ಕೆಂಭಾವಿ: ಸಮೀಪದ ನಗನೂರ ಗ್ರಾಮದಲ್ಲಿ ಬುಧವಾರ ಶ್ರೀಶರಣಬಸವೇಶ್ವರರ 178ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ರಥೋತ್ಸವ ಭಕ್ತರ ಜಯ ಘೋಷಗಳ ಮಧ್ಯೆ ನೆರವೇರಿತು.
ಪೀಠಾಧಿಪತಿ ಶರಣಪ್ಪ ಶರಣರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಮುಂಜಾನೆಯಿಂದ ಸಂಜೆವರೆಗೆ ನಡೆದವು.
ಸಂಜೆ 6 ಘಂಟೆಗೆ ಶೃಂಗಾರಗೊಂಡಿದ್ದ ರಥಗಳಲ್ಲಿ ಶರಣಬಸವೇಶ್ವರರ ಮೂರ್ತಿಯನ್ನಿಟ್ಟು ಮೇಲೆ ಶಿಖರ ಏರುತ್ತಿದ್ದಂತೆ ಭಕ್ತರ ಜಯಕಾರ ಮುಗಿಲು ಮುಟ್ಟಿತು. ಪೀಠಾಧಿಪತಿ ಶರಣಪ್ಪ ಶರಣರು ರಥೋತ್ಸವಕ್ಕೆ ಚಾಲನೆ ನೀಡಿದರು.
ಮಕ್ಕಳು, ವೃದ್ಧರು, ಮಹಿಳೆಯರು ಹೊಸ ಬಟ್ಟೆ ತೊಟ್ಟು ಶರಣಬಸವೇಶ್ವರ ಪ್ರಾಂಗಣದಲ್ಲಿ ಮಧ್ಯಾಹ್ನ ಮೂರು ಗಂಟೆಯಿಂದಲೆ ಜಮಾವಣೆಗೊಂಡು ನಂತರ ನಡೆದ ರಥೋತ್ಸವವನ್ನು ಕಣ್ತುಂಬಿಕೊಂಡರು. ರಥೋತ್ಸವದ ನಂತರ ಭಕ್ತರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು. ತೇರಿಗೆ ಹಿಡಿಗಾಯಿಗಳನ್ನು ಒಡೆದು ಹರಕೆ ತೀರಿಸಿದರು. ನಗನೂರ-ಖಾನಾಪೂರ ಸೇರಿದಂತೆ ಸುಮುತ್ತಲಿನ ಅನೇಕ ಗ್ರಾಮಗಳ ಭಕ್ತರು ತಂಡೋಪತಂಡವಾಗಿ ಬರುತ್ತಿದ್ದ ದೃಶ್ಯ ಸಾಮನ್ಯವಾಗಿತ್ತು.
ದನಗಳ ಜಾತ್ರೆಗೆ ಚಾಲನೆ: ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಬೃಹತ್ ರಾಸುಗಳ ಸಂತೆಗೆ ದಾಸೋಹ ಪೀಠದ ಪೀಠಾಧಿಪತಿ ಶರಣಪ್ಪ ಶರಣರು ಚಾಲನೆ ನೀಡಿದರು. ಹತ್ತು ದಿನಗಳು ನಡೆಯುವ ದನಗಳ ಸಂತೆಗೆ ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಂದ ವಿವಿಧ ತಳಿಗಳ ರಾಸುಗಳು ಮಾರಾಟ ಇಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.