ADVERTISEMENT

ಶಹಾಪುರ ನಗರಸಭೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ?

ಭೀಮಭಾಯಿ ಗೋನಾಲಗೆ ಮತ್ತೆ ಉಪಾಧ್ಯಕ್ಷ ಸ್ಥಾನದ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 6:37 IST
Last Updated 29 ಆಗಸ್ಟ್ 2024, 6:37 IST

ಶಹಾಪುರ: ನಗರಸಭೆ ಪ್ರಸಕ್ತ ಬಾರಿಯ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಮಹಿಳೆ(ಬಿಸಿಎ ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ(ಎಸ್.ಟಿ)ಕ್ಕೆ ಮೀಸಲಾಗಿದ್ದು, ಈ ಸ್ಥಾನಗಳು ಕಾಂಗ್ರೆಸ್‌ ಪಕ್ಷದ ಪಾಲಾಗುವ ನಿರೀಕ್ಷೆ ಇದೆ.

ನಗರಸಭೆಯ ಒಟ್ಟು ಸದಸ್ಯರ ಸಂಖ್ಯೆ 31 ಇದ್ದು, ಅದರಲ್ಲಿ ಕಾಂಗ್ರೆಸ್ 16, ಬಿಜೆಪಿ 12, ಎಸ್‌ಡಿಪಿಐ 2 ಹಾಗೂ ಒಬ್ಬರು ಸ್ವತಂತ್ರ ಅಭ್ಯರ್ಥಿ ಇದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆ ಈಗಾಗಲೇ ಎಸ್‌ಡಿಪಿಐ ಇಬ್ಬರು ಹಾಗೂ ಸ್ವತಂತ್ರ ಅಭ್ಯರ್ಥಿ ಕೈಜೋಡಿಸಿದ್ದು, ಕಾಂಗ್ರೆಸ್ಸಿನ ಸದಸ್ಯರು ಅಧ್ಯಕ್ಷರಾಗುವುದು ಬಹುತೇಕ ನಿಶ್ಚಿತವಾಗಿದೆ. ಹಲವು ವರ್ಷಗಳಿಂದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿ ಅಧಿಕಾರದ ಹಿಡಿತವಿದೆ.

ನಗರಸಭೆಯಲ್ಲಿ ಈಗಾಗಲೇ (ಬಿಸಿಎ ಮಹಿಳೆ) ಗಿರಿಜಾ ಹಣಮಂತರಾಯಗೌಡ ಹಾಗೂ ಶಹನಾಜ್ ಬೇಗಂ ಮುಸ್ತಾಫ್ ದರ್ಬಾನ್ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದಾರೆ. ಈಗ ಉಳಿದಿರುವ ಏಕೈಕ ಮಹಿಳೆ ವಾರ್ಡ್ ನಂ.9ರ ಮೈಹಿರುನ್ನೀಸಾ ಬೇಗಂ ಲಿಯಾಖತ್ ಪಾಷಾ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ADVERTISEMENT

ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ.16ರ ಭೀಮಭಾಯಿ ದೇವಿಂದ್ರಪ್ಪ ಗೋನಾಲ ಏಕೈಕ ಎಸ್‌.ಟಿ ಮಹಿಳೆ ಇದ್ದಾರೆ. ಅನಾಯಸವಾಗಿ ಉಪಾಧ್ಯಕ್ಷ ಸ್ಥಾನ ಒಲಿದು ಬರಲಿದೆ. ಕಳೆದ 20 ತಿಂಗಳು ಅವಧಿಯಲ್ಲಿ ಉಪಾಧ್ಯಕ್ಷ ಸ್ಥಾನ ಎಸ್.ಟಿ ಮಹಿಳೆಗೆ ಮೀಸಲಾಗಿತ್ತು. ಆ ಸಮಯದಲ್ಲಿಯೂ ಭೀಮಬಾಯಿ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು.

ನಗರಸಭೆಯಲ್ಲಿ ಕೆಲ ಸದಸ್ಯರು ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಒಬ್ಬ ಸದಸ್ಯರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆದರೆ ಅವರು ಇಂದಿಗೂ ಅಧಿಕೃತವಾಗಿ ಆಯಾ ಪಕ್ಷದಲ್ಲಿಯೇ ಉಳಿದುಕೊಂಡಿದ್ದಾರೆ. ಬಿಜೆಪಿ ಸದಸ್ಯರನ್ನು ಒಗ್ಗೂಡಿಸುವ ಉದ್ದೇಶದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಚಿಂತನೆ ನಡೆದಿದೆ ಎನ್ನಲಾಗುತ್ತಿದ್ದು, ಕೊನೆ ಗಳಿಗೆಯಲ್ಲಿ ಏನಾಗುವುದು ಕಾದು ನೋಡಬೇಕು.

ಅ.31ರಂದು ಚುನಾವಣೆ

ಶಹಾಪುರ ನಗರಸಭೆಯ 10ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಯ ಆಯ್ಕೆಗೆ ಅ.31ರಂದು ಚುನಾವಣೆ ನಡೆಯಲಿದೆ. ನಾಮಪತ್ರವನ್ನು ಅಂದು ಬೆಳಿಗ್ಗೆ 10ರಿಂದ 12 ಗಂಟೆಯವರೆಗೆ ಸಲ್ಲಿಸಬಹುದಾಗಿದೆ. ಚುನಾವಣೆ ನಡೆಸುವುದು ಅಗತ್ಯವೆನಿಸಿದರೆ ಅದೇ ದಿನ ನಡೆಯಲಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣೆ ಅಧಿಕಾರಿ ಡಾ.ಹಂಪಣ್ಣ ಸಜ್ಜನ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.