
ಸೈದಾಪುರ: ಪಟ್ಟಣದ ಜನ ಮಕರ ಸಂಕ್ರಾಂತಿ ಹಬ್ಬದ ಆಚರಣೆಗಾಗಿ ಮಂಗಳವಾರ ಎಳ್ಳುಬೆಲ್ಲ, ತರಕಾರಿ, ಪೂಜಾ ಸಾಮಗ್ರಿ, ಹೂವು-ಹಣ್ಣುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿದರು.
ಬಸವೇಶ್ವರ ವೃತ್ತದಿಂದ ರೈಲು ನಿಲ್ದಾಣ ಸಮೀಪದವರೆಗೆ, ಕನಕ ವೃತ್ತದಿಂದ ಬಸ್ ನಿಲ್ದಾಣದವರೆಗೆ ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ರಸ್ತೆಯ ಇಕ್ಕೆಲಗಳಲ್ಲಿ ತರಕಾರಿ ವ್ಯಾಪಾರಿಗಳು ಕುಳಿತುಕೊಂಡಿರುವುದು ಸಾಮಾನ್ಯವಾಗಿತ್ತು.
ಗ್ರಾಮೀಣ ಭಾಗದಿಂದ ರೈತರು ಸಂಕ್ರಾಂತಿ ಸಂದರ್ಭದಲ್ಲಿ ಬರುವ ಬಗೆಬಗೆಯ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಿರುವುದು ಕಂಡುಬಂದಿತು. ಇದರಿಂದ ಕೆಲ ಕಾಲ ಪ್ರಮುಖ ಬೀದಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ರಸ್ತೆ ಸಂಚಾರಕ್ಕೆ ಅಡೆತಡೆಯುಂಟಾಯಿತು. ಬಟ್ಟೆ, ಕಿರಾಣಿ ಅಂಗಡಿಗಳಲ್ಲಿ ಜನದಟ್ಟಣೆ ಹೆಚ್ಚಾಗಿತ್ತು.
ತರಕಾರಿ ಬೆಲೆಯಲ್ಲಿ ಇಳಿಕೆ: ಟೊಮೊಟೊ, ಗೋಬಿ, ಈರುಳ್ಳಿ ₹20 ಕೆ.ಜಿಯಂತೆ ಮಾರಾಟವಾದವು. ಬದನೆಕಾಯಿ ₹40 ಕೆ.ಜಿ, ಹಿರೇಕಾಯಿ, ಮೆಣಸಿನ ಕಾಯಿ, ಸೌತೆಕಾಯಿ, ಕ್ಯಾರೆಟ್, ಬಟಾಣಿ, ಹಾಗಲಕಾಯಿ, ಅವರೆಕಾಯಿ ₹60 ಕೆ.ಜಿ, ಚವಳೆಕಾಯಿ ₹ 80 ಕೆ.ಜಿ, ಕುಂಬಳಕಾಯಿ ಒಂದಕ್ಕೆ ₹30, ಮೆಂತೆ, ಪಾಲಕ, ಕೊತ್ತಂಬರಿ, ಪುಂಡಿಪಲ್ಲೆ, ಈರುಳ್ಳಿ ತಪ್ಪಲ ₹10ನಂತೆ ಕಟ್ಟು ಮಾರಾಟವಾದವು.
‘ಮಾರುಕಟ್ಟೆಗೆ ಬಳಿಚಕ್ರ, ಕಿಲ್ಲನಕೇರಾ, ಕೂಡ್ಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ರೈತರು ತರಕಾರಿಗಳನ್ನು ಮಾರಾಟ ಮಾಡಲು ತಂದಿದ್ದರು. ಆದರೆ, ದಿನನಿತ್ಯಕ್ಕಿಂತ ಬೆಲೆಯಲ್ಲಿ ಭಾರಿ ಇಳಿಕೆಯಿಂದ ವ್ಯಾಪಾರಸ್ಥರಿಗೆ ಹಬ್ಬ ಲಾಭ ತರಲಿಲ್ಲ’ ಎಂದು ತರಕಾರಿ ವ್ಯಾಪಾರಿ ಮಲ್ಲು ಕೂಡ್ಲೂರು ಬೇಸರ ವ್ಯಕ್ತಪಡಿಸಿದರು.
ಕುಂದಿದ ಹಣ್ಣಿನ ವ್ಯಾಪಾರ: ‘ಬಾಳೆಹಣ್ಣು ಡಜನ್‌ಗೆ ₹40ರಿಂದ ₹50, ಸಪೋಟಾ ₹60ರಿಂದ ₹80 ಕೆ.ಜಿ, ದ್ರಾಕ್ಷಿ ₹150 ಕೆ.ಜಿ, ದಾಳಿಂಬೆ ₹200 ಕೆ.ಜಿ, ಸೇಬು ನಾಲ್ಕಕ್ಕೆ ₹100, ಖರ್ಜೂರ ₹150 ಕೆ.ಜಿ, ಬಾರೆಹಣ್ಣು ₹80 ರಿಂದ ₹100 ಕೆ.ಜಿ. ಕಳೆದ ವರ್ಷಕ್ಕಿಂತ ಈ ವರ್ಷ ವ್ಯಾಪಾರದಲ್ಲಿ ಲಾಭ ಇಲ್ಲ. ಗ್ರಾಹಕರು ಇಲ್ಲದಂತಾಗಿದೆ. ಕಾರಣ ಕೆಲವು ವ್ಯಾಪಾರಸ್ಥರು ಹಳ್ಳಿಗಳಲ್ಲಿನ ಮನೆಬಾಗಿಲಿಗೆ ತರಕಾರಿ-ಹಣ್ಣುಗಳನ್ನು ಸಣ್ಣ ವಾಹನಗಳಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆ ಹಾಗೂ ವ್ಯಾಪಾರ ಕಡಿಮೆಯಾಗಿದೆ’ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಹಣಮಂತರಾಯ ನಾಯಕ.
ಹೂವಿನ ವ್ಯಾಪಾರ ಭರ್ಜರಿ: ‘ಕನಕಾಂಬರ, ಮಲ್ಲಿಗೆ, ಸೇವಂತಿಗೆ ₹20 ಮೊಳ, ಗುಲಾಬಿ ₹130 ಕೆ.ಜಿ, ಚೆಂಡು ಹೂವು ಕೆ.ಜಿಗೆ ₹50 ಯಂತೆ ಮಾರಾಟವಾದವು. ಈ ವರ್ಷ ಹೂವಿನ ವ್ಯಾಪಾರ ಚೆನ್ನಾಗಿದೆ. ಅಧಿಕ ಲಾಭವಾಗಿರುವುದು ಸಂತಸವಾಗಿದೆ’ ಎಂದು ಹೂವಿನ ವ್ಯಾಪಾರಿ ಶಿವುಕುಮಾರ ಮುನಗಾಲ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.