ADVERTISEMENT

ಜುಲೈ 17ರಿಂದ ಜಯತೀರ್ಥರ ಆರಾಧನಾ ಮಹೋತ್ಸವ

ತೋಟೇಂದ್ರ ಎಸ್ ಮಾಕಲ್
Published 16 ಜುಲೈ 2022, 7:47 IST
Last Updated 16 ಜುಲೈ 2022, 7:47 IST
ಶ್ರೀ ಉತ್ತರಾದಿ ಮಠದ ಪೀಠಾಧಿಪತಿ ಶ್ರೀ 1008 ಸತ್ಯಾತ್ಮತೀರ್ಥರು
ಶ್ರೀ ಉತ್ತರಾದಿ ಮಠದ ಪೀಠಾಧಿಪತಿ ಶ್ರೀ 1008 ಸತ್ಯಾತ್ಮತೀರ್ಥರು   

ಯರಗೋಳ (ಯಾದಗಿರಿ ಜಿಲ್ಲೆ): ಯರಗೋಳ ಸೇರಿದಂತೆ ಕಲಬುರಗಿ ಜಿಲ್ಲೆಯ ಮಳಖೇಡದ ಶ್ರೀ ಜಯತೀರ್ಥರ ಮೂಲ ಬೃಂದಾವನ ಸನ್ನಿಧಾನದಲ್ಲಿ ಜುಲೈ 17,18,19 ರಂದು ವೈಭವದ ಜಯತೀರ್ಥರ ಆರಾಧನಾ ಮಹೋತ್ಸವ ನಡೆಯಲಿದೆ.

ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥರ ಸಾನ್ನಿಧ್ಯದಲ್ಲಿ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜುಲೈ 17ರಂದುಯರಗೋಳದಲ್ಲಿ ಪೂರ್ವಾರಾಧನೆ, 18ರಂದು ಮಳಖೇಡದಲ್ಲಿ ಮಧ್ಯಾರಾದನೆ, 19 ರಂದು ಉತ್ತರರಾಧನೆ ಜರುಗಲಿವೆ.

ನಿತ್ಯವೂ ಮೂಲ ರಾಮದೇವರ ಪೂಜೆ, ಅಕ್ಷೋಭ್ಯ ತೀರ್ಥರು ಹಾಗೂ ರಘುನಾಥ ತೀರ್ಥರ ಬೃಂದಾವನ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಜರಗಲಿವೆ.

ADVERTISEMENT

ಕಲಾವಿದರಿಂದ ದಾಸವಾಣಿ, ಪಂಡಿತರ ಉಪನ್ಯಾಸ, ಶ್ರೀಪಾದಂಗಳವರು ಅನುಗ್ರಹ ಸಂದೇಶ ನೀಡಲಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಜಯತೀರ್ಥರ ಅನುಗ್ರಹಕ್ಕೆ ಪಾತ್ರರಾಗಲು ಪ್ರಕಟಣೆ ತಿಳಿಸಿದೆ.

ಯರಗೋಳ ಗ್ರಾಮದಲ್ಲಿರುವ ಗುಹೆಯಲ್ಲಿ ಜಯತೀರ್ಥರು ಶ್ರೀ ಮಧ್ವರ ಗ್ರಂಥಗಳಿಗೆ ವ್ಯಾಖ್ಯಾನಿಸಿದ ಸ್ಥಳ

ಜಯತೀರ್ಥರ (ಟೀಕಾ ಚಾರ್ಯರ) ಪರಿಚಯ: ಕ್ರಿ. ಶ 13ನೇ ಶತಮಾನದಲ್ಲಿ ಮಹಾರಾಷ್ಟ್ರದ ಪಂಡರಾಪುರ ತಾಲ್ಲೂಕಿನ ಮಂಗಳ‌‌ವೇಡೆ ಎನ್ನುವ ಪುಟ್ಟ ಗ್ರಾಮದಲ್ಲಿ ದೇಶಪಾಂಡೆ ಮನೆತನದಲ್ಲಿ ಏಕೈಕ ಪುತ್ರನಾಗಿ ಜಯತೀರ್ಥರು ಜನಿಸಿದರು. ಇವರ ಬಾಲ್ಯದ ಹೆಸರು ದಂಡೋಪಂತ.‌ ಶ್ರೀಮಂತ ಮನೆತನದಲ್ಲಿ ಜನಿಸಿದ ಇವರು ಧಾರ್ಮಿಕ ಜೀವನದೆಡೆಗೆ ಮನಸ್ಸು ಮಾಡಿದರು. ಪುತ್ರನ ವರ್ತನೆಯನ್ನು ಕಂಡ ಹೆತ್ತವರು ಚಿಂತಿಸಿದರು. ಸಂಸ್ಕಾರವಂತ ಕುಟುಂಬದ ಕನ್ಯೆಯನ್ನು ನೋಡಿ ಮದುವೆ ಮಾಡಿದರು. ಮಗ ದಂಡೋಪಂತನಿಗೆ ಇದ್ಯಾವುದರ ಬಗ್ಗೆಯೂ ವ್ಯಾಮೋಹ ಇರಲಿಲ್ಲ. ತನ್ನ ಮನದ ಇಚ್ಛೆಯಂತೆ ಧಾರ್ಮಿಕ ಸೆಳೆತಕ್ಕೆ ಒಳಗಾಗಿ ಸಂಸಾರಿಕ ಜೀವನ ತ್ಯಜಿಸಿ, ಧಾರ್ಮಿಕ ಜೀವನದ ಕಡೆಗೆ ವಾಲಿದರು.

ಲೋಕೋದ್ಧಾರಕ್ಕಾಗಿ ಬಂದ ಮಗನನ್ನು ಸಂಸಾರಕ್ಕೆ ಇಳಿಸುವುದು ಅಪರಾಧವೆಂದು ಭಾವಿಸಿದ ತಂದೆ- ತಾಯಿ ಮಗನಿಗೆ 21 ವಯಸ್ಸಿನಲ್ಲಿ ಗುರುಗಳಾದ ಅಕ್ಷೋಭ್ಯತೀರ್ಥರಿಗೆ ಒಪ್ಪಿಸಿದರು. ಮಡದಿ, ಬಂಗಾರ, ಬೆಳ್ಳಿ ವೈಭವ ತೊರೆದರು. ಗುರುಗಳು ಶಿಷ್ಯನಿಗೆ ಸನ್ಯಾಸ ದೀಕ್ಷೆ ನೀಡಿ ಜಯತೀರ್ಥ ಎಂದು ಮರು ನಾಮಕರಣ ಮಾಡಿದರು.

ಗುರುಗಳ ಮಾರ್ಗದರ್ಶನದಂತೆ ಮಹಾರಾಷ್ಟ್ರದ ಸಂಧ್ಯಾವಳಿ ಎನ್ನುವ ಗ್ರಾಮದಲ್ಲಿ ದೀರ್ಘ ತಪಸ್ಸು ಮಾಡುವಾಗ ದುರ್ಗಾದೇವಿ ಪ್ರತ್ಯಕ್ಷಳಾದಳು. ಆಗ ಜಯತೀರ್ಥರು ದೇವಿಯ ಹತ್ತಿರ ಶ್ರೀ ಮಧ್ವರ ಗ್ರಂಥಗಳಿಗೆ ವ್ಯಾಖ್ಯಾನ ಮಾಡಲು ಲೇಖನಿ ಮತ್ತು ಸಾಧನವನ್ನು ಯಾಚಿಸಿದಾಗ ದೇವಿಯು ಶಿಷ್ಯನ ಭಕ್ತಿಗೆ ಅನುಗ್ರಹಿಸಿದಳು.

ತಮ್ಮ ಜೀವನದ ಪ್ರಧಾನ ಕಾರ್ಯಕ್ಕಾಗಿ ಪುಣ್ಯಕ್ಷೇತ್ರ ಯರಗೋಳ ಗ್ರಾಮಕ್ಕೆ ಆಗಮಿಸಿದರು. ಹಚ್ಚ ಹಸಿರು, ಕಲ್ಲುಬಂಡೆ, ದೊಡ್ಡಕೆರೆ, ಬೆಟ್ಟಗುಡ್ಡ, ಪ್ರಶಾಂತವಾದ ಸ್ಥಳದಲ್ಲಿರುವ ಗುಹೆಯಲ್ಲಿ 13 ವರ್ಷ ಸುದೀರ್ಘ ಅಧ್ಯಯನ ಮಾಡಿದರು. ಶಿಷ್ಯರು ತಂದ ಜೋಳದ ನುಚ್ಚನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ಪ್ರಸಾದವಾಗಿ ಸ್ವೀಕರಿಸಿದರು. ಮೂಲ ದೇವರ ಪೂಜೆ ನೆರವೇರಿಸಿ ಶ್ರೀ ಮಧ್ವರ 18 ಗ್ರಂಥಗಳಿಗೆ ವ್ಯಾಖ್ಯಾನ, 3 ಸ್ವತಂತ್ರ ಗ್ರಂಥಗಳು ರಚಿಸಿದರು. ಮಧ್ವಮತದ ಚೈತನ್ಯ ಜ್ಯೋತಿಯಾಗಿ ಬೆಳಗಿದರು. ಶ್ರೀ ಮಧ್ವರ ಗ್ರಂಥಗಳಿಗೆ ಟೀಕೆಗಳನ್ನು ಮಾಡಿ ಟೀಕಾ ಗುರುಪಾದರಾದರು ಎಂದು ಹಿನ್ನೆಲೆ ಇದೆ.

ಪ್ರತಿ ವರ್ಷ ಆಷಾಢ ಮಾಸದಲ್ಲಿ ಯರಗೋಳ ಗ್ರಾಮದಲ್ಲಿ ಪೂರ್ವಾರಾಧನೆ, ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದ ಜಯತೀರ್ಥರ ಮೂಲ ಬೃಂದಾವನದಲ್ಲಿ ಮಧ್ಯಾರಾಧನೆ ಮತ್ತು ಉತ್ತರರಾಧನೆ ಜರುಗುತ್ತದೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ಟೀಕಾರಾಯರ ದರ್ಶನ ಪಡೆದು ಪುನೀತರಾಗುತ್ತಾರೆ.

ಟೀಕಾರಾಯರು ವ್ಯಾಖ್ಯಾನಿಸಿದ ಕೃತಿಗಳು:ತತ್ತ್ವ ಸಾಂಖ್ಯ ನಾಟಿಕಾ, ತತ್ತ್ವ ವಿವೇಕತಿಕಾ, ತತ್ತೋವ ದ್ಯೋತತಿಕಾ,ವಿಷ್ಣು ತತ್ತ್ವ ನಿರ್ಣಯತಿಕಾ,ಮಾಯಾವಾದ ಖಾಂಡನಾಟಿಕಾ,ಪ್ರಪಂಚಮಿಥ್ಯತ್ವಾನುಮಾನಖಾಂಡನಾ, ಪ್ರಮಾಣಲಕ್ಷಣಾತಿಕಾ, ಕಥಾಲಕ್ಷಣವಿವರಣ, ಕರ್ಮ ನಿರ್ಣಯತಿಕಾ, ತತ್ತ್ವಪ್ರಕಾಶಿಕಾ, ನ್ಯಾಯ ಸುಧಾ, ನ್ಯಾಯ ವಿವರಣತಿಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.