ADVERTISEMENT

ಶಹಾಪುರ: ₹43 ಸಾವಿರ ದಂಡ ವಸೂಲಿ

ಲಾಕ್‌ಡೌನ್ ನಿಯಮ ಉಲ್ಲಘಿಸಿದವರಿಂದ 20 ವಾಹನ ಜಪ್ತಿ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 16:02 IST
Last Updated 30 ಏಪ್ರಿಲ್ 2021, 16:02 IST
ಶಹಾಪುರ ನಗರದ ಬೀದರ್- ಶ್ರೀರಂಗಪಟ್ಟಣದ ರಾಜ್ಯ ಹೆದ್ದಾರಿ ಅಕ್ಕಪಕ್ಕದ ಅಂಗಡಿ ಬಂದ್ ಆಗಿರುವುದು
ಶಹಾಪುರ ನಗರದ ಬೀದರ್- ಶ್ರೀರಂಗಪಟ್ಟಣದ ರಾಜ್ಯ ಹೆದ್ದಾರಿ ಅಕ್ಕಪಕ್ಕದ ಅಂಗಡಿ ಬಂದ್ ಆಗಿರುವುದು   

ಶಹಾಪುರ: ನಗರದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ವಾಹನ ಸಂಚಾರ ಓಡಾಟವನ್ನು ಬಿಗಿಗೊಳಿಸಿದ್ದು, ಶುಕ್ರವಾರ ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ನೇತೃತ್ವದಲ್ಲಿ ನಿಯಮಗಳನ್ನು ಮೀರಿ ರಸ್ತೆಗೆ ಇಳಿದ 20ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿ ನಂತರ ದಂಡ ವಸೂಲಿ ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ಶಹಾಪುರ ಠಾಣೆಯ ಪಿಎಸ್ಐ ಚಂದ್ರಕಾಂತ ಮೆಕಾಲೆ ತಿಳಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ನಗರಸಭೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಮಾಸ್ಕ್ ಹಾಕದವರಿಗೆ ಹಾಗೂ ನಿಯಮ ಪಾಲನೆ ಮಾಡದ ವ್ಯಕ್ತಿಗಳಿಂದ ದಂಡ ವಸೂಲಿ ಮಾಡಿದೆ. ಶುಕ್ರವಾರ ₹43 ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದು ಪೌರಾಯುಕ್ತ ರಮೇಶ ಪಟ್ಟೆದಾರ ತಿಳಿಸಿದ್ದಾರೆ.

ನಗರಸಭೆ ಸಿಬ್ಬಂದಿ ಇಬ್ಬಗೆ ನೀತಿ: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಜಾರಿಗೊಳಿಸುವ ನೆಪದಲ್ಲಿ ನಗರಸಭೆ ಸಿಬ್ಬಂದಿ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆ ಎಂದು ನಗರದ ಅಂಗಡಿಗಳ ಮಾಲೀಕರು ಆರೋಪಿಸಿದ್ದಾರೆ.

ADVERTISEMENT

ನಿಗದಿಪಡಿಸಿದ ಅವಧಿ ಮುಕ್ತಾಯವಾದ ಬಳಿಕ ಬಟ್ಟೆ ವ್ಯಾವಾರಿಗಳು ಅಂಗಡಿಯ ಹಿಂದಿನ ಬಾಗಿಲಿನಿಂದ ಬಟ್ಟೆ ವ್ಯಾಪಾರವನ್ನು ಮಾಡುತ್ತಿದ್ದಾರೆ. ಅಲ್ಲದೆ ಕೆಲ ಪ್ರಭಾವಿ ವ್ಯಾಪಾರಿಗಳು ಕೋವಿಡ್ ನಿಯಮ ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿದ್ದರೂ ನಗರಸಭೆ ಸಿಬ್ಬಂದಿ ಯಾವುದೆ ಕ್ರಮ ತೆಗೆದುಕೊಳ್ಳದೆ ಮೌನವಹಿಸಿದ್ದಾರೆ. ಆದರೆ ಅದೆ ರಸ್ತೆ ಬದಿಯ ವ್ಯಾಪಾರ ಮಾಡಿ ಒಪ್ಪತ್ತಿನ ಚೀಲ ತುಂಬಿಸಿಕೊಳ್ಳಲು ಹೆಣಗಾಡುತ್ತಿರುವ ವ್ಯಾಪಾರಿಗಳ ಮೇಲೆ ಪೊಲೀಸರು ಲಾಠಿ ಬೀಸಿದರೆ, ನಗರಸಭೆ ಸಿಬ್ಬಂದಿ ತಳ್ಳು ಬಂಡಿಯನ್ನು ಹಾಗೂ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ರಸ್ತೆಬದಿ ವ್ಯಾಪಾರಿಗಳು ಆರೋಪಿಸಿದರು.

ನಗರಸಭೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ದಂಡ ವಸೂಲಿ ಮಾಡುತ್ತಿದ್ದಾರೆ. ಒಂದು ಮಳಿಗೆಗೆ ₹25 ಸಾವಿರ ದಂಡ ಹಾಕಿದರೆ, ಮತ್ತೊಂದು ಅಂಗಡಿಗೆ ಅಲ್ಪ ದಂಡವನ್ನು ಹಾಕಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಟ್ಟೆ ಅಂಗಡಿಯ ಮಾಲೀಕರೊಬ್ಬರು ತಿಳಿಸಿದರು.

ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹರಡುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ತಾಲ್ಲೂಕು ಆಡಳಿತ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನಗರದ ಜನರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.