ADVERTISEMENT

ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಾಜರಾಗಿ

ಅಖಿಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಈಶಾನ್ಯ ವಲಯ ಮನವಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 12:07 IST
Last Updated 15 ಏಪ್ರಿಲ್ 2021, 12:07 IST
ಚಂದ್ರಕಾಂತ ಗದ್ದಗಿ
ಚಂದ್ರಕಾಂತ ಗದ್ದಗಿ   

ಕಲಬುರ್ಗಿ: ಸಚಿವ ಲಕ್ಷ್ಮಣ ಸವದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಒಪ್ಪಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ನೌಕರರು ಮುಷ್ಕರ ನಿಲ್ಲಿಸಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಅಖಿಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಈಶಾನ್ಯ ವಲಯದ ಅಧ್ಯಕ್ಷ ಚಂದ್ರಕಾಂತ ಗದ್ದಗಿ ಮನವಿ ಮಾಡಿದರು.

‘ಸದ್ಯ ಚುನಾವಣೆ ನೀತಿಸಂಹಿತೆ ಜಾರಿಯಿರುವ ಕಾರಣಕ್ಕೆ ಮೇ 4ರ ನಂತರ ಸಾರಿಗೆ ನೌಕರರ ವೇತನ ಪರಿಷ್ಕರಣೆ ನಡೆಸಲಾಗುವುದು ಎಂದು ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ. ಈಗಾಗಲೇ ಮುಷ್ಕರದಿಂದಾಗಿ ಸಾರಿಗೆ ಇಲಾಖೆಗೆ, ನೌಕರರ ಕುಟುಂಬಗಳಿಗೆ ಅಪಾರ ನಷ್ಟ ಉಂಟಾಗಿದೆ. ಸಾರ್ವಜನಿಕರೂ ಮುಷ್ಕರದಿಂದ ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ನೌಕರರು ಮುಷ್ಕರ ಕೈಬಿಟ್ಟು ವೃತ್ತಿಬದ್ಧತೆ ತೋರಬೇಕು’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.

‘ಲಾಕ್‌ಡೌನ್‌ ವೇಳೆ ಮೂರು ತಿಂಗಳು ಕೆಲಸವಿಲ್ಲದಿದ್ದರೂ ನೌಕರರಿಗೆ ಸಾರಿಗೆ ಇಲಾಖೆ ಸಂಬಳ ನೀಡಿದೆ. ‘6ನೇ ವೇತನ ಆಯೋಗದ ಸಂಬಳ’ ಎಂಬ ಸುಳ್ಳು ಭರವಸೆಯನ್ನು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೀಡಿದ್ದಾರೆ. ಅವರಿಗೆ ಸಾರಿಗೆ ನೌಕರರ ಸಮಸ್ಯೆ ಬಗ್ಗೆ, ಸಂಬಳದ ಬಗ್ಗೆ, ಸೌಲಭ್ಯಗಳ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲ. ಸಾರಿಗೆ ನೌಕರರ ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ’ ಎಂದು ಅವರು ಆರೋಪಿಸಿದರು.

ADVERTISEMENT

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಂಗಮನಾಥ ರಬಶೆಟ್ಟಿ ಮಾತನಾಡಿ, ‘ಶೇ 12 ಕ್ಕಿಂತ ಹೆಚ್ಚು ವೇತನ ಪರಿಷ್ಕರಣೆಗೆ ಸಾರಿಗೆ ಸಚಿವರು ಒಪ್ಪಿದ್ದಾರೆ. ವರ್ಗಾವಣೆ ರದ್ದು ಮಾಡುವ ಬಗ್ಗೆಯೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಾರಿಗೆ ಇಲಾಖೆಯ ಖಾಸಗೀಕರಣ ತಡೆಯಲು ನೌಕರರು ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಮನವಿ ಮಾಡಿದರು.

ಅಖಿಲ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ ಈಶಾನ್ಯ ವಲಯದ ಕಾರ್ಯಾಧ್ಯಕ್ಷ ಎಸ್‌.ಎಸ್‌.ಸಜ್ಜನ್, ಮುಖ್ಯ ಉಪಾಧ್ಯಕ್ಷ ಭೀಮರಾಯ ಯರಗೋಳ, ಪ್ರಧಾನ ಕಾರ್ಯದರ್ಶಿ ಬಸವರಾಜ ಕಣ್ಣಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.