ADVERTISEMENT

ಯರಗೋಳದಲ್ಲಿ ಜಯತೀರ್ಥರ ಸಂಭ್ರಮದ ಪೂರ್ವಾರಾಧನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 7:20 IST
Last Updated 17 ಜುಲೈ 2022, 7:20 IST
 ಜಯತೀರ್ಥರ ಪೂರ್ವಾರಾಧನೆ ಸಮಾರಂಭ
ಜಯತೀರ್ಥರ ಪೂರ್ವಾರಾಧನೆ ಸಮಾರಂಭ   

ಯರಗೋಳ (ಯಾದಗಿರಿ ಜಿಲ್ಲೆ): ಗ್ರಾಮದಲ್ಲಿ ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದ ಟೀಕಾಚಾರ್ಯರ ಪೂರ್ವಾರಾಧನೆ ಭಾನುವಾರ ಬಹು ವಿಜೃಂಭಣೆಯಿಂದ ಜರುಗಿತು.

ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮತೀರ್ಥರ ಪಾದಂಗಳವರು ಮಂಗಳಾರತಿ, ಮೂಲ ರಾಮದೇವರ ಪೂಜೆ, ತೀರ್ಥ, ಪ್ರಸಾದ, ಮಂತ್ರಾಕ್ಷತೆ, ತಪ್ತಮುದ್ರಾ ಧಾರಣೆ ನೆರವೇರಿಸಿ, ಆಶೀರ್ವಚನ ನೀಡಿದರು.

ಸಾವಿರಾರು ಸಂಖ್ಯೆಯ ಭಕ್ತರು ಟೀಕಾರಾಯರು ಗ್ರಂಥ ರಚಿಸಿದ ಗುಹೆಯ ದರ್ಶನ ಪಡೆದು ಪುನೀತರಾದರು. ಮಹಿಳಾ, ಪುರುಷ ಭಜನಾ ತಂಡದವರು ಹಾಡುಗಳನ್ನು ಹಾಡಿ ಭಕ್ತಿ ಸಮರ್ಪಿಸಿದರು.

ADVERTISEMENT

ಯುವಕರು, ಯುವತಿಯರು, ಮಕ್ಕಳು, ವೃದ್ಧರು ಹೊಸ ರೇಷ್ಮೆ ವಸ್ತ್ರಗಳನ್ನು ಧರಿಸಿ ಆಗಮಿಸಿದ್ದು, ವಿಶೇಷತೆ ಕಾಣಿಸಿತು.

ತುಂತುರು ಮಳೆಯ ನಡುವೆಯೂ, ನೂರಾರು ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದರು.‌ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ಆಗಮಿಸಿ ಗುಹೆಯಲ್ಲಿನ ಟೀಕಾರಾಯರ ದರ್ಶನ ಪಡೆದರು.

ಆರಾಧನೆಗೆ ಆಗಮಿಸಿದ ಭಕ್ತರಿಗೆ ಜಾಮೂನು, ಪೂರಿ, ಅನ್ನ, ಸಾಂಬಾರು, ಮಜ್ಜಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಕಲಬುರಗಿ ನಗರದ ಶ್ರೀ ಲಕ್ಷ್ಮಿ ನಾರಾಯಣ ಮತ್ತು ಹಂಸನಾಮಕ ಮತ್ತು ಶ್ರೀ ಪ್ರಶಾಂತ ಹನುಮಾನ ಪಾರಾಯಣ ಸಂಘದ ವತಿಯಿಂದ ಟೀಕಾಚಾರ್ಯಾರ ಗ್ರಂಥಾಲಯ ರಚನೆ ಸ್ಥಳವಾದ ಯರಗೋಳ ಬೆಟ್ಟದಲ್ಲಿ ಟೀಕಾಚಾರ್ಯಾರ ಪೂರ್ವಾರಾಧನೆಯ ನಿಮಿತ್ಯ ವಿಷ್ಣು ಸಹಸ್ರನಾಮ, ಸುಂದರಕಾಂಡ, ಶ್ರೀ ಜಯತೀರ್ಥ ಸುತ್ತಿ ಪಾರಾಯಣ ನಡೆಯಿತು.

ಪಾರಾಯಣ ಸಂಘದ ಸಂಚಾಲಕ ರವಿ ಲಾತೂರಕರ, ಅರ್ಚಕರ ಸಂಘದ ಅಧ್ಯಕ್ಷ ಗುಂಡಚಾರ್ಯ ನರಬೊಳಿ, ಶೇಷಮೂರ್ತಿ ಅವಧಾನಿ, ಜಗನ್ನಾಥ ಸಗರ, ಸಿ.ಎಂ. ಜೋಶಿ, ಪ್ರಾಣೇಶ್ ಆಚಾರ್ ಹುಣಸಗಿ, ಗೋಪಾಲಚಾರ್ ತೆಂಗಳಿ ಅನಿಲ್ ಕುಲಕರ್ಣಿ, ವಿನುತಾ ಎಸ್ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.