ADVERTISEMENT

ಹಿರಿಯ ಸಾಹಿತಿ ಕೃಷ್ಣ ಸುರಪುರ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 15:29 IST
Last Updated 12 ಜುಲೈ 2020, 15:29 IST
ಎ.ಕೃಷ್ಣ ಸುರಪುರ
ಎ.ಕೃಷ್ಣ ಸುರಪುರ   

ಸುರಪುರ: ಸಗರನಾಡಿನ ಹಿರಿಯ ಸಾಹಿತಿ, ಹೆಮ್ಮೆಯ ಕವಿ ಎ.ಕೃಷ್ಣ ಸುರಪುರ (80) ಅನಾರೋಗ್ಯದಿಂದ ಭಾನುವಾರ ಇಲ್ಲಿ ನಿಧನರಾದರು.

ಅವರಿಗೆ ಪತ್ನಿ, ಪುತ್ರಿ, ಮೂವರು ಪುತ್ರರು ಇದ್ದಾರೆ. ಎದೆಗಡಲ ಮುತ್ತುಗಳು, ಕರುಣ ಕಿರೀಟ, ಗೀತಾಂಜಲಿ, ಮಂತ್ರರಾಜ ಗಾಯತ್ರಿ, ಶ್ರೀಮಚ್ಚಂದ್ರಲಾಂಬ, ಅಣು ಪುರಾಣ ಸೇರಿದಂತೆ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಯಾದಗಿರಿ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.

ಉದಯೋನ್ಮುಖ ಬರಹಗಾರರ ಪ್ರತಿಭೆ ಗುರುತಿಸಿ, ಅವರಿಗೆ ನೆರವಾಗಿ ಎಲ್ಲ ಹಂತಗಳಲ್ಲಿ ಬೆಂಬಲವಾಗಿ ನಿಂತು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸರಳ, ಸಜ್ಜನಿಕೆಯ, ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿದ್ದ ಕೃಷ್ಣ ಅವರು ವೃತ್ತಿಯಿಂದ ಶಿಕ್ಷಕರಾಗಿದ್ದರು. ಚಂಪೂ ಕಾವ್ಯ ಶೈಲಿಯಿಂದ ಹಿಡಿದು ನವ್ಯ ಶೈಲಿಯ ರಚನೆಗಳವರೆಗೆ ಇವರ ಕಾವ್ಯದ ವಿಸ್ತಾರ ಹರಡಿಕೊಂಡಿದೆ. ಅಂತ್ಯಕ್ರಿಯೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಸುರಪುರದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.