ಹುಣಸಗಿ: ‘ದೇಶ ಎಲ್ಲ ಜನತೆಯ ಹೊಟ್ಟೆ ತುಂಬಿಸುವ ಕಾರ್ಯದಲ್ಲಿ ರೈತರು ಹಗಲಿರುಳು ಮಳೆ, ಗಾಳಿ ಎನ್ನದೇ ಬೆವರು ಸುರಿಸಿ ದುಡಿಯುತ್ತಾರೆ. ಅವರ ಸೇವೆ ಹಾಗೂ ಕೊಡುಗೆ ಅನನ್ಯವಾದದ್ದು’ ಎಂದು ದುರದುಂಡೇಶ್ವರ ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಹೊರವಲಯದಲ್ಲಿ ರೈತ ಮುಖಂಡ ಮಲ್ಲಣ್ಣ ಆರಲಗಡ್ಡಿ ಜಮೀನಿನಲ್ಲಿ ಹಮ್ಮಿಕೊಂಡಿದ್ದ ಕೃಷಿ ವಿಚಾರ ಸಂಕಿರಣ ಹಾಗೂ ತಾಲ್ಲೂಕಿನ ವಿವಿಧೆಡೆ ಶಿಕ್ಷಣಕ್ಕಾಗಿ ಭೂದಾನ ಮಾಡಿದ ರೈತರಿಗೆ ಸನ್ಮಾನ ಮತ್ತು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
‘ದೇಶದ ಪ್ರಗತಿಗೆ ಶಿಕ್ಷಣ ಹಾಗೂ ಕೃಷಿ ಪ್ರಮುಖ ಪಾತ್ರ ವಹಿಸುತ್ತದೆ. ಸುಶಿಕ್ಷಿತ ರೈತ ಯಾವತ್ತೂ ತೊಂದರೆಗೆ ಸಿಲುಕಲಾರ’ ಎಂದು ಪ್ರತಿಪಾದಿಸಿದರು.
ಕಲಬುರಗಿ ಕೇಂದ್ರ ಕೃಷಿ ಸಂಶೋಧನಾ ನಿರ್ದೇಶಕರಾದ ಬಿ.ಎಂ. ದೊಡ್ಡಮನಿ ಮಾತನಾಡಿ, ರೈತರು ಮೊದಲು ತಮ್ಮ ಜಮೀನಿನ ಮಣ್ಣಿನ ಗುಣ ಲಕ್ಷಣ ಹಾಗೂ ಅದರಲ್ಲಿನ ಕೊರತೆಗಳ ಕುರಿತು ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ಕೃಷಿಯಲ್ಲಿ ಏನಾದರೂ ಹೊಸತನ ಕಂಡುಕೊಳ್ಳಲು ಸಾಧ್ಯ ಎಂದರು.
ಮಾಳನೂರು ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ವಿ.ಎಸ್. ಪಲ್ಲೇದ ಹಾಗೂ ವಿಜ್ಞಾನಿ ಸಿ.ವಿ ಗಜೇಂದ್ರ ಮಾತನಾಡಿದರು.
ಭೀಮರಾಯನ ಗುಡಿಯ ಕೃಷಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ದಯಾನಂದ ಸಾತಿಹಾಳ, ಕೆ.ವಿ. ಪ್ರಕಾಶ, ಆನಂದ ಪೊಲೀಸ್‌ಪಾಟೀಲ ಹಾಗೂ ಅಣ್ಣಾರಾಯ ತಳವಾರ ಮತ್ತು ಎಸ್.ಜಿ ಹಂಚಿನಾಳ ಇತರರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾಳನೂರು ಕೃಷಿ ಸಂಶೋದನಾ ಕೇಂದ್ರದಿಂದ ಡ್ರೋನ್ ಮೂಲಕ ಸಿಂಪಡಿಸಬಹುದಾದ ಕೀಟನಾಶಕ ಹಾಗೂ ಯಂತ್ರಗಳ ಬಳಸುವಿಕೆಯ ಕುರಿತು ಮಾಹಿತಿ ನೀಡಿದರು.
ಕೊಡೇಕಲ್ಲ ಮಹಲಿನ ಮಠದ ವೃಷಭೇಂದ್ರ ಅಪ್ಪ ನೇತೃತ್ವವಹಿಸಿದ್ದರು. ಕಾರ್ಯಕ್ರಮದಲ್ಲಿ ಹುಣಸಗಿ ತಾಲ್ಲೂಕಿನ ವಿವಿಧಡೆ ಶಿಕ್ಷಣಕ್ಕಾಗಿ ಭೂಧಾನ ಮಾಡಿದ ರೈತರನ್ನು ಗೌರವಿಸಲಾಯಿತು.
ಬಿ.ಬಿ. ಬಿರಾದಾರ, ಗುರುಪುತ್ರ ಅಥಣಿ, ಶರಣಪ್ಪ ಧನ್ನೂರ, ಗುರಣ್ಣ ಧನ್ನೂರ, ಸಂಗನಗೌಡ ಪೊಲೀಸ್‌ಪಾಟೀಲ, ನಾಗಣ್ಣ ಬಿರಾದಾರ, ಶಿವಣ್ಣ ಸಾತಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.
ಭಾಗಣ್ಣ ಅರ್ನಾಡ ನಿರೂಪಿಸಿದರು. ಮಲ್ಲಣ್ಣ ಸ್ವಾಗತಿಸಿದರು. ಮುತ್ತು ಬಿರಾದಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.