ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಗ್ರಹಣ ಕಣ್ತುಬಿಂಕೊಂಡ ಜನ

ಮೌಢ್ಯತೆಗೆ ಪ್ರಗತಿಪರರ ವಿರೋಧ, ಹೋಮ ನೆರವೇರಿಸಿದ ಪೂಜಾರಿಗಳು, ಉಪಾಹಾರ ಸೇವಿಸಿದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 11:44 IST
Last Updated 27 ಡಿಸೆಂಬರ್ 2019, 11:44 IST
ಯಾದಗಿರಿ ಜಿಲ್ಲಾಡಳಿತ ಅಧಿಕಾರಿಗಳು ಚಹಾ ಸೇವಿಸುತ್ತ ಗ್ರಹಣ ವೀಕ್ಷಿಸಿದರು
ಯಾದಗಿರಿ ಜಿಲ್ಲಾಡಳಿತ ಅಧಿಕಾರಿಗಳು ಚಹಾ ಸೇವಿಸುತ್ತ ಗ್ರಹಣ ವೀಕ್ಷಿಸಿದರು   

ಯಾದಗಿರಿ:ವೈಜ್ಞಾನಿಕ ಯುಗದಲ್ಲಿಯೂ ಮೌಢ್ಯತೆ ಆಚರಣೆಗೆ ಗುರುವಾರ ಸಂಭವಿಸಿದ ಖಗ್ರಾಸ್‌ ಸೂರ್ಯಗ್ರಹಣಕ್ಕೆ ನಗರ ಸಾಕ್ಷಿಯಾಯಿತು. ಗ್ರಹಣ ಇರುವುದನ್ನು ಖಚಿತ ಪಡಿಸಿಕೊಂಡ ಜನರು ಬೆಳಿಗ್ಗೆ 8 ರಿಂದ 11.06 ನಿಮಿಷದವರೆಗೆ ಯಾವುದೇ ಕೆಲಸ ಮಾಡದೇ ತಟಸ್ಥರಾಗಿ ಉಳಿದರು. ಗ್ರಹಣ ಆರಂಭವಾಗುತ್ತಲೇ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದರು.

ಗ್ರಹಣ ವೀಕ್ಷಣೆಗೆ ಜಿಲ್ಲಾಡಳಿತ ವ್ಯವಸ್ಥೆ: ಸಾರ್ವಜನಿಕರು ಖಗ್ರಾಸ್‌ ಗ್ರಹಣ ವೀಕ್ಷಿಸಲು ಜಿಲ್ಲಾಡಳಿತ, ಕಲಬುರ್ಗಿ ಜಿಲ್ಲೆಯ ವಿಜ್ಞಾನ ಪರಿಷತ್ತಿನ ಸಹಯೋಗದಲ್ಲಿ ಜಿಲ್ಲಾಡಳಿತ ಭವನ ಆವರಣದಲ್ಲಿ ಅನುಕೂಲ ಮಾಡಿಕೊಡಲಾಗಿತ್ತು. ಸಾರ್ವಜನಿಕರು ಸೋಲಾರ್ ಫಿಲ್ಟರ್ ಗ್ಲಾಸ್, ಟೆಲಿಸ್ಕೋಪ್, ಸೌರ ಕನ್ನಡದ ಮೂಲಕ ಗ್ರಹಣ ಗ್ರಹಣ ವೀಕ್ಷಣೆ ಮಾಡಿದರು.

ನಗರದ ವಿವಿಧ ಶಾಲೆಯ ಮಕ್ಕಳು ಹಾಗೂ ಸಾರ್ವಜನಿಕರು ಆಗಮಿಸಿ ಗ್ರಹಣ ವೀಕ್ಷಣೆ ಮಾಡಿ ಅಚ್ಚರಿ ಘಟನೆಯನ್ನು ಕಣ್ಣು ತುಂಬಿಕೊಂಡರು. ಗ್ರಹಣ ಸಮಯದಲ್ಲೇ ಬಿಸ್ಕಿಟ್ ಹಾಗೂ ಚಹಾ ಸೇವನೆ ಮಾಡಿ ಜಾಗೃತಿ ಮೂಡಿಸಿದರು.

ADVERTISEMENT

ಅಪಾಯದ ನಡುವೆ ನದಿಯಲ್ಲಿ ಮುಳುಗಿದ ಜನ:
ಗ್ರಹಣ ವೀಕ್ಷಣೆಗೆ ಜಿಲ್ಲೆಯ ಕೃಷ್ಣಾ ಹಾಗೂ ಭೀಮಾ ನದಿಯಲ್ಲಿ ಮೊಸಳೆಗಳ ಕಾಟದ ಆತಂಕದಲ್ಲಿಯೇ ಜನರು ಹಾಗೂ ಮಂತ್ರವಾದಿಗಳು, ದೈವ ಭಕ್ತರು ನದಿಯೊಳಗೆ ಮುಳುಗಿ ಗ್ರಹಣ ಆರಂಭದಿಂದ ಮೋಕ್ಷೆ ಆಗುವವರಗೆ ಜಪತಪದಲ್ಲಿ ತೊಡಗಿದ್ದರು. ನಗರದ ಭೀಮಾ ನದಿ ದಡದಲ್ಲಿ ಪವಿತ್ರ ಸ್ನಾನ ಮಾಡಿ ಲೋಕ ಕಲ್ಯಾಣಕ್ಕಾಗಿ ರುದ್ರಹೋಮ ಮಾಡಿರುವುದು ಕಂಡು ಬಂತು.

ದೇವಸ್ಥಾನಗಳು ಬಂದ್‌:ಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ಮೈಲಾಪುರದ ಮೈಲಾರಲಿಂಗೇಶ್ವರ ದೇವಸ್ಥಾನ, ಬಾಲಾಜಿ, ವೇಣುಗೋಪಾಲ ಸ್ವಾಮಿ‌ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳ ಬಾಗಿಲು ಮುಚ್ಚಲಾಗಿತ್ತು. ಗ್ರಹಣ ಬಿಡುವವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಿಲ್ಲ.

ಶಾಲೆ ಮಕ್ಕಳು ಹಾಗೂ ಸಾರ್ವಜನಿಕರು ಆಗಮಿಸಿ ಗ್ರಹಣ ವೀಕ್ಷಣೆ ಮಾಡಿ ಅಚ್ಚರಿ ಘಟನೆ ಕಣ್ಣು ತುಂಬಿಕೊಂಡರು.ಗ್ರಹಣ ಕಾಲದಲ್ಲೇ ಬಿಸ್ಕಿಟ್ ಹಾಗೂ ಚಹಾ ಸೇವನೆ ಮಾಡಿ ಜಾಗೃತಿ ಮಾಡಲಾಯಿತು.

‘ಗ್ರಹಣ ಪ್ರಕೃತಿಯಲ್ಲಿ ನಡೆಯುವ ಸಹಜ ಪ್ರಕ್ರಿಯೆವಾಗಿದೆ. ಜನರು ಗ್ರಹಣ ಸಂದರ್ಭದಲ್ಲಿ ಮೌಢ್ಯತೆ ಆಚರಿಸಬಾರದು. ಊಟ ಮಾಡಬಾರದು, ಸ್ನಾನ ಮಾಡಬಾರದು ಎಂಬುದಕ್ಕೆ ಕಿವಿಗೊಡಬಾರದು. ಗ್ರಹಣ ಆಕಸ್ಮಿಕವಾಗಿ ಸಂಭವಿಸುತ್ತದೆ. ಅದರಿಂದ ಯಾವುದೇ ತೊಂದರೆಗಳು ಆಗುವುದಿಲ್ಲ. ಜನರು ಮೌಢ್ಯತೆಯಿಂದ ಹೊರಬರಬೇಕು’ ಎಂದು ಕಲಬುರ್ಗಿ ವಿಜ್ಞಾನ ಕೇಂದ್ರದ ಅಧಿಕಾರಿ ಸಾಬಯ್ಯ ಹೇಳಿದರು.

‘ಸೂರ್ಯ ಮತ್ತು ಭೂಮಿ ಮಧ್ಯೆ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ಪ್ರಕೃತಿಯ ನಿಯಮ. ಈ ಬಗ್ಗೆ ಸಾರ್ವಜನಿಕರು ಆತಂಕ ಪಡದೆ ಎಂದಿನಂತೆ ನಿತ್ಯದ ಕೆಲಸ ಮಾಡಬೇಕು’ ಎಂದು ಕಲಬುರ್ಗಿಯ ಜಿಲ್ಲಾ ವಿಜ್ಞಾನ ಕೇಂದ್ರದ ಸಾಬಣ್ಣ ಭೋಸಗಿ ಹೇಳಿದರು.

ಅಂಬೇಡ್ಕರ್‌ ನಗರ:
ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ನಗರದ ಊಡಲಮ್ಮ ದೇವಸ್ಥಾನದಲ್ಲಿ ಕಂಕಣ ಸೂರ್ಯಗ್ರಹಣ ನಿಮಿತ್ತ ಮಹಿಳೆಯರು ತಾಮ್ರದ ತಟ್ಟೆಯಲ್ಲಿ ನೀರು ಹಾಕಿ ಒಣಕೆ ನಿಲ್ಲಿಸಿ ಗ್ರಹಣ ಹಿಡಿದಿದೆಯೋ ಇಲ್ಲವೋ ಎಂದು ಪರೀಕ್ಷೀಸುತ್ತಿರುವುದು ಕಂಡು ಬಂತು. ಗ್ರಹಣ ಹಿಡಿದಾಗ ಒಣಕೆ ನಿಲ್ಲುತ್ತದೆ. ಗ್ರಹಣ ಬಿಡುವಾಗ ಒಣಕೆ ಬಿಳುತ್ತದೆ ಎಂಬುದು ಇವರ ನಂಬಿಕೆಯಾಗಿತ್ತು.

ಲಕ್ಷ್ಮಿ ಪೂಜಾರಿ, ರೇಣುಕಮ್ಮ ಮಾಳಿಕೇರಿ, ಗೌರಮ್ಮ ಮುಂಡರಕೇರಿ, ಶಾಂತಮ್ಮ, ಸಿದ್ದಮ್ಮ, ರತ್ನಮ್ಮ, ನಾಗಮ್ಮ, ರಾಜು ಪೂಜಾರಿ, ಹಣಮಂತ, ಸುಜ್ಞಾನ ಇದ್ದರು.

ಲಕ್ಷ್ಮಿ ನಗರ: ಇಲ್ಲಿನ ಲಕ್ಷ್ಮಿ ನಗರದಲ್ಲಿ ಸಾರ್ವಜನಿಕರು ಸಾಮೂಹಿಕವಾಗಿ ಸೂರ್ಯಗ್ರಹಣ ವೀಕ್ಷಿಸಿದರು. ಗ್ರಹಣ ವೀಕ್ಷಣೆಯಿಂದ ಕಣ್ಣಿಗೆ ತೊಂದರೆಯಾಗಬಾರದು ಎಂದು ವಿಜ್ಞಾನ ಶಿಕ್ಷಕ ಶೇಖರಪ್ಪ ಮಾಗ್ಯೇರಿ ಅವರು ವಿವಿಧ ಮಾದರಿಯ ಕನಡಕಗಳನ್ನು ಸಂಗ್ರಹಸಿ ಜನರಿಗೆ ಗ್ರಹಣ ನೋಡಲು ಅನಕೂಲ ಕಲ್ಪಿಸಿದರು.

ರುದ್ರಸ್ವಾಮಿ ಚಿಕ್ಕಮಠ, ವಿದ್ಯಾರ್ಥಿಗಳಾದ ಶಾಲಿನಿ ಚಿಕ್ಕಮಠ, ಶಶಾಂಕ ಸ್ವಾಮಿ ಪರಸನಹಳ್ಳಿ, ಶ್ವೇತಾ ಚಿಕ್ಕಮಠ, ಗಂಗಮ್ಮ ವಿಶ್ವಕರ್ಮ, ಲಕ್ಷ್ಮಿ, ಪ್ರಿಯಾಂಕಾ ನವ್ಯ ವಿಶ್ವಕರ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.