ADVERTISEMENT

ಶಹಾಪುರ: ಅಕ್ಕಿ ಅಕ್ರಮ ಸಾಗಣೆಗೆ ಪೊಲೀಸರ ಕುಮ್ಮಕ್ಕು; ಆರೋಪ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 16:16 IST
Last Updated 8 ಆಗಸ್ಟ್ 2021, 16:16 IST
ಶಹಾಪುರ ಠಾಣೆಯ ಮುಂದೆ ನಿಂತಿರುವ ಜೀಪ್
ಶಹಾಪುರ ಠಾಣೆಯ ಮುಂದೆ ನಿಂತಿರುವ ಜೀಪ್   

ಶಹಾಪುರ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಜೀಪನ್ನು ಶಹಾಪುರ ಠಾಣೆಗೆ ಒಪ್ಪಿಸಿದಾಗ ಸರಿಯಾದ ವಿಚಾರಣೆ ಹಾಗೂ ತನಿಖೆ ಮಾಡದೆ ಬಿಡಲಾಗಿದೆ. ಅಕ್ರಮ ಅಕ್ಕಿ ಸಾಗಾಣಿಕೆಗೆ ಪೊಲೀಸರು ರಕ್ಷಣೆ ನೀಡಿದಂತೆ ಆಗಿದೆ. ಇದರ ಬಗ್ಗೆ ಸಮಗ್ರವಾದ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಶನಿವಾರ ನಗರದಲ್ಲಿ ನಂಬರ್ ಇಲ್ಲದ ಜೀಪಿನಲ್ಲಿ ಅಕ್ಕಿಯನ್ನು ಸಾಗಾಣಿಕೆ ಮಾಡುತ್ತಿದ್ದಾಗ ಅದನ್ನು ತಡೆದು ಪೊಲೀಸ ಠಾಣೆಯ ಎದುರುಗಡೆ ತಂದು ನಿಲ್ಲಿಸಿದೆವು. ಜೀಪ್‌ನಲ್ಲಿ ಸುಮಾರು 60 ಚೀಲ ಅಕ್ಕಿಯ ಮೂಟೆಗಳು ಇದ್ದವು. ತಪಾಸಣೆ ಮಾಡುತ್ತೇವೆ ಎಂದು ಒಳ ಹೊದ ಪೊಲೀಸ ಸಿಬ್ಬಂದಿ ಸರಿಯಾದ ವಿಚಾರಣೆ ಹಾಗೂ ತನಿಖೆ ಮಾಡದೆ ವಾಹನ ಬಿಡುಗಡೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ಆಹಾರ ನಿರೀಕ್ಷಕರು ಹಾಗೂ ಶಹಾಪುರ ಠಾಣೆಯ ಪೊಲೀಸ್ ಅಧಿಕಾರಿ ಶಾಮೀಲಾಗಿ ಅಕ್ರಮ ಮುಚ್ಚಿ ಹಾಕುತ್ತಿದ್ದಾರೆ. ಜೀಪನ್ನು ತರಾತುರಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಕೊನೆ ಪಕ್ಷ ಆಹಾರ ನಿರೀಕ್ಷಕರಿಂದ ದೂರು ಪಡೆದುಕೊಂಡು ಎಫ್.ಐ.ಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಬಹುದಿತ್ತು. ಈಗ ಜೀಪಿನಲ್ಲಿ ಇರುವ ಅಕ್ಕಿ ಪಡಿತರ ಹಂಚಿಕೆಗೆ ಸಂಬಂಧಿಸಿದವು ಅಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಇದು ಪೊಲೀಸ್ ಹಾಗೂ ಆಹಾರ ನಿರೀಕ್ಷಕರ ಕರ್ತವ್ಯ ಲೋಪವಾಗಿದೆ ಎಂದು ಅವರು ಆರೋಪಿಸಿದರು.

ADVERTISEMENT

ಶಹಾಪುರ ಠಾಣೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ದಾಖಲೆಗೆ ಪೂರಕವಾಗಿ ತೆಗೆದುಕೊಂಡು ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

***

ಅಕ್ಕಿ ಸಮೇತ ಠಾಣೆಗೆ ಹೋದೆ. ಪಡಿತರ ಅಕ್ಕಿ ಅಲ್ಲವೆಂದು ತಿಳಿಸಿದರು. ದೂರು ನೀಡದೆ ವಾಪಸ್ಸು ಬಂದೆ. ಪೊಲೀಸರು ಸರಿಯಾದ ವಿಚಾರಣೆ ಮಾಡಲಿಲ್ಲ.
ವಿಜಯರಡ್ಡಿ, ಆಹಾರ ನಿರೀಕ್ಷಕ, ಶಹಾಪುರ

***

ಶಹಾಪುರ ಠಾಣೆಗೆ ಯಾವುದೇ ವಾಹನ ತಂದಿಲ್ಲ. ಠಾಣೆಯ ಹೊರಗಡೆ ನಿಂತು ಆಹಾರ ನಿರೀಕ್ಷಕರು ಜೊತೆ ಮಾತನಾಡಿ ವಾಹನ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ. ಸಿ.ಸಿ ಕ್ಯಾಮರದಲ್ಲಿ ಇದನ್ನು ಪರಿಶೀಲಿಸಲಾಗುವುದು
ವೆಂಕಟೇಶ ಉಗಿಬಂಡಿ, ಡಿವೈಎಸ್ಪಿ, ಸುರಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.