ADVERTISEMENT

ಶಹಾಪುರ ನಗರಕ್ಕೆ 3 ದಿನಕ್ಕೊಮ್ಮೆ ನೀರು

ದುರಸ್ತಿಯಾಗದ ನೀರು ಶುದ್ಧೀಕರಣ ಘಟಕ; ಹಲವು ವಾರ್ಡ್‌ಗಳಲ್ಲಿ ತೀವ್ರ ತೊಂದರೆ

ಟಿ.ನಾಗೇಂದ್ರ
Published 8 ಮೇ 2021, 3:47 IST
Last Updated 8 ಮೇ 2021, 3:47 IST
ಶಹಾಪುರ ನಗರದ ಫಿಲ್ಟರ್‌ಬೆಡ್ ಹತ್ತಿರದ ನೀರು ಶುದ್ಧೀಕರಣ ಘಟಕ ಸ್ಥಗಿತಗೊಂಡಿದೆ
ಶಹಾಪುರ ನಗರದ ಫಿಲ್ಟರ್‌ಬೆಡ್ ಹತ್ತಿರದ ನೀರು ಶುದ್ಧೀಕರಣ ಘಟಕ ಸ್ಥಗಿತಗೊಂಡಿದೆ   

ಶಹಾಪುರ: ಭೀಮಾ ನದಿಯಿಂದ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವ ಯತ್ನ ಹಲವು ವರ್ಷದಿಂದ ಸಾಗುತ್ತಾ ಬಂದರೂ ಅನುಷ್ಠಾನ ಭಾಗ್ಯ ಮಾತ್ರ ದೊರೆತಿಲ್ಲ. ನಗರಕ್ಕೆ ನೀರು ಪೂರೈಸುವ ಏಕೈಕ ಜೀವ ಜಲವೆಂದರೆ ಫಿಲ್ಟರ್‌ಬೆಡ್ ಕೆರೆಯಲ್ಲಿ ಸಂಗ್ರಹಿಸಿದ ನೀರು. ನಗರದ 31 ವಾರ್ಡ್‌ಗಳ ನಿವಾಸಿಗಳು ಎರಡು ತಿಂಗಳಿಂದ ಇದರ ಮೇಲೆಯೆ ಅವಲಂಬಿತರಾಗಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡುತ್ತಿರುವುದರಿಂದ ತುಸು ಸಮಸ್ಯೆ ಉಂಟಾಗಿದೆ. ಆದರೆ ನಗರಸಭೆಯ ಸಿಬ್ಬಂದಿಯಿಂದ ನಿರ್ವಹಣೆಯ ಸಮಸ್ಯೆ ಸದಾ ಕಾಡುತ್ತಲಿದೆ. ನಿಗದಿಪಡಿಸಿದ ಸಮಯಕ್ಕೆ ಆಯಾ ವಾರ್ಡ್‌ಗೆ ನೀರು ಸರಬರಾಜು ಆಗುತ್ತಿಲ್ಲ. ಪೈಪ್‌ ಒಡೆದಿದೆ. ಮೋಟಾರ ದುರಸ್ತಿ ಹೀಗೆ ಹಲವು ರಗಳೆಯಿಂದ ಜನತೆ ಬೇಸಿಗೆ ಕಾಲದಲ್ಲಿ ನೀರಿನ ಬವಣೆ ಎದುರಿಸುವಂತೆ ಆಗಿದೆ.

ಮಾರ್ಚ್ 2ರಂದು ಜಿಲ್ಲಾಧಿಕಾರಿ ಡಾ.ಆರ್.ರಾಗಪ್ರಿಯ ಅವರು ನಗರಸಭೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದರು. ಆದರೆ ಇಂದಿಗೂ ಕೆಟ್ಟು ನಿಂತಿರುವ ನೀರು ಶುದ್ಧಿಕರಣ ಘಟಕವನ್ನು ದುರಸ್ತಿಗೊಳಿಸಿಲ್ಲ. ಅಧಿಕಾರಿಗಳು ಕಾಟಾಚಾರಕ್ಕೆ ಒಂದಿಷ್ಟು ಬ್ಲಿಚಿಂಗ್ ಪೌಡರ ಹಾಕಿ ಕೈ ತೊಳೆದುಕೊಳ್ಳುತ್ತಾರೆ. ಕೆ.ಇ.ಬಿಯಿಂದ ನಿರಂತರವಾಗಿ ವಿದ್ಯುತ್ ಸಂಪರ್ಕ ಜೋಡಣೆ ಮಾಡುವಂತೆ ಹಲವು ವರ್ಷದಿಂದ ಹೇಳುತ್ತಿದ್ದರೂ ಇಂದಿಗೂ ಅನುಷ್ಠಾನಗೊಂಡಿಲ್ಲ. ಯಾರ ಮುಂದೆ ಹೇಳಬೇಕು ನಮ್ಮ ಗೋಳು ಎಂದು ಪ್ರಶ್ನಿಸುತ್ತಾರೆ ನಗರದನಿವಾಸಿ ಅಮರೇಶ.

