ನೂತನ ತಾಲ್ಲೂಕುಗಳಾದ ಗುರುಮಠಕಲ್, ವಡಗೇರಾ ಹಾಗೂ ಹುಣಸಗಿ ಸೇರಿದಂತೆ ಜಿಲ್ಲೆಯಾದ್ಯಂತ ಗಣರಾಜ್ಯೋತ್ಸವ ದಿನವನ್ನು ವಿಜೃಂಭಣೆಯಿಂದ ಆಚರಿಸಬೇಕು. ಅದೇ ರೀತಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸರ್ಕಾರಿ, ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಧ್ವಜಾರೋಹಣ ನೆರವೇರಿಸಬೇಕು. ಮಹಾತ್ಮ ಗಾಂಧೀಜಿಯವರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರಗಳನ್ನು ಇಟ್ಟು ಪೂಜಿಸಬೇಕು’ ಎಂದು ಸೂಚಿಸಿದರು.

ADVERTISEMENT

ಅಂದು ಬೆಳಿಗ್ಗೆ 9ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುವರು. ಆದ್ದರಿಂದ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು 8.30 ರವರೆಗೆ ಕಡ್ಡಾಯವಾಗಿ ಹಾಜರಿರಬೇಕು. ಇದಕ್ಕೂ ಮುನ್ನ ಬೆಳಿಗ್ಗೆ 8ಕ್ಕೆ ಜಿಲ್ಲಾಡಳಿತ ಭವನದ ಎದುರು ಧ್ವಜಾರೋಹಣವನ್ನು ನೆರವೇರಿಸಲಾಗುವುದು. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿರುವಂತೆ ಅವರು ನಿರ್ದೇಶಿಸಿದರು.

ನಾಡಗೀತೆ, ಭಕ್ತಿಗೀತೆ, ರಾಷ್ಟ್ರಗೀತೆಗಳನ್ನು ಹಾಡಲು ನುರಿತ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಬೇಕು. ನಂತರ ಶಾಲಾ- ಕಾಲೇಜು ಮಕ್ಕಳಿಂದ ದೇಶಭಕ್ತಿ ಮತ್ತು ಭಾವೈಕ್ಯತೆಯಿಂದ ಕೂಡಿರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದರು.

‘15 ಮಂದಿ ಸಾಧಕರ ಸನ್ಮಾನ:
ವಿವಿಧ ಇಲಾಖೆಗಳಲ್ಲಿ ಸೇವಾ, ಕಲಾ, ಸಾಹಿತ್ಯ, ಸಂಗೀತ, ನೃತ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 5ಜನರಿಗೆ ಸನ್ಮಾನ ಮತ್ತು ಸಕಾಲದಲ್ಲಿ ಅತಿ ಹೆಚ್ಚು ಕಾಲಾವಕಾಶ ತೆಗೆದುಕೊಳ್ಳದೇ ಶೀಘ್ರದಲ್ಲಿ ಕಡತಗಳನ್ನು ವಿಲೇವಾರಿ ಮಾಡಿರುವ 5 ಜನ ಅಧಿಕಾರಿ, ಸಿಬ್ಬಂದಿಯವರಿಗೆ ಹಾಗೂ ಸರ್ಕಾರಿ ಕರ್ತವ್ಯದಲ್ಲಿ ಉತ್ತಮ ಸೇವೆ ಸಲ್ಲಿಸಿರುವ 5 ಜನ ಅಧಿಕಾರಿ, ಸಿಬ್ಬಂದಿಯವರಿಗೆ 2018–19ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಹೆಸರುಗಳನ್ನು ಮೇಲಧಿಕಾರಿಗಳಿಂದ ಶಿಫಾರಸು ಪಡೆದು ಆಯ್ಕೆ ಸಮಿತಿಗೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.

ವಸ್ತು ಪ್ರದರ್ಶನ:
ಕೈಮಗ್ಗ ಮತ್ತು ಜವಳಿ ಇಲಾಖೆ, ಕಾರ್ಮಿಕ ಇಲಾಖೆ, ಬಾಲಕಾರ್ಮಿಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ತಮ್ಮ ಯೋಜನೆಗಳ ಅರಿವು ಮೂಡಿಸಲು ವಸ್ತುಪ್ರದರ್ಶನ ಏರ್ಪಡಿಸಬೇಕು. ಜಿಲ್ಲಾ ಪಂಚಾಯಿತಿಯು ಸ್ವಚ್ಛ ಭಾರತ ಯೋಜನೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತ ವಿ.ಕುಲಕರ್ಣಿ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಜಿಲ್ಲಾ ಭಾವೈಕ್ಯತಾ ಸಮಿತಿ ಅಧ್ಯಕ್ಷ ಬಾಬು ದೋಖಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.