ಶಹಾಪುರ: 2025-26ನೇ ಸಾಲಿನ ಶಹಾಪುರ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ತಾಲ್ಲೂಕಿನ ರಸ್ತಾಪುರ ಗ್ರಾಮ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಣ ಇಲಾಖೆಯ ಕಲಬುರಗಿ ಅಪರ ಆಯುಕ್ತ ನಿರ್ದೇಶಕರಾದ ಮಮತಾ ನಾಯಕ ಅವರು ಮಕ್ಕಳಿಗೆ ಹೂ ಮಳೆ ಎಸೆಯುವುದರ ಮೂಲಕ ಸ್ವಾಗತಿಸಿದರು.
ತಾಲ್ಲೂಕು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಶಾಂತಗೌಡ ಪಾಟೀಲ ಅವರು ಮಕ್ಕಳಿಗೆ ಪಠ್ಯಪುಸ್ತಕವನ್ನು ವಿತರಿಸಿದರು. ಬಿಇಒ ವೈ.ಎಸ್ .ಹರಗಿ ಹಾಗೂ ಸುಧಾರಣಾ ಸಮಿತಿ ಸದಸ್ಯರಾದ ಸಿದ್ದಣ್ಣ ಮಾನಸೂಣಗಿ, ಬಸಮ್ಮ ರಾಂಪುರೆ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ಶಿಷ್ಟಾಚಾರ ಪಾಲಿಸಿ ಅಧಿಕಾರಿಗಳೇ: ಶಿಕ್ಷಣ ಇಲಾಖೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ದರ್ಶನಾಪುರ ಅವರನ್ನು ವೇದಿಕೆ ಮೇಲೆ ಆಹ್ವಾನಿಸುತ್ತಿರುವುದು ಯಾಕೆ?, ಇದು ಸರ್ಕಾರದ ಕಾರ್ಯಕ್ರಮವಾಗಿರುವಾಗ ಶಿಕ್ಷಣ ಇಲಾಖೆಯ ಯಾವುದೇ ಅಧಿಕಾರಿ ಆಗಿಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಇಂತಹ ನಡೆ ನಿಲ್ಲಿಸಿ. ಇದು ಶಿಷ್ಘಾಚಾರ ಉಲ್ಲಂಘನೆಯಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಪ್ಪ ಆನೇಗುಂದಿ ಆರೋಪಿಸಿದ್ದಾರೆ.
ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ಅವರು, ಶಾಲಾ ಸುಧಾರಣಾ ಸಮಿತಿಯ ಮುಖ್ಯ ಉದ್ದೇಶ ಶೈಕ್ಷಣಿಕವಾಗಿ ಉನ್ನತಿ ಸಾಧಿಸುವುದು ಹಾಗೂ ಶಿಕ್ಷಣ ಇಲಾಖೆಗೆ ಸೂಕ್ತ ಸಲಹೆ ಸೂಚನೆ ನೀಡುವುದು ಆಗಿದೆ. ಅದೆಲ್ಲವನ್ನು ಬಿಟ್ಟು ರಾಜಕೀಯ ಮುಖಂಡರನ್ನು ವೇದಿಕೆಗೆ ಆಹ್ವಾನಿಸಿರುವುದು ಅಕ್ಷ್ಯಮ ಅಪರಾಧವಾಗಿದೆ. ಇದರ ಬಗ್ಗೆ ಕಲಬುರಗಿ ಆಪರ ಆಯುಕ್ತರು ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದು ಸರ್ಕಾರಿ ಕಾರ್ಯಕ್ರಮ ನಿಜ. ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಬಿಇಒ ವೈ.ಎಸ್. ಹರಗಿ ಚುಟುಕಾಗಿ ಹಾರಿಕೆ ಉತ್ತರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.