ADVERTISEMENT

ಅದರಲ್ಲಿ ವಾರ್ಡ್ ನಂ.2, 3, 8, 10, 14, 16 ಹಾಗೂ 20ರಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸಾಕಷ್ಟು ಬಾರಿ ನೀರಿನ ಬವಣೆ ಎದುರಿಸುತ್ತಿರುವ ಜನತೆ ನಗರಸಭೆಗೆ ಆಗಮಿಸಿ ಮನವಿ ಸಲ್ಲಿಸಿದ್ದು ಆಗಿದೆ. ಆದರೆ ಸ್ಪಂದನೆ ಮಾತ್ರ ಶೂನ್ಯವಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಯಾರು ಮುಂದಾಗುತ್ತಿಲ್ಲ ಎಂದು ಚಾಂದಪಾಶ ಬೇಸರ ವ್ಯಕ್ತಪಡಿಸಿದ್ದಾರೆ.

ನಗರಸಭೆಯ ವ್ಯಾಪ್ತಿಯಲ್ಲಿ ನಾಗರ ಹಾಗೂ ಮಾವಿನ ಕೆರೆ ಇವೆ. ಕೆರೆಯಲ್ಲಿ ನೀರು ಸಂಗ್ರಹವಾಗಿದ್ದರಿಂದ ಪ್ರಸಕ್ತ ಬಾರಿ ನೀರಿನ ತೊಂದರೆಯಾಗಿಲ್ಲ. ಬೊರೆವೆಲ್‌ನಲ್ಲಿ ನೀರು ಬರುತ್ತಲಿವೆ. 2 ಕೆರೆಯಲ್ಲಿ ಸದಾ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳಬೇಕು. ಕೆರೆ ಸಂರಕ್ಷಣೆಗೆ ಮುಂದಾಗುವುದು ಅಗತ್ಯವಾಗಿದೆ ಎನ್ನುತ್ತಾರೆ ನಗರದ ನಿವಾಸಿ ಉಮೇಶ ಮುಡಬೂಳ.

‘ಕುಡಿವ ನೀರಿನ ಸಮಸ್ಯೆ ಬಾಧಿಸದು’

ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ. ತಾಲ್ಲೂಕಿನ ಚಾಮನಾಳ, ಗುಂಡಾಪುರ, ನಡಿಹಾಳ, ಚಂದಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರುತ್ತಿತ್ತು. ಶ್ರಮವಹಿಸಿ ನಡಿಹಾಳ ಕೆರೆಗೆ ನೀರು ತುಂಬಿಸಿದ್ದರಿಂದ ಅಂತರ್ಜಲಮಟ್ಟ ಹೆಚ್ಚಳವಾಗಿ ಬೊರವೆಲ್‌ನಲ್ಲಿ ನೀರು ಬಂದಿದೆ. ಸದ್ಯಕ್ಕೆ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾಧಿಸದು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.

ಅಲ್ಲದೆ ನಗರದಲ್ಲಿ ಕುಡಿಯುವ ನೀರಿಗಾಗಿ ₹90 ಲಕ್ಷ ಅನುದಾನ ನೀಡಲಾಗಿದೆ. 7 ವಾರ್ಡ್‌ಗಳನ್ನು ಹೊರತುಪಡಿಸಿ ಬೇರೆ ಕಡೆ ನೀರಿನ ಸಮಸ್ಯೆ ಇಲ್ಲ. ಕೆರೆಯಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಮುಂಜಾಗ್ರತಾ ಕ್ರಮವಾಗಿ ಮೂರು ದಿನಕ್ಕೆ ಒಮ್ಮೆ ಸರಬರಾಜು ಮಾಡಲಾಗುತ್ತಿದೆ. ಮೇ ಕೊನೆ ವಾರದಲ್ಲಿ ಮಳೆಯಾಗದಿದ್ದರೆ ಕಾಲುವೆ ಮೂಲಕ ನೀರು ಹರಿಸಲು ಪ್ರಾಮಾಣಿಕವಾಗಿ ಯತ್ನಿಸುವೆ. ಗ್ರಾಮೀಣ ಮತ್ತು ನಗರ ಪ್ರದೇಶದ ಜನತೆಯು ನೀರನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.