ADVERTISEMENT

ವಿಜ್ಞಾನದಲ್ಲಿ ಸೃಜನಶೀಲತೆ ಅಗತ್ಯ: ಜಿಲ್ಲಾಧಿಕಾರಿ ಕೂರ್ಮಾರಾವ್

ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 13:46 IST
Last Updated 21 ಡಿಸೆಂಬರ್ 2018, 13:46 IST
ಮೇಳದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳನ್ನು ಜಿಲ್ಲಾಧಿಕಾರಿ ಕೂರ್ಮಾರಾವ್‌ ವೀಕ್ಷಿಸಿದರು
ಮೇಳದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳನ್ನು ಜಿಲ್ಲಾಧಿಕಾರಿ ಕೂರ್ಮಾರಾವ್‌ ವೀಕ್ಷಿಸಿದರು   

ಸುರಪುರ: ‘ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಸೃಜನಶೀಲತೆ ಮತ್ತು ನಾವೀನ್ಯತೆಯ ಉತ್ಸಾಹ ತುಂಬುವ ಅಗತ್ಯವಿದೆ. ಈ ಕೆಲಸವನ್ನು ಶಿಕ್ಷಕರು ಅತ್ಯಂತ ಪ್ರಾಮಾಣಿಕವಾಗಿ ಮಾಡಬೇಕು. ಇದು ದೇಶ ಅಭಿವೃದ್ಧಿ ಪಥದತ್ತ ಸಾಗಲು ನೆರವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅಭಿಪ್ರಾಯಪಟ್ಟರು.

ನಗರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎರಡು ದಿನಗಳ 2018-19ನೇ ಸಾಲಿನ ಜಿಲ್ಲಾ ಮಟ್ಟದ ಇನ್‍ಸ್ಪೈರ್ ಅವಾರ್ಡ್ (ಮಾನಕ್) ವಿಜ್ಞಾನ ಮೇಳಉದ್ಘಾಟಿಸಿ ಅವರು ಮಾತನಾಡಿದರು.

‘ಇಂತಹ ವಿಜ್ಞಾನ ಪ್ರದರ್ಶನದ ಮೂಲಕ 6 ರಿಂದ 10ನೇ ತರಗತಿ ಮಕ್ಕಳು ತಮ್ಮ ಸ್ವಂತ ವಿಚಾರದ ನೆಲೆಗಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಸ್ಪರ್ಧಾತ್ಮಕತೆಗೆ ಮಾತ್ರ ಈ ಪ್ರದರ್ಶನ ಸೀಮಿತವಾಗಿಲ್ಲ. ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ತಂತ್ರಜ್ಞಾನ ಮತ್ತು ಕೈಗಾರಿಕೆಗಳ ಅಭಿವೃದ್ಧಿಹಾಗೂ ಬೆಳವಣಿಗೆಯ ಉದ್ದೇಶ ಇದರ ಹಿಂದೆ ಅಡಗಿದೆ. ಮಗುವಿನಿಂದ ಮಗುವಿಗೆ ಪ್ರತಿಭೆಯಲ್ಲಿ ವ್ಯತ್ಯಾಸ ಇರಬಹುದು. ಪ್ರತಿ ಮಗುವಿನಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಕ್ಕಳ ಪ್ರತಿಭೆಯನ್ನು ಆಕರ್ಷಿಸಿ ಅವರನ್ನು ಪ್ರೋತ್ಸಾಹಿಸುವುದು ಈ ಮೇಳದ ಉದ್ದೇಶವಾಗಿದೆ’ ಎಂದರು.

‘ವಿಶ್ವದಲ್ಲಿ ಭಾರತ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹಿಂದಿದೆ. ವಿಶ್ವದ ಇತರೆ ರಾಷ್ಟ್ರಗಳಂತೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತವನ್ನು ನಂಬರ್ ಒನ್ ಸ್ಥಾನಕ್ಕೆ ತಲುಪಿಸಲು ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಮೂಡಿಸಬೇಕಾಗಿದೆ’ ಎಂದರು.

‘ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಈ ಮೇಳ ನಡೆಯುತ್ತಿದೆ. ಮಕ್ಕಳ ಆಸಕ್ತಿ ಗುರುತಿಸಿ ಪ್ರಾಜೆಕ್ಟ ನಿರ್ಮಾಣ ಕುರಿತು ಆಯಾ ಶಾಲೆಯ ಮುಖ್ಯಸ್ಥರು ಜುಲೈ 31ರ ಒಳಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಸ್ಪರ್ಧೆಗೆ ಆಯ್ಕೆಗೊಂಡ ಪ್ರತಿ ಪ್ರಾಜೆಕ್ಟಗೆ ₹10 ಸಾವಿರವನ್ನು ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ಮಾತನಾಡಿ, ‘ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿಗಳು ಈಗಿನಿಂದಲೆ ವಿಜ್ಞಾನ ತಂತ್ರಜ್ಞಾನದಲ್ಲಿ ಆಸಕ್ತಿ ಬೆಳಸಿಕೊಳ್ಳಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಲು ಶಿಕ್ಷಕರು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಬಿರಾದಾರ ಮಾತನಾಡಿ, ‘ಇನ್‍ಸ್ಪೈರ್ ಅವಾರ್ಡ್ ಮೇಳಕ್ಕೆ ರಾಜ್ಯದಲ್ಲಿ ಆಯ್ಕೆಯಾಗಿರುವ ಒಟ್ಟು 7753 ವಿದ್ಯಾರ್ಥಿಗಳಲ್ಲಿ ಯಾದಗಿರಿ ಜಿಲ್ಲೆಯ 196 ವಿದ್ಯಾರ್ಥಿಗಳು ಇದ್ದಾರೆ ಎನ್ನುವುದು ನಮ್ಮ ಹೆಗ್ಗಳಿಕೆಯಾಗಿದೆ’ ಎಂದರು.

ಬೀದರ್‌, ಕಲಬುರ್ಗಿ, ಯಾದಗಿರಿ ಸೇರಿದಂತೆ 3 ಜಿಲ್ಲೆಗಳ 800 ವಿದ್ಯಾರ್ಥಿಗಳು 396 ವಿಷಯಗಳ ಪ್ರಾಜೆಕ್ಟ್‍ಗಳ ಪ್ರದರ್ಶನ ನಡೆಸಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಅನುಸುಬಾಯಿ ಚವಾಣ, ತಹಶೀಲ್ದಾರ್ ಸುರೇಶ ಅಂಕಲಗಿ, ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎಂ. ನಾಗರಾಳ, ಬಿ.ವೈ.ಪಿ.ಸಿ ನಾಗಪ್ಪ ಪೋತಲ, ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಳ್ಳೆಪ್ಪ ಕಾಂಜಾಂಜಿ, ಡೈಯಟ್ ಉಪಾನ್ಯಾಸಕ ಪ್ರಭು ಶಿವಪ್ಪ, ವೆಂಕೋಬ ಇದ್ದರು.

ಎಂ .ಶೇಖಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಒಲೇಕಾರ ಸ್ವಾಗತಿಸಿದರು. ಶಿವುಶರಣಪ್ಪ ಸಿರೂರ ನಿರೂಪಿಸಿದರು. ಎಂ.ಎಸ್. ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.