ಶಹಾಪುರ: ‘ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿಯ ಮಸೂದೆಯನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿ ಶುಕ್ರವಾರ ಎಸ್‌ಡಿಪಿಐ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಯಿಸಿ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರಿಗೆ ಮನವಿ ಸಲ್ಲಿಸಿದರು.
‘ಸಮಾಜವನ್ನು ಒಡೆದು ಆಳುವ ಇಂಥ ಕ್ರಮದಿಂದಲೇ ಬಿಜೆಪಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಂದ ತಿರಸ್ಕಾರಕ್ಕೆ ಒಳಗಾಗಿದೆ. ಆದರೆ ಮತ್ತೆ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದೆ. ಅಲ್ಪಸಂಖ್ಯಾತರನ್ನು ಹತ್ತಿಕ್ಕಲು ಪ್ರಯತ್ನ ಸಾಗಿಸುತ್ತಲೇ ಇದೆ. ಇದೀಗ ಮಸ್ಲಿಮರ ಅಭಿವೃದ್ಧಿ ನೆಪವೊಡ್ಡಿ ವಕ್ಫ್ ಆಸ್ತಿಯ ಮೇಲೆ ಕಣ್ಣಿಟ್ಟಿದೆ. ಮುಸ್ಲಿಮರ ಸಬಲೀಕರಣಕ್ಕೆ ಮೀಸಲಿರುವ ವಕ್ಫ್ ಸೊತ್ತನ್ನು ಕಬಳಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸಂವಿಧಾನದ ಮೂಲ ಆಶಯಕ್ಕೆ ಇದು ದೊಡ್ಡ ಧಕ್ಕೆಯಾಗಿದೆ. ನ್ಯಾಯಾಂಗದ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿಯಾಗಿದೆ. ವಕ್ಫ್ ಆಸ್ತಿಯ ಉಳಿವಿಗಾಗಿ ಎಲ್ಲಾ ರೀತಿಯ ತ್ಯಾಗ ಹಾಗೂ ಹೋರಾಟಕ್ಕೂ ಸಿದ್ಧರಿದ್ದೇವೆ’ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಜ್ ಕಡಂಬು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಖಜಾಂಜಿ ಸೈಯದ್ ಇಸಾಕ್ ಹುಸೇನ ಖಾಲೀದ್ ಹಾಗೂ ಪಕ್ಷದ ಮುಖಂಡರಾದ ಎಕ್ಬಾಲ್ ಜಾನಿ, ಸೈಯದ್ದುದ್ದಿನ ಖಾದ್ರಿ, ಮುಸ್ತಾಫ್ ದರ್ಬಾನ, ಯೂಸೂಫ್ ಸಿದ್ದಿಕಿ, ಅಬ್ದುಲ್ ಖದೀರ ಅತ್ತಾರಿ, ಲಾಲ್ ಅಹ್ಮದ್ ಖುರೇಶಿ, ಚಿನ್ನುಮೀಯ, ಅಲ್ಲಾ ಪಟೇಲ ಮಕ್ತಾಪುರ, ಚಾಂದ್ ಪಟೇಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.