ಯಾದಗಿರಿ: ಜಿಲ್ಲೆಯಲ್ಲಿ ಡಿಸೆಂಬರ್ 1ರಿಂದ ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, ಕಳೆದ 10 ದಿನಗಳಿಂದ ಜಾಗೃತಿ ಮೂಡಿಸುತ್ತಿದ್ದರೂ ಸವಾರರಿಂದ ಸ್ಪಂದನೆ ಸಿಗುತ್ತಿಲ್ಲ ಎನ್ನುತ್ತವೆ ಪೊಲೀಸ್ ಮೂಲಗಳು. ಸುಪ್ರೀಂ ಕೋರ್ಟ್ ಸೂಚನೆಯಂತೆ ಜಿಲ್ಲೆಯಲ್ಲಿ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಅನಿವಾರ್ಯವಾಗಿದೆ.
ಜಿಲ್ಲೆಯಲ್ಲಿ ಇತ್ತಿಚಿನ ವರ್ಷಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹೆಲ್ಮೆಟ್ ಧರಿಸದೇ ಜೀವ ಕಳೆದುಕೊಂಡಿರುವವರ ಚಿತ್ರಗಳನ್ನು ತೋರಿಸಿ ನೀವೂ ಹೆಲ್ಮೆಟ್ ಧರಿಸಿ ಎಂದು ಜಾಗೃತಿ ಜೊತೆಗೆ ಸಲಹೆ ನೀಡುತ್ತಿದ್ದಾರೆ. ಪತ್ನಿ, ಮಕ್ಕಳು ನಿಮ್ಮನ್ನು ಎದುರು ನೋಡುತ್ತಿರುತ್ತಾರೆ. ನಿಮಗೆ ರಸ್ತೆಯಲ್ಲಿ ಅಪಘಾತವಾದರೆ ಮೊದಲು ತಲೆಗೆ ಪೆಟ್ಟು ಬೀಳುತ್ತದೆ. ಇದರಿಂದ ಅನೇಕರು ಸ್ಥಳದಲ್ಲೇ ಸಾವನ್ನಪ್ಪುತ್ತಿದ್ದಾರೆ ಎನ್ನುವ ಇತ್ಯಾದಿ ಮಾಹಿತಿಯನ್ನು ನೀಡುತ್ತಿದ್ದಾರೆ.
ಸಾಮಾಜಿಕ ಜಾಲ ತಾಣ ಬಳಕೆ:
ಬೈಕ್ ಸವಾರರು ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ವಾಟ್ಸ್ ಆ್ಯಪ್, ಫೇಸ್‌ಬುಕ್, ಯೂಟ್ಯೂಬ್, ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಿಂದೆ ಅಪಘಾತ ಪ್ರಕರಣಗಳು ಸಂಭವಿಸಿರುವ ಚಿತ್ರಗಳು, ವಿಡಿಯೊ ಹರಿಬಿಟ್ಟು ಜಾಗೃತಿ ಮೂಡಿಸುತ್ತಿದ್ದಾರೆ. ಅಲ್ಲದೇ ವಾಟ್ಸ್ ಆ್ಯಪ್ ಸ್ಟೆಟಸ್ ಇಟ್ಟು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಎನ್ನುವುದು ಜಾರಿ ಬಂದಿದ್ದರಿಂದ ವ್ಯಾಪಾರಿಗಳು ಹೆಲ್ಮೆಟ್ ಮಾರಾಟ ಮಾಡುವುದು ರಸ್ತೆಯ ಇಕ್ಕೆಲಗಳಲ್ಲಿ ಕಂಡು ಬರುತ್ತಿದೆ. ಜಿಲ್ಲಾ ಕೇಂದ್ರದ ಯಾದಗಿರಿ–ಶಹಾಪುರ, ಯಾದಗಿರಿ–ಕಲಬುರಗಿ, ಯಾದಗಿರಿ–ರಾಯಚೂರು ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಹೆಲ್ಮೆಟ್ ಮಾರಾಟ ಜೋರಾಗಿದೆ. ಟಂಟಂ ಅಥವಾ ಗೂಡ್ಸ್ ವಾಹನಗಳಲ್ಲಿ ಹೆಲ್ಮೆಟ್ ತುಂಬಿಕೊಂಡು ಬಂದು ಮಾರಾಟ ಮಾಡುವುದು ಅಲ್ಲಲ್ಲಿ ಕಂಡು ಬರುತ್ತಿದೆ.
ಹೆಲ್ಮೆಟ್ ಐಎಸ್‌ಐ ಮಾರ್ಕ್ ಇರುವಂತೆ ನೋಡಿಕೊಳ್ಳುವುದು ಸಾರ್ವಜನಿಕರ ಜಾವಾಬ್ದಾರಿಯಾಗಿದೆ. ಕೆಲವು ಕಡೆ ಹೆಲ್ಮೆಟ್ ಧರಿಸಿರುವವರಿಗೆ ಪೊಲೀಸರು ಹೂ ಕೊಟ್ಟು ಪ್ರೋತ್ಸಾಹಿಸುವುದು ಕಂಡು ಬರುತ್ತಿದೆ.
ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳ ಪೂರ್ತಿ ಬೈಕ್ ಸವಾರರು ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವ ಜಾಗೃತಿ ಮೂಡಲಾಗುವುದು. ಜನವರಿಯಿಂದ ದಂಡ ವಿಧಿಸಲಾಗುವುದುಪೃಥ್ವಿಕ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಹೆಲ್ಮೆಟ್ ಧರಿಸುವ ಬಗ್ಗೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಹೆಲ್ಮೆಟ್ ಧರಿಸಿದರೆ ಮುಂದಾಗುವ ಅನಾಹುತ ತಡೆಗಟ್ಟಬಹುದುವಿರೇಶ್ ಪಿಎಸ್‌ಐ ಸಂಚಾರ ಪೊಲೀಸ್ ಠಾಣೆ ಯಾದಗಿರಿ
ಬೈಕ್ ಸವಾರರು ಯಾವಾಗಲೂ ಹೆಲ್ಮೆಟ್ ಧರಿಸಿ ಜೊತೆಗೆ ಹೆಲ್ಮೆಟ್ ಬೆಲ್ಟ್ ಕಟ್ಟಿಕೊಳ್ಳಿ ಎಂದು ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವತಿಯಿಂದ ಜಾಗೃತಿ ಮೂಡಿಸಲಾಗುತ್ತದೆ. 2022 ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದ್ದರಿಂದ ಶೇ 25ರಷ್ಟು ಮರಣ ಪ್ರಮಾಣ ಉಂಟಾಗಿದೆ. ಅದೇ ರೀತಿಯಾಗಿ ಅದೇ ವರ್ಷದಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ರಸ್ತೆ ಅಪಘಾತಗಳಲ್ಲಿ 2293 ಜನ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. 2021 ಕ್ಕೆ ಹೋಲಿಸಿದರೆ 2022 ರಲ್ಲಿ ಹೆಲ್ಮೆಟ್ ಧರಿಸದೆ ರಸ್ತೆ ಅಪಘಾತಗಳಲ್ಲಿ ಉಂಟಾದ ಮರಣ ಪ್ರಮಾಣ ಶೇ 10ರಷ್ಟು ಹೆಚ್ಚಾಗಿದೆ.
ಹೆಲ್ಮೆಟ್ ಧರಿಸಿದಾಗ ಕೆಲವರು ಬೆಲ್ಟ್ ಕಟ್ಟಿಕೊಳ್ಳದೇ ಇರುವುದು ಕಂಡು ಬರುತ್ತದೆ. ಹೀಗಾಗಿ ಇಡೀ ಮುಖವನ್ನು ಮುಚ್ಚುವ ಅಥವಾ ಅರ್ಧ ಮುಖವನ್ನು ಮುಚ್ಚುವ ಹೆಲ್ಮೆಟ್ ಧರಿಸಿ. ಆದರೆ ಬೆಲ್ಟ್ ಅನ್ನು ಕಟ್ಟಿಕೊಂಡರೆ ಮಾತ್ರ ಹೆಲ್ಮೆಟ್ ಅನ್ನು ಸರಿಯಾಗಿ ಧರಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ ಎನ್ನುವುದು ರಸ್ತೆ ಸುರಕ್ಷತೆ ಪ್ರಾಧಿಕಾರದ ಮಾಹಿತಿಯಾಗಿದೆ. ಮೋಟಾರ್ ವಾಹನಗಳ 1988ರ ಸೆಕ್ಷನ್ 129 ಪ್ರಕಾರ ಹೆಲ್ಮೆಟ್‌ಗಳ ಬೆಲ್ಟ್ ಕಟ್ಟಿಕೊಳ್ಳುವುದು ಕಡ್ಡಾಯ. ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸದೆ ಇರುವುದು ಮೋಟಾರ್ ವಾಹನಗಳ ಕಾಯ್ದೆ 1988ರ ಸೆಕ್ಷನ್ 194 ಡಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ.
Cut-off box - ಈ ತಿಂಗಳ ನಂತರ ದಂಡ ಜಿಲ್ಲೆಯಲ್ಲಿ ಡಿ.1ರಿಂದ ಹೆಲ್ಮೆಟ್ ಕಡ್ಡಾಯ ಮಾಡಿದ್ದರೂ ದಂಡ ಪ್ರಯೋಗ ಮಾಡಿಲ್ಲ. ಮೊದಲ ದಿನ ಕೆಲವು ಕಡೆ ಪೊಲೀಸರು ದಂಡ ಪ್ರಯೋಗ ಮಾಡಿದ್ದರು. ಏಕಾಏಕಿ ದಂಡ ವಿಧಿಸುವುದನ್ನು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನೂ ಕೆಲವು ಕಡೆ ಪೊಲೀಸರು ದಂಡದ ಹಣ ಹೆಲ್ಮೆಟ್ ಖರೀಸುವಂತೆ ಎಚ್ಚರಿಕೆ ನೀಡುತ್ತಿದ್ದರು. ಇದನ್ನು ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಮೊದಲು ಜಾಗೃತಿ ಮೂಡಿಸಿ ಎಂದು ತಿಳಿಸಿದ್ದರಿಂದ ದಂಡ ಹಾಕುವುದನ್ನು ಬಿಟ್ಟು ಜಾಗೃತಿ ಮೂಡಿಸಿದ್ದರು. ಆದರೆ ಜನತೆ ದಂಡ ಹಾಕದ ಕಾರಣ ಹೆಲ್ಮೆಟ್ ಧರಿಸುವುದು ಮಾಡುತ್ತಿಲ್ಲ. ಹೀಗಾಗಿ ದಂಡ ವಿಧಿಸಿದರೆ ಎತ್ತೆಚ್ಚುಕೊಳ್ಳುತ್ತಾರೆ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿಯಾಗಿದೆ.
ವಿಟಿಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಡಿ.16ರಂದು ಯಾದಗಿರಿಯಲ್ಲಿ 1001 ಹೆಲ್ಮೆಟ್ ಉಚಿತ ವಿತರಣೆ ಹಮ್ಮಿಕೊಳ್ಳಲಾಗಿದೆ. ಆ ನಂತರ ಹೆಲ್ಮೆಟ್ ಧರಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎನ್ನುವುದು ಪೊಲೀಸ್ ಇಲಾಖೆಯ ಮಾಹಿತಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